ಸಾರಾಂಶ
ಅಮರಾವತಿ (ಮಹಾರಾಷ್ಟ್ರ): ‘ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಂತೆ ಮೋದಿ ಅವರಿಗೂ ನೆನಪಿನ ಶಕ್ತಿ ಕಡಿಮೆಯಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಶನಿವಾರ ಮಹಾರಾಷ್ಟ್ರದ ಅಮರಾವತಿಯಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಇತ್ತೀಚೆಗೆ ಮೋದಿ ಅವರ ಭಾಷಣಗಳನ್ನು ಗಮನಿಸಿ ನನ್ನ ಸೋದರಿ ಪ್ರಿಯಾಂಕಾ ಕೆಲವು ವಿಷಯಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ನಾನು ಸಂಸತ್ತಿನಲ್ಲಿ ಮಾತನಾಡುವಾಗ ಶೇ.50ರ ಮೀಸಲು ಮಿತಿ ತೆಗೆದು ಹಾಕಿ ಮೀಸಲು ಹೆಚ್ಚಿಸಿ ಹಾಗೂ ಜಾತಿ ಗಣತಿ ನಡೆಸಿ ಎಂದಿದ್ದೆ. ಆದರೆ ಮೋದಿ ಪ್ರಚಾರದ ವೇಳೆ ನಾನು ಮೀಸಲಿಗೆ ವಿರುದ್ಧವಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಇದರೊಂದಿಗೆ ಅಮೆರಿಕದ ನಿರ್ಗಮಿತ ಅಧ್ಯಕ್ಷ (ಜೋ ಬೈಡೆನ್) ರೀತಿ ಮೋದಿ ಕೂಡ ನೆನಪಿನ ಶಕ್ತಿ ಕಳೆದುಕೊಂಡಂತಿದೆ’ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಅಮೆರಿಕ ಚುನಾವಣೆ ವೇಳೆ ಬೈಡೆನ್ ಅವರು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಂದು ಕರೆದಿದ್ದರು. ಇದೇ ರೀತಿಯ ಅನೇಕ ಎಡವಟ್ಟು ಹೇಳಿಕೆ ನೀಡಿ ನೆನಪಿನ ಶಕ್ತಿ ಕುಂದಿದೆ ಎಂಬ ಟೀಕೆಗೆ ಒಳಗಾಗಿದ್ದರು.
ಬಿಜೆಪಿ ಪಾಲಿಗೆ ಖಾಲಿ ಪುಸ್ತಕ:
ಈ ನಡುವೆ, ರಾಹುಲ್ ಅವರು, ‘ಸಂವಿಧಾನವೇ ದೇಶದ ಡಿಎನ್ಎ, ಆದರೆ ಬಿಜೆಪಿ, ಆರೆಸ್ಸೆಸ್ ಪಾಲಿಗೆ ಅದು ಬರೀ ಖಾಲಿ ಪುಸ್ತಕ’ ಎಂದು ಕಿಡಿಕಾರಿದರು
‘ಮಹಾರಾಷ್ಟ್ರದಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಬೀಳಿಸಬಹುದು ಮತ್ತು ಉದ್ಯಮಿಗಳ 16 ಲಕ್ಷ ಕೋಟಿ ರು. ಸಾಲವನ್ನು ಮನ್ನಾ ಮಾಡಬಹುದು ಎಂದು ಸಂವಿಧಾನದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ’ ಎಂದು ಟಾಂಗ್ ನೀಡಿದರು.
ಚುನಾವಣಾಧಿಕಾರಿಗಳಿಂದ ರಾಹುಲ್ ಕಾಪ್ಟರ್, ಚೀಲ ತಪಾಸಣೆ
ಅಮರಾವತಿ (ಮಹಾರಾಷ್ಟ್ರ): ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರದ ಅಮರಾವತಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ವೇಳೆ ಚುನಾವಣಾ ಆಯೋಗದ ಅಧಿಕಾರಿಗಳು ಅವರ ಹೆಲಿಕಾಪ್ಟರ್ ಹಾಗೂ ಚೀಲ ಪರಿಶೀಲಿಸಿದರು.ಈ ಕುರಿತಾದ ವಿಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿ ಅಧಿಕಾರಿಗಳು ರಾಹುಲ್ ಗಾಂಧಿಯವರು ಆಗಮಿಸಿದ್ದ ಹೆಲಿಕಾಪ್ಟರ್‌ನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರ ಬ್ಯಾಗ್ ಅನ್ನು ಕೂಡ ಪರಿಶೀಲಿಸಿದ್ದಾರೆ.
ಕಳೆದ ವಾರ ಅಧಿಕಾರಿಗಳು ಉದ್ಧವ ಠಾಕ್ರೆ, ಅಮಿತ್ ಶಾ, ಏಕನಾಥ ಶಿಂಧೆ ಹಾಗೂ ನಿತಿನ್ ಗಡ್ಕರಿ ಅವರ ಹೆಲಿಕಾಪ್ಟರ್ ಹಾಗೂ ಚೀಲಗಳನ್ನು ಪರಿಶೀಲಿಸಿದ್ದರು.
ಏರ್‌ಪೋರ್ಟ್ ಟಾಯ್ಲೆಟ್ ಅನ್ನೂ ಮೋದಿಗೆ ರಿಸರ್ವ್ ಮಾಡ್ತೀರಾ?: ಲಾಂಜ್‌ಗೆ ಬಿಡದ್ದಕ್ಕೆ ಖರ್ಗೆ ಕಿಡಿ
ರಾಂಚಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರುತ್ತಿದ್ದಾರೆ ಎಂಬ ಕಾರಣಕ್ಕೆ ತಮ್ಮ ಹೆಲಿಕಾಪ್ಟರ್ ಅನ್ನು ಶನಿವಾರ 20 ನಿಮಿಷ ಕಾಯಿಸಲಾಯಿತು ಎಂದು ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನನಗೆ ವಿಮಾನ ನಿಲ್ದಾಣದ ಲಾಂಜ್ ಪ್ರವೇಶಿಸಲು ಅಧಿಕಾರಿಗಳು ಬಿಟ್ಟಿಲ್ಲ. ಅದು ಪ್ರಧಾನಿಗಳಿಗೆ ಮೀಸಲಾಗಿದೆ ಎಂಬ ಉತ್ತರ ಕೊಟ್ಟಿದ್ದಾರೆ. ಪ್ರಧಾನಿಗಾಗಿ ವಿಮಾನ ನಿಲ್ದಾಣದ ಟಾಯ್ಲೆಟ್ ಅನ್ನೂ ರಿಸರ್ವ್ ಮಾಡುತ್ತೀರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಜಾರ್ಖಂಡಲ್ಲಿ ಮಾತನಾಡಿದ ಅವರು, ಜಾರ್ಖಂಡ್‌ನಲ್ಲಿ ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಅನ್ನು ಶುಕ್ರವಾರ 2 ಗಂಟೆ ಕಾಯಿಸಲಾಗಿದೆ. ಶನಿವಾರ ನನ್ನ ಹೆಲಿಕಾಪ್ಟರ್ ಅನ್ನು ಅಮಿತ್ ಶಾ ಕಾರಣ ನೀಡಿ 20 ನಿಮಿಷ ಕಾಯುವಂತೆ ಮಾಡಲಾಗಿದೆ. ರಾಹುಲ್ ಹಾಗೂ ನಾನು ಸಂಪುಟ ದರ್ಜೆ ಸ್ಥಾನ ಹೊಂದಿದ್ದೇವೆ. ಆದರೂ ಏರ್‌ಪೋರ್ಟ್ ಲಾಂಜ್ ಪ್ರವೇಶಿಸಲು ಬಿಡುತ್ತಿಲ್ಲ ಎಂದಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ: ಖರ್ಗೆ, ನಡ್ಡಾಗೆ ನೋಟಿಸ್
ನವದೆಹಲಿ: ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಎರಡೂ ಪಕ್ಷಗಳ ನಾಯಕರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರುಗಳು ಸಲ್ಲಿಕೆ ಆಗಿದ್ದ ಹಿನ್ನೆಲೆಯಲ್ಲಿ ಶನಿವಾರ, ಚುನಾವಣಾ ಆಯೋಗವು ಈ ಆರೋಪಗಳ ಬಗ್ಗೆ ಎರಡೂ ಪಕ್ಷಗಳ ಅಧ್ಯಕ್ಷರಿಂದ ಪ್ರತಿಕ್ರಿಯೆ ಕೇಳಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಆಯೋಗ ನ.18 ರಂದು ಮಧ್ಯಾಹ್ನ 1 ಗಂಟೆಯೊಳಗೆ ಉತ್ತರ ನೀಡಬೇಕೆಂದು ಸೂಚಿಸಿದೆ.ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣಗಳಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಎರಡೂ ಪಕ್ಷದವರೂ ಚುನಾವಣಾ ಆಯೋಗಕ್ಕೆ ದೂರು ನೀಡದ್ದರು.