ಆಂಧ್ರಪ್ರದೇಶ ಮೂಲದ ಯುವಕ ಟೀಗೆ ಮತ್ತು ಬರುವ ಔಷಧಿ ಬೆರಸಿ ಯುವತಿ ಮೇಲೆ ರೇಪ್‌: ಎಫ್‌ಐಆರ್‌

| Published : Dec 09 2024, 12:47 AM IST / Updated: Dec 09 2024, 05:55 AM IST

Crime News

ಸಾರಾಂಶ

ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಪರಿಚಿತ ಯುವತಿಗೆ ಮಾದಕವಸ್ತು ಬೆರೆಸಿದ ಟೀ ಕುಡಿಸಿ ಮತ್ತು ಬರಿಸಿ ಅತ್ಯಾಚಾರ ಮಾಡಿ ಬಳಿಕ ವಿಡಿಯೋ ಮಾಡಿಕೊಂಡು ಹಲವು ಬಾರಿ ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಮಾಡಿದ ಆರೋಪದಡಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಪರಿಚಿತ ಯುವತಿಗೆ ಮಾದಕವಸ್ತು ಬೆರೆಸಿದ ಟೀ ಕುಡಿಸಿ ಮತ್ತು ಬರಿಸಿ ಅತ್ಯಾಚಾರ ಮಾಡಿ ಬಳಿಕ ವಿಡಿಯೋ ಮಾಡಿಕೊಂಡು ಹಲವು ಬಾರಿ ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಮಾಡಿದ ಆರೋಪದಡಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸಂತನಗರದ 26 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಆಂಧ್ರಪ್ರದೇಶ ಮೂಲದ ಅಕ್ಕಿ ಲಕ್ಷ್ಮೀರೆಡ್ಡಿ ಎಂಬಾತನ ವಿರುದ್ಧ ಅತ್ಯಾಚಾರ, ಹಲ್ಲೆ, ಜಾಂತಿ ನಿಂದನೆ ಸೇರಿ ವಿವಿಧ ಆರೋಪಿಗಳ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಜಾತಿ ನಿಂದನೆ ಆರೋಪ ಇರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಎಸಿಪಿ ಮಟ್ಟದ ಅಧಿಕಾರಿಗೆ ವರ್ಗಾಯಿಸಲಾಗಿದೆ.

ಏನಿದು ಪ್ರಕರಣ?: 6 ವರ್ಷದ ಹಿಂದೆ ಯುವತಿ ಆರ್‌.ಟಿ.ನಗರದ ಖಾಸಗಿ ಬ್ಯಾಂಕಿನ ಕ್ರೆಡಿಟ್‌ ಕಾರ್ಡ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕ್ರೆಡಿಟ್‌ ಕಾರ್ಡ್‌ ಪಡೆಯುವ ಸಂಬಂಧ ಆರೋಪಿ ಲಕ್ಷ್ಮೀ ರೆಡ್ಡಿ ಬ್ಯಾಂಕ್‌ಗೆ ಬಂದಾಗ ಯುವತಿಯ ಪರಿಚಯವಾಗಿದೆ. ಬಳಿಕ ಆರೋಪಿಯು ಅಕ್ಕನ ಹುಟ್ಟುಹಬ್ಬದ ನೆಪದಲ್ಲಿ ಯುವತಿಯನ್ನು ಆರ್‌.ಟಿ.ನಗರದ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ಬಳಿಕ ಟೀಗೆ ಮತ್ತು ಬರುವ ವಸ್ತು ಬೆರೆಸಿ ಆಕೆಗೆ ಕುಡಿಸಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಬ್ಲ್ಯಾಕ್‌ ಮೇಲ್‌ ಮಾಡಿ ಲೈಂಗಿಕ ದೌರ್ಜನ್ಯ:

ಅತ್ಯಾಚಾರದ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಇದಾದ ಕೆಲ ದಿನಗಳ ಬಳಿಕ ಯುವತಿಗೆ ಖಾಸಗಿ ವಿಡಿಯೋ ತೋರಿಸಿ ಬೆದರಿಸಿ, ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಬಳಿಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಸಹ ನಡೆಸಿದ್ದಾನೆ. ಅಂತೆಯೆ ಜಾತಿ ಹಾಗೂ ಅಂಬೇಡ್ಕರ್‌ ಬಗ್ಗೆ ಕೀಳು ಭಾಷೆಯಲ್ಲಿ ನಿಂದಿಸಿದ್ದಾನೆ. ನಮ್ಮ ಮನೆಯಲ್ಲಿ ಅಂಬೇಡ್ಕರ್‌ ಭಾವಚಿತ್ರ ಹಾಕಿದ್ದನ್ನು ಗಮನಿಸಿ, ಆ ಭಾವಚಿತ್ರ ತೆಗೆದು ಹಾಕುವಂತೆ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

ಅಂಬೇಡ್ಕರ್‌ ಬಗ್ಗೆ ನಿಂದನೆ: ಕಳೆದ ನವೆಂಬರ್‌ನಲ್ಲಿ ಖಾಸಗಿ ಹೋಟೆಲ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಇತ್ತೀಚೆಗೆ ಯುವತಿಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ನಡೆದ ಘಟನೆಗಳನ್ನು ತಾಯಿ ಬಳಿ ಹೇಳಿಕೊಂಡಿದ್ದಾರೆ. ನವೆಂಬರ್‌ ಕೊನೆಯ ವಾರ ಮತ್ತೆ ಭೇಟಿಯಾಗಿದ್ದ ಆರೋಪಿಯು ಯುವತಿ ಮೊಬೈಲ್‌ನ ವಾಲ್‌ ಪೇಪರ್‌ನಲ್ಲಿ ಅಂಬೇಡ್ಕರ್‌ ಫೋಟೋ ಇರುವುದನ್ನು ಕಂಡು ನಿಂದಿಸಿದ್ದಾನೆ. ಬಳಿಕ ಮೊಬೈಲ್‌ ಕಿತ್ತುಕೊಂಡು ಒಡೆದು ಹಾಕಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಹಿಡಿದು ಎಳೆದಾಡಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಯುವತಿ ದೂರು ನೀಡಿದ ಬಳಿಕ ಆರೋಪಿ ಅಕ್ಕಿ ಲಕ್ಷ್ಮೀ ರೆಡ್ಡಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.