ಸಾರಾಂಶ
ಅಯೋಧ್ಯೆ: ಇಲ್ಲಿನ ಭವ್ಯ ರಾಮಮಂದಿರದಲ್ಲಿ ರಾಮನ ವಿಗ್ರಹವನ್ನು ಕಾಣುವ ಕೋಟ್ಯಂತರ ಭಕ್ತರ ಕನಸು ನಸನಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಜ.22ರಂದು ನೂತನ ರಾಮಮಂದಿರದಲ್ಲಿ ನಡೆಸಲಾಗುತ್ತಿರುವ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಗಳಿಗೆ ಮಂಗಳವಾರ ಇಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ಭಾಗವಾಗಿ ಮಂಗಳವಾರದಿಂದಲೇ ವಿವಿಧ ರೀತಿಯ ಪೂಜಾ ವಿಧಿಗಳನ್ನು ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಆರಂಭಿಸಲಾಗಿದೆ.
ಮೊದಲ ದಿನ 11 ಅರ್ಚಕರ ತಂಡ ಪ್ರಾಯಶ್ಚಿತ್ತ ಸಮಾರಂಭ ಮತ್ತು ದಶವಿಧ ಸ್ನಾನ ಕಾರ್ಯಕ್ರಮಗಳನ್ನು ನಡೆಸಿದೆ. ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಅವರ ಪತ್ನಿ ಉಷಾ ಮಿಶ್ರಾ ಅವರು ‘ಯಜಮಾನತ್ವ’ ವಹಿಸಿದ್ದರು.
ಈ ಕುರಿತು ಮಂಗಳವಾರ ಇಲ್ಲಿ ಮಾಹಿತಿ ನೀಡಿದ ರಾಮದೇಗುಲದ ಮುಖ್ಯ ಅರ್ಚಕರ ಆಚಾರ್ಯ ಸತ್ಯೇಂದ್ರ ದಾಸ್, ‘ಮಂಗಳವಾರದಿಂದ ಅನುಷ್ಠಾನ ಆರಂಭವಾಗಿದ್ದು, ಇದು ಜ.22ರವರೆಗೂ ನಡೆಯಲಿದೆ’ ಎಂದು ತಿಳಿಸಿದರು.
ಇನ್ನು ರಾಮಮಂದಿರ ನಿರ್ಮಾಣ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ‘ದೇಗುಲದ ಜ.22ರವರೆಗಿನ 1 ವಾರದ ಪೂಜಾ ವಿಧಿಗಳನ್ನು ಕಾಶಿಯ ಗಣೇಶ ಶಾಸ್ತ್ರಿ ದ್ರಾವಿಡ್ ಅವರ ಉಸ್ತುವಾರಿಯಲ್ಲಿ 121 ಆಚಾರ್ಯರು ನಡೆಸುತ್ತಿದ್ದಾರೆ.
ಕಾಶಿಯ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ಆಚಾರ್ಯರಾಗಿರಲಿದ್ದಾರೆ. ಜ.22ರ ಮಧ್ಯಾಹ್ನ 12.20ಕ್ಕೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ’ ಎಂದು ತಿಳಿಸಿದರು.
ಇಂದು ಏನು?
ಪ್ರಾಣಪ್ರತಿಷ್ಠಾಪನೆಯ 2ನೇ ದಿನವಾದ ಬುಧವಾರ ಮೊದಲಿಗೆ ವಿಘ್ನ ವಿನಾಶಕ ಗಣೇಶನಿಗೆ ಪೂಜೆ ಸಲ್ಲಿಸಿ ಬಳಿಕ ರಾಮಲಲ್ಲಾ ವಿಗ್ರಹದ ಪರಿಸರ ಪ್ರವೇಶ ಕಾರ್ಯಕ್ರಮ ನಡೆಸಲಾಗುವುದು. ಬಳಿಕ ತೀರ್ಥ ಪೂಜೆ ನಡೆಯಲಿದೆ.
‘ಪೂಜಿಸಲೆಂದೇ’ ಕನ್ನಡ ಗೀತೆಗೆ ಮೋದಿ ಮೆಚ್ಚುಗೆ
ಚೆನ್ನೈ: ಪ್ರಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಹಾಡಿದ್ದ ಕನ್ನಡ ಭಕ್ತಿಗೀತೆ ‘ಪೂಜಿಸಲೆಂದೇ..’ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಾಕಿ ಮೆಚ್ಚುಗೆ ಸೂಚಿಸಿದ್ದಾರೆ.