ಸಾರಾಂಶ
ನವದೆಹಲಿ : ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕಣೆಯಲ್ಲಿ ಮತದಾರರ ಗುರುತು ದೃಢೀಕರಣಕ್ಕೆ ಆಧಾರ್ ಕಾರ್ಡ್‌ನ್ನು ಕೂಡ ಕ್ರಮಬದ್ಧ ಗುರುತು ದಾಖಲೆಯನ್ನಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕಾರ ಆಧಾರ್ 12ನೇ ಗುರುತು ದಾಖಲೆ ಆಗಲಿದೆ.
ಈ ಮುಂಚೆ 2 ಸಲ ಆಧಾರ್ ಪರಿಗಣಿಸಿ ಎಂದು ಕೋರ್ಟು ಮೌಖಿಕವಾಗಿ ಆಯೋಗಕ್ಕೆ ಸೂಚಿಸಿತ್ತು. ಸೋಮವಾರ ಈ ಬಗ್ಗೆ ಅಂತಿಮ ಆದೇಶ ಹೊರಡಿಸಿರುವ ಪೀಠ, ‘ಪ್ರಸ್ತುತ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ 11 ಗುರುತು ದಾಖಲೆಗಳನ್ನು ಅಗತ್ಯವಾಗಿ ಪರಿಗಣಿಸಿದೆ. ಈಗ ಆಧಾರ್ ಕಾರ್ಡ್‌ನ್ನು 12ನೇ ಗುರುತು ದಾಖಲೆಯನ್ನಾಗಿ ತೆಗೆದುಕೊಳ್ಳಬೇಕು.
ಈ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು’ ಎಂದಿದೆ.ಇದೇ ವೇಳೆ ಕೋರ್ಟು, ‘ಆಧಾರ್ ಪೌರತ್ವದ ಪುರಾವೆಯಾಗಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಆದರೆ, ’ಮತದಾರರ ಪಟ್ಟಿಗೆ ಆಧಾರ್ ಅನ್ನು ದಾಖಲೆಯನ್ನಾಗಿ ನೀಡಿದರೆ ಮತದಾರರ ನೈಜತೆಯನ್ನು ಆಯೋಗವು ಖಚಿತಪಡಿಸಿಕೊಳ್ಳಬಹುದು’ ಎಂದು ಒತ್ತಿ ಹೇಳಿದೆ. ಇನ್ನು ತಾನು ಹಿಂದೆ ಸೂಚನೆ ನೀಡಿದ್ದರೂ ಮತದಾರರಿಂದ ಆಧಾರ್ ಅನ್ನು ಗುರುತು ದಾಖಲೆಯಾಗಿ ಪಡೆಯದ ಚುನಾವಣಾ ಅಧಿಕಾರಿಗಳಿಂದ ಸ್ಪಷ್ಟನೆ ಬಯಸಿದೆ.
ಬಿಹಾರ ವಿಧಾನಸಭೆ ಚುನಾವಣೆಗೆ ಸೆ.30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ದಾಖಲೆಗಳನ್ನು ಮತದಾರರಿಂದ ಆಯೋಗ ಪಡೆಯಬಹುದಾಗಿದೆ.