ಪಕ್ಷಕ್ಕೆ ಮುಜುಗರದ ತಂದಿದ್ದ ಬಿಧೂರಿ ಸೇರಿ ಅನೇಕರಿಗೆ ಟಿಕೆಟ್‌ ಇಲ್ಲ ಎಂದು ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿ ಸ್ಪಷ್ಟಪಡಿಸಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದ ಹಾಗೂ ತೃಪ್ತಿಕರ ಕಾರ್ಯಸಾಧನೆ ಮಾಡದ ಹಲವು ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

 ಪ್ರಮುಖವಾಗಿ ಭೋಪಾಲ್‌ ಕ್ಷೇತ್ರದಿಂದ ಸಂಸದರಾಗಿದ್ದ ವಿವಾದಿತ ಫೈರ್‌ಬ್ರಾಂಡ್‌ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಅವರಿಗೆ ಟಿಕೆಟ್‌ ಮಿಸ್‌ ಆಗಿದ್ದು, ದೆಹಲಿಯಲ್ಲಿ ಪ್ರಕಟಿಸಲಾದ 5 ಕ್ಷೇತ್ರಗಳ ಪೈಕಿ ನಾಲ್ವರು ಹೊಸಬರಿಗೆ ಟಿಕೆಟ್‌ ನೀಡಲಾಗಿದೆ. 

ಅಲ್ಲಿ ಘಟಾನುಘಟಿಗಳಾದ ಮೀನಾಕ್ಷಿ ಲೇಖಿ, ಹರ್ಷವರ್ಧನ್‌ ಹಾಗೂ ರಮೇಶ್‌ ಬಿಧೂರಿ ಅವರಿಗೆ ಟಿಕೆಟ್‌ ಮಿಸ್‌ ಆಗಿದೆ. ಅಲ್ಲದೆ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವರಾಗಿರುವ ರಾಮೇಶ್ವರ್‌ ತೇಲಿ ಅವರಿಗೂ ಕೊಕ್‌ ನೀಡಲಾಗಿದೆ. 

ಈ ಮೂಲಕ ಬಿಜೆಪಿಯು ವಿವಾದಿತರಿಗೆ ಹಾಗೂ ಉತ್ತಮ ಕೆಲಸ ಮಾಡದವರಿಗೆ ಪಕ್ಷದಲ್ಲಿ ಜಾಗವಿಲ್ಲ ಎಂಬ ಸಂದೇಶ ರವಾನಿಸಿದ್ದು, ಮುಂದಿನ ಪಟ್ಟಿಯಲ್ಲೂ ಇದೇ ಸೂತ್ರ ಅನುಸರಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

ಸುಷ್ಮಾ ಮಗಳಿಗೆ ಟಿಕೆಟ್: ಬಿಜೆಪಿ ಹಿರಿಯ ನಾಯಕಿ ದಿ. ಸುಷ್ಮಾ ಸ್ವರಾಜ್‌ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಅವರಿಗೆ ನವದೆಹಲಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ.