ಸಾರಾಂಶ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ಏರ್ಪಡಿಸಿದ್ದ ಗಣೇಶನ ಪೂಜೆಯಲ್ಲಿ ಪಾಲ್ಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಇರಬೇಕಾದ ಪವಿತ್ರ ಅಂತರವನ್ನು ಅಳಿಸಿಹಾಕಿ, ಸಂವಿಧಾನಕ್ಕೆ ಅಪಚಾರ ಎಸಗಿದೆ ಎಂದು ಶಿವಸೇನೆ ಉದ್ಧವ್ ಬಣ, ಆರ್‌ಜೆಡಿ ಮುಂತಾದ ವಿರೋಧ ಪಕ್ಷಗಳು ಹಾಗೂ ಕೆಲ ಕಾನೂನು ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿರೋಧಕ್ಕೆ ತಿರುಗೇಟು ನೀಡಿರುವ ಬಿಜೆಪಿ, 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಅಂದಿನ ಸಿಜೆಐ ಕೆ.ಜಿ.ಬಾಲಕೃಷ್ಣನ್ ಅವರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿ, ಒಟ್ಟಿಗೇ ನಗುತ್ತಿರುವ ಫೋಟೋ ಬಿಡುಗಡೆ ಮಾಡಿದೆ.
ಮೋದಿ, ಚಂದ್ರಚೂಡ್ ವಿಡಿಯೋ ವೈರಲ್:ನ್ಯಾ.ಚಂದ್ರಚೂಡ್ ಅವರ ಅಧಿಕೃತ ನಿವಾಸಕ್ಕೆ ಬುಧವಾರ ಪ್ರಧಾನಿ ಆಗಮಿಸುವುದು, ಅವರನ್ನು ಚಂದ್ರಚೂಡ್ ಹಾಗೂ ಅವರ ಪತ್ನಿ ಕಲ್ಪನಾ ದಾಸ್ ಬರಮಾಡಿಕೊಳ್ಳುವುದು, ಎಲ್ಲರೂ ಸೇರಿ ಗಣಪತಿಗೆ ಆರತಿ ಮಾಡುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನೆ ಉದ್ಧವ್ ಬಣದ ನಾಯಕ ಸಂಜಯ್ ರಾವತ್, ‘ಸಂವಿಧಾನದ ರಕ್ಷಕರು ರಾಜಕೀಯ ನಾಯಕರನ್ನು ಭೇಟಿಯಾಗುವುದನ್ನು ನೋಡಿದರೆ ಜನರಲ್ಲಿ ಅನುಮಾನ ಮೂಡುತ್ತದೆ’ ಎಂದಿದ್ದಾರೆ.
ಬಾರ್ ಕೌನ್ಸಿಲ್ ಖಂಡಿಸಲಿ:ಸಂವಿಧಾನ ತಜ್ಞೆ ಇಂದಿರಾ ಜೈಸಿಂಗ್ ‘ಎಕ್ಸ್’ ಮಾಡಿ, ‘ಸಿಜೆಐ ಅವರು ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವಿನ ಅಧಿಕಾರದ ಪ್ರತ್ಯೇಕತೆಯ ಜೊತೆಗೆ ರಾಜಿ ಮಾಡಿಕೊಂಡಿದ್ದಾರೆ. ಸಿಜೆಐ ಅವರ ಸ್ವಾತಂತ್ರ್ಯದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಹೊರಟುಹೋಗಿದೆ. ಬಾರ್ ಕೌನ್ಸಿಲ್ ಇದನ್ನು ಖಂಡಸಬೇಕು’ ಎಂದು ಹೇಳಿದ್ದಾರೆ.ಆರ್‌ಜೆಡಿ ಸಂಸದ ಮನೋಜ್ ಝಾ ಪ್ರತಿಕ್ರಿಯಿಸಿ, ‘ಇದು ಮುಜುಗರ ಉಂಟುಮಾಡುವ ಸಂಗತಿ. ಪ್ರತಿಯೊಂದು ಸಂಸ್ಥೆಯ ಸ್ವಾತಂತ್ರ್ಯ ಕೇವಲ ಸಿದ್ಧಾಂತದಲ್ಲಿ ಇರಬಾರದು, ಕಣ್ಣಿಗೂ ಕಾಣಿಸಬೇಕು. ಗಣೇಶನ ಪೂಜೆ ವೈಯಕ್ತಿಕ. ಆದರೆ ನೀವು ಅಲ್ಲಿಗೆ ಕ್ಯಾಮರಾ ಜೊತೆಗೆ ಹೋಗುವುದು ಮುಜುಗರದ ಸಂಗತಿ’ ಎಂದಿದ್ದಾರೆ.
ಬಿ.ಎಲ್.ಸಂತೋಷ್ ತಿರುಗೇಟು:ವಿಪಕ್ಷಗಳ ಆಕ್ಷೇಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ಇದು ಸೋಷಿಯಲೈಸಿಂಗ್ ಅಲ್ಲ. ಗಣಪತಿಯ ಪೂಜೆಗೆ ಭಕ್ತಿಯಿಂದ ಹೋಗಿದ್ದಾರೆ. ಇದಕ್ಕೂ ಎಡಪಂಥೀಯರು ಅಳುತ್ತಿದ್ದಾರೆ’ ಎಂದು ಹೇಳಿದ್ದಾರೆ.ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಅವರು ಪ್ರಧಾನಿ ಮನಮೋಹನ ಸಿಂಗ್ ಮತ್ತು ಸಿಜೆಐ ಕೆ.ಜಿ.ಬಾಲಕೃಷ್ಣನ್ ಇಬ್ಬರೂ ಇಫ್ತಾರ್ ಕೂಟದಲ್ಲಿ ಒಟ್ಟಿಗೇ ನಗುತ್ತಿರುವ ಫೋಟೋ ಬಿಡುಗಡೆ ಮಾಡಿ, ‘ನ್ಯಾಯಾಂಗ ಸುರಕ್ಷಿತವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.ಬಿಜೆಪಿ ಸಂಸದ ಸಂಬಿತ್ ಪಾತ್ರಾ, ‘ಪ್ರಧಾನಿಯವರು ಸಿಜೆಐ ಅವರನ್ನು ಭೇಟಿಯಾದರೆ ನಿಮಗೆ ಸಮಸ್ಯೆ. ಆದರೆ ರಾಹುಲ್ ಗಾಂಧಿಯವರು ವಿದೇಶದಲ್ಲಿ ಭಾರತವಿರೋಧಿ ಸಂಸದೆ ಇಲ್ಹಾನ್ ಒಮರ್ ಅವರನ್ನು ಭೇಟಿಯಾದರೆ ಸಮಸ್ಯೆಯಿಲ್ಲ’ ಎಂದು ಕಟಕಿಯಾಡಿದ್ದಾರೆ.