ಸಾರಾಂಶ
ಮುಂಬೈ: ಭಾರತೀಯ ರಿಸರ್ವ್ಸ್ ಬ್ಯಾಂಕ್, ಶುಕ್ರವಾರ ತನ್ನ ದ್ವೈಮಾಸಿಕ ಸಾಲ ನೀತಿಯನ್ನು ಪ್ರಕಟಿಸಿದ್ದು ರೆಪೋ ದರವನ್ನು ಶೇ.6.5ರಲ್ಲೇ ಮುಂದುವರೆಸಲು ನಿರ್ಧರಿಸಿದೆ.
ರೆಪೋ ದರವನ್ನು ಹೀಗೆ ಇದೇ ಮಟ್ಟದಲ್ಲಿ ಮುಂದುವರೆಸಲು ಆರ್‌ಬಿಐ ನಿರ್ಧರಿಸಿರುವುದು ಇದು ಸತತ 7ನೇ ಸಲ ಎಂಬುದು ವಿಶೇಷ. ಹೀಗಾಗಿ ಗೃಹ, ವಾಣಿಜ್ಯ ಸಾಲದ ಮೇಲಿನ ಬಡ್ಡಿದರಗಳು ಹಿಂದಿನಂತೆಯೇ ಮುಂದುವರೆಯಲಿವೆ. ಮತ್ತೊಂದೆಡೆ ಠೇವಣಿಗಳಿಗೆ ನೀಡುವ ಬಡ್ಡಿದರವೂ ಹಿಂದಿನಂತೆಯೇ ಇರಲಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಸಾಲ ನೀತಿಯನ್ನು ಶುಕ್ರವಾರ ಇಲ್ಲಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ.4.5ರ ದರದಲ್ಲಿ ಮತ್ತು ಆರ್ಥಿಕ ಪ್ರಗತಿದರ ಶೇ.7ರಷ್ಟು ಇರುವ ನಿರೀಕ್ಷೆ ಇದೆ. ಆದರೆ ಬೇಳೆಕಾಳುಗಳ ಬೇಡಿಕೆ ಮತ್ತು ಪೂರೈಕೆಯಲ್ಲಿನ ಪರಿಸ್ಥಿತಿ ಮತ್ತು ಈ ಬಾರಿ ಉಷ್ಣಮಾರುತ ಹೆಚ್ಚಳ ಕುರಿತ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಿಂದಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಕೂಡಾ ನಿಗಾ ಇರಿಸಬೇಕಿದೆ.
ಹೀಗಾಗಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳುವ ನಿರ್ಧಾರ ಮಾಡಲಾಗಿದೆ’ ಎಂದು ಹೇಳಿದರು.