ಇನ್ನು ಅಮೆರಿಕದಿಂದ ಭಾರತಕ್ಕೆ ವಲಸಿಗರ ನೇರ ಗಡಿಪಾರಿಲ್ಲ!

| Published : Feb 19 2025, 12:50 AM IST

ಸಾರಾಂಶ

ತನ್ನ ದೇಶದಲ್ಲಿ ನೆಲೆಸಿದ್ದ ಅಕ್ರಮ ವಲಸಿಗರನ್ನು ಹೊರಗಟ್ಟುವ ಕೆಲಸವನ್ನು ಭರದಿಂದ ಮಾಡುತ್ತಿರುವ ಅಮೆರಿಕ ಇದೀಗ ಕೋಸ್ಟರಿಕಾ ದೇಶದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.

ಸ್ಯಾನ್‌ ಜೋಸ್‌: ತನ್ನ ದೇಶದಲ್ಲಿ ನೆಲೆಸಿದ್ದ ಅಕ್ರಮ ವಲಸಿಗರನ್ನು ಹೊರಗಟ್ಟುವ ಕೆಲಸವನ್ನು ಭರದಿಂದ ಮಾಡುತ್ತಿರುವ ಅಮೆರಿಕ ಇದೀಗ ಕೋಸ್ಟರಿಕಾ ದೇಶದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಭಾರತ ಸೇರಿದಂತೆ ಮಧ್ಯ ಏಷ್ಯಾ ದೇಶಗಳಿಗೆ ಗಡೀಪಾರಾಗುವವರನ್ನು ಕೋಸ್ಟರಿಕಾದಲ್ಲಿ ಇಳಿಸಿ, ಬಳಿಕ ಬೇರೊಂದು ವಿಮಾನದಲ್ಲಿ ಅವರವರ ದೇಶಕ್ಕೆ ಕಳಿಸಲಾಗುವುದು. ಭಾರತೀಯರು ಸೇರಿ 200 ವಲಸಿಗರನ್ನು ಹೊತ್ತ ಮೊದಲ ವಿಮಾನ ಬುಧವಾರ ಕೋಸ್ಟರಿಕಾದ ಜುವನ್‌ ಸಂತಾಮರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಅವರನ್ನೆಲ್ಲಾ ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗಿದೆ. ಅವರಲ್ಲಿ ಎಷ್ಟು ಮಂದಿ ಭಾರತೀಯರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

ಈ ಕುರಿತು ಅಲ್ಲಿನ ಅಧ್ಯಕ್ಷ ರೋಡ್ರಿಗೋ ಚೇವ್ಸ್ ರೋಬಲ್ಸ್ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅಮೆರಿಕದಿಂದ ಗಡೀಪಾರಾಗುವ ವಲಸಿಗರನ್ನು ಅವರವರ ದೇಶಗಳಿಗೆ ತಲುಪಿಸಲು ಸೇತುವೆಯಾಗಲು ಕೋಸ್ಟರಿಕಾ ಸರ್ಕಾರ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ’ ಎಂದು ತಿಳಿಸಿದೆ.

ಈಗ ಗಡೀಪಾರು ಹೇಗೆ?:

ಅಮೆರಿಕದಿಂದ ಭಾರತೀಯ ವಲಸಿಗರನ್ನು ಮೊದಲು ಕೋಸ್ಟರಿಕಾದಲ್ಲಿ ಇಳಿಸಲಾಗುವುದು. ಅಲ್ಲಿಂದ ಅವರನ್ನು ಅವರವರ ದೇಶಗಳಿಗೆ ಕಳಿಸುವ ಮುನ್ನ ವಲಸಿಗರ ತಾತ್ಕಾಲಿಕ ಆರೈಕೆ ಕೇಂದ್ರಗಳಲ್ಲಿ ಇರಿಸಲಾಗುವುದು. ಬಳಿಕ ವಾಣಿಜ್ಯ ವಿಮಾನಗಳಲ್ಲಿ ಆಯಾ ದೇಶಗಳಿಗೆ ಕಳಿಸಲಾಗುವುದು.

ಈ ಒಪ್ಪಂದ ಏಕೆ?:

ಅಮೆರಿಕ ಹಾಗೂ ಭಾರತದ ನಡುವಿನ ದೂರವನ್ನು ಕ್ರಮಿಸಲು ಸರಾಸರಿ 20 ಗಂಟೆಗಳಾದರೂ ಬೇಕು. ಇದು ಒಂದು ಸುದೀರ್ಘ ಪ್ರಯಾಣವಾಗುವುದು. ಜೊತೆಗೆ, ವಲಸಿಗರ ಗಡೀಪಾರಿಗೆ ಬಳಸುತ್ತಿರುವ ಅಮೆರಿಕ ಸೇನಾ ವಿಮಾನಕ್ಕೆ ವಿಪರೀತ ಖರ್ಚಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ಕೋಸ್ಟರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಇಂತಹ ಒಪ್ಪಂದವನ್ನು ಅಮೆರಿಕ ಗ್ವಾಟೆಮಾಲಾ ಹಾಗೂ ಪನಾಮಾದೊಂದಿಗೂ ಮಾಡಿಕೊಂಡಿದೆ.