ಧರ್ಮಗ್ರಂಥ ಸುಟ್ಟ ವದಂತಿ ಹರಡಿದ ಕಾರಣ ನಾಗ್ಪುರ ಕೋಮುಗಲಭೆ: ದಂಗೆಕೋರರಿಂದ ನಷ್ಟದ ಮೊತ್ತ ವಸೂಲಿ

| N/A | Published : Mar 23 2025, 01:34 AM IST / Updated: Mar 23 2025, 05:14 AM IST

ಸಾರಾಂಶ

‘ಧರ್ಮಗ್ರಂಥ ಸುಟ್ಟ ವದಂತಿ ಹರಡಿದ ಕಾರಣ ಮಾ.17ರಂದು ಇಲ್ಲಿ ನಡೆದ ಕೋಮುಗಲಭೆಯಲ್ಲಿ ನಷ್ಟವಾದ ಆಸ್ತಿಯ ಮೊತ್ತವನ್ನು ದಂಗೆಕೋರರಿಂದಲೇ ವಸೂಲಿ ಮಾಡಲಾಗುವುದು’ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

ನಾಗ್ಪುರ: ‘ಧರ್ಮಗ್ರಂಥ ಸುಟ್ಟ ವದಂತಿ ಹರಡಿದ ಕಾರಣ ಮಾ.17ರಂದು ಇಲ್ಲಿ ನಡೆದ ಕೋಮುಗಲಭೆಯಲ್ಲಿ ನಷ್ಟವಾದ ಆಸ್ತಿಯ ಮೊತ್ತವನ್ನು ದಂಗೆಕೋರರಿಂದಲೇ ವಸೂಲಿ ಮಾಡಲಾಗುವುದು’ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. ಜೊತೆಗೆ, ಆ ಅಪರಾಧಿಗಳು ನಷ್ಟದ ಮೊತ್ತವನ್ನು ಭರಿಸುವಲ್ಲಿ ವಿಫಲರಾದರೆ ಅವರ ಆಸ್ತಿಯನ್ನು ವಶಪಡಿಸಿಕೊಂಡು ಮಾರಾಟ ಮಾಡಲಾಗುವುದು. ಅಗತ್ಯ ಬಿದ್ದಲ್ಲಿ ಆಸ್ತಿ ಧ್ವಂಸಕ್ಕೆ ಬುಲ್ಡೋಜರ್‌ ಬಳಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಗಲಭೆಯ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಫಡ್ನವೀಸ್‌, ‘ಘಟನೆಯನ್ನು ಗುಪ್ತಚರ ವೈಫಲ್ಯ ಎನ್ನಲಾಗದು. ಆದರೆ ಗುಪ್ತಚರ ವಿಭಾಗ ಇನ್ನೂ ಉತ್ತಮವಾಗಿ ಕೆಲಸ ಮಾಡಬಹುದಿತ್ತು. ಈಗಾಗಲೇ ಸಿಸಿಟೀವಿ ದೃಶ್ಯಾವಳಿ ಹಾಗೂ ವಿಡಿಯೋ ಪರಿಶೀಲಿಸಿ 104 ಜನರನ್ನು ಗುರುತಿಸಲಾಗಿದೆ. 12 ಅಪ್ರಾಪ್ತರು ಸೇರಿ 92 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಇದೇ ವೇಳೆ, ‘ಘಟನೆಯ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ನೀಡಲಾಗುವುದು’ ಎಂದ ಅವರು, ಈಗಾಗಲೇ 68 ಪ್ರಚೋದನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಲಾಗಿದೆ ಎಂದರು. ಜೊತೆಗೆ, ತಮ್ಮನ್ನು ರಾಜಕೀಯವಾಗಿ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಎಂಬುದನ್ನು ಫಡ್ನವೀಸ್‌ ತಳ್ಳಿಹಾಕಿದರು.

ಆಗಿದ್ದೇನು?:

ಛತ್ರಪತಿ ಸಂಭಾಜಿನಗರದಲ್ಲಿರುವ ಮುಘಲ್‌ ದೊರೆ ಔರಂಗಜೇಬ್‌ನ ಸಮಾಧಿ ತೆರವಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಪ್ರತಿಭಟಿಸುತ್ತಿದ್ದ ವೇಳೆ ಚಾದರ್‌ ಹಾಗೂ ಧರ್ಮಗ್ರಂಥ ಸುಡಲಾಗಿತ್ತು ಎಂಬ ವದಂತಿ ಹಬ್ಬಿತ್ತು. ಇದರ ಬೆನ್ನಲ್ಲೇ ಗಲಭೆ ಆರಂಭವಾಗಿದ್ದು, ನಗರದ ಹಲವು ಭಾಗಗಳಲ್ಲಿ ಕಲ್ಲುತೂರಾಟದಂತಹ ಘಟನೆಗಳು ನಡೆದಿದ್ದವು. ಇದರಲ್ಲಿ 33 ಪೊಲೀಸರೂ ಗಾಯಗೊಂಡಿದ್ದರು.