ಸಾರಾಂಶ
ತಿರುಮಲ: ಶ್ರೀಕ್ಷೇತ್ರ ತಿರುಮಲದಲ್ಲಿ 3 ಭಕ್ತರು ಶೂ ಧರಿಸಿ ದೇಗುಲ ಪ್ರವೇಶಿಸಿದ ಘಟನೆ ನಡೆದಿದೆ. ಇದು ಭಾರಿ ಭದ್ರತಾ ಲೋಪ ಎಂದು ಆಂಧ್ರಪ್ರದೇಶ ಪ್ರತಿಪಕ್ಷಗಳು ಕಿಡಿಕಾರಿವೆ.
3 ಭಕ್ತರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಿಂದ ಶೂ ಧರಿಸಿ ಬಂದಿದ್ದಾರೆ. ಆದರೆ, ದಾರಿಯುದ್ದಕ್ಕೂ ಭದ್ರತಾ ತಪಾಸಣಾಧಿಕಾರಿಗಳು ಇವರನ್ನು ಹೇಗೆ ಗಮನಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ. ಕೊನೆಗೆ ಮಹಾದ್ವಾರದಲ್ಲಿನ ಸಿಬ್ಬಂದಿ ಅವರನ್ನು ತಡೆದು ಶೂ ಬಿಚ್ಚಿಸಿದ್ದಾರೆ.
ಈ ಘಟನೆಯ ಬಗ್ಗೆ ಟಿಟಿಡಿ ಮಾಜಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಕಿಡಿಕಾರಿದ್ದು, ‘ಇದು ಭಾರಿ ಭದ್ರತಾ ಲೋಪ’ ಎಂದಿದ್ದಾರೆ.
ಅಮೆರಿಕ ವೀಸಾದಾರರಿಗೆ ಹೊಸ ಅಂಕುಶ
ನವದೆಹಲಿ: ಅಮೆರಿಕ ವೀಸಾ ಹೊಂದಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರು ಸೇರಿದಂತೆ ಅಮೆರಿಕದಲ್ಲಿರುವ ವಿದೇಶಿ ಪ್ರಜೆಗಳು ತಮ್ಮ ದಾಖಲೆಗಳನ್ನು ಯಾವಾಗಲೂ ತಮ್ಮೊಂದಿಗೆ ಕೊಂಡೊಯ್ಯಬೇಕು. ಅಧಿಕಾರಿಗಳು ಅದನ್ನು ಕೇಳಿದಾಗ ತೋರಿಸಬೇಕು ಹಾಗೂ ಮರುನೋಂದಣಿ ಮಾಡಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಸರ್ಕಾರ ಹೊಸ ಆದೇಶ ಹೊರಡಿಸಿದೆ.ಇದಲ್ಲದೆ, ಮಕ್ಕಳು 14 ವರ್ಷ ತುಂಬಿದ ತಕ್ಷಣ ಮರು ನೋಂದಣಿ ಮಾಡಿಕೊಂಡು ಬೆರಳಚ್ಚುಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. ಹೊಸ ನಿಯಮ ಏ.11ರಿಂದಲೇ ಜಾರಿಗೆ ಬಂದಿದೆ.
ಇದು ಭಾರತೀಯ ಎಚ್-1ಬಿ ವೀಸಾ, ವಿದ್ಯಾರ್ಥಿ ವೀಸಾ ಸೇರಿದಂತೆ ಎಲ್ಲ ವೀಸಾದಾರರಿಗೆ ಅನ್ವಯಿಸುತ್ತದೆ. ದೇಶದಲ್ಲಿ ಅಕ್ರಮ ವಲಸಿಗರ ಹಾವಳಿ ತಡೆಗಟ್ಟಲು ಈ ಹೊಸ ನಿಯಮ ರೂಪಿಸಲಾಗಿದೆ.
ಜಮ್ಮು: ಗುಂಡಿನ ಕಾಳಗದಲ್ಲಿ 2 ಉಗ್ರರು ಸಾವು, ಓರ್ವ ಯೋಧ ಹುತಾತ್ಮ
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆ ವೇಗ ಪಡೆದಿದ್ದು, 2 ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಉಗ್ರರು ಹತರಾಗಿದ್ದರೆ ಮತ್ತು ಓರ್ವ ಯೋಧ ಹುತಾತ್ಮರಾಗಿದ್ದಾರೆ.ಹಿಮಾಚ್ಛಾದಿತ ಪ್ರದೇಶವಾದ ಕಿಶ್ತವಾರ್ ಜಿಲ್ಲೆಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರಸಂಘಟನೆಗೆ ಸೇರಿದ ಇಬ್ಬರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಅದರಲ್ಲಿ ಒಬ್ಬಾತ, ಕಳೆದೊಂದು ವರ್ಷದಿಂದ ಚೆನಾಬ್ ಕಣಿವೆಯಲ್ಲಿ ಸಕ್ರಿಯನಾಗಿದ್ದ ಉನ್ನತ ಕಮಾಂಡರ್ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಇದರೊಂದಿಗೆ, ಏ.9ರಿಂದ ಈವರೆಗೆ 3 ಉಗ್ರರು ಹತರಾಗಿದ್ದಾರೆ.ಅತ್ತ ಅಖ್ನೂರ್ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಉಗ್ರರೊಂದಿಗಿನ ಕಾದಾಟದ ವೇಳೆ ಸೇನೆಯ ಕಿರಿಯ ಅಧಿಕಾರಿ, ಪಂಜಾಬ್ ರೆಜಿಮೆಂಟ್‌ನ ಸುಬೇದಾರ್ ಕುಲದೀಪ್ ಚಂದ್ ಹುತಾತ್ಮರಾಗಿದ್ದಾರೆ. ಅವರು ಹಿಮಾಚಲ ಪ್ರದೇಶ ಮೂಲದವರು ಎಂದು ಸೇನೆ ತಿಳಿಸಿದೆ. ಉಗ್ರರು ಚಕಮಕಿಯ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಪಲಾಯಗೈದಿದ್ದಾರೆ.
ಛತ್ತೀಸ್‌ಗಢದಲ್ಲಿ ಮತ್ತೆ ಮೂವರು ನಕ್ಸಲರ ಸಂಹಾರ
ಬಿಜಾಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧ ಬೇಟೆ ಮುಂದುವರೆದಿದ್ದು, ಶನಿವಾರ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಯ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈ ವರ್ಷ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲರ ಸಂಖ್ಯೆ 138ಕ್ಕೇರಿಕೆಯಾಗಿದೆ.ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದ ಕಾಡಿನಲ್ಲಿ ಶನಿವಾರ ಬೆಳಿಗ್ಗೆ ಭದ್ರತಾ ಸಿಬ್ಬಂದಿ ಜಂಟಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದಾಗ ಸಿಬ್ಬಂದಿ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ಪಡೆ ಸಿಬ್ಬಂದಿಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.ಜಾರ್ಖಂಡಲ್ಲಿ ಪೊಲೀಸ್ ಸಾವು:
ಜಾರ್ಖಂಡ್‌ನ ಚೈಬಾಸಾ ಗುಡ್ಡಗಾಡು ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಸ್ಫೋಟದಲ್ಲಿ ಒಬ್ಬ ಪೊಲೀಸ್ ಸಾವನ್ನಪ್ಪಿದ್ದು, ಅರೆಸೇನಾ ಪಡೆ ಯೋಧ ಗಾಯಗೊಂಡಿದ್ದಾರೆ.
ಕ್ಲೀನ್ ಶೇವ್ ಕಾರಣ ನಟ ಸೈಫ್ ಗುರುತು ಸಿಗ್ಲಿಲ್ಲ: ದಾಳಿಕೋರ
ಮುಂಬೈ: ‘ನಾನು ಸೈಫ್ ಅಲಿ ಖಾನ್ ಅವರ ಸಿನಿಮಾ ನೋಡಿದ್ದೇನೆ. ಆದರೆ ಅವರು ಕ್ಲೀನ್ ಶೇವ್ ಮಾಡಿಕೊಂಡಿದ್ದ ಕಾರಣ ಗುರುತು ಸಿಗಲಿಲ್ಲ’ ಎಂದು ನಟ ಸೈಫ್ ಅಲಿ ಖಾನ್‌ರ ಮೇಲೆ ಜ.16ರಂದು ಅವರ ಮನೆಯಲ್ಲೇ ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿ ಹೇಳಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.ಬಾಂದ್ರಾ ಪೊಲೀಸರು ನಡೆಸಿದ ವಿಚಾರಣೆ ವೇಳೆ ದಾಳಿಕೋರ ಶರೀಫುಲ್ ಇಸ್ಲಾಂ, ‘ನನಗೆ ಅದು ಸೈಫ್‌ರ ಮನೆ ಎಂದು ತಿಳಿದಿರಲಿಲ್ಲ. ನಾನು ಅವರ ಸಿಕಂದರ್ ಸಿನಿಮಾ ನೋಡಿದ್ದೆ. ಆದರೆ ಅಂದು ಕತ್ತಲಿದ್ದ ಕಾರಣ ಮತ್ತು ಅವರು ಕ್ಷೌರ ಮಾಡಿಸಿಕೊಂಡಿದ್ದರಿಂದ ಯಾರೆಂದು ತಿಳಿಯಲಿಲ್ಲ. ಯೂಟ್ಯೂಬ್‌ನಲ್ಲಿ ಸುದ್ದಿ ನೋಡಿದ ಮೇಲೆಯೇ, ನಾನು ದಾಳಿ ಮಾಡಿದ್ದು ಸೈಫ್ ಮೇಲೆಂದು ತಿಳಿಯಿತು’ ಎಂದಿದ್ದಾನೆ.ಪ್ರಕರಣದ ಚಾರ್ಜ್‌ಶೀಟನ್ನು ಇತ್ತೀಚೆಗೆ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.