ಬಂಗಾಳದಲ್ಲಿ 47.2 ಡಿಗ್ರಿ ಉಷ್ಣಾಂಶ ದಾಖಲು!

| Published : May 01 2024, 01:19 AM IST

ಸಾರಾಂಶ

ಬಂಗಾಳ, ಜಾರ್ಖಂಡ್‌, ಕೇರಳದ ಹಲವೆಡೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಕೇರಳದ ಪಾಲಕ್ಕಾಡ್‌ನಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ನವದೆಹಲಿ: ಬಿಸಿಲಿನ ಬೇಗೆಯಿಂದ ಸಮಸ್ತ ಭಾರತ ತತ್ತರಿಸುತ್ತಿದ್ದು, ಉಷ್ಣಹವೆಯು ಹಲವು ಪ್ರದೇಶಗಳಲ್ಲಿ ತಾಪಮಾನಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳದ ಕಾಲೈಕುಂಡದಲ್ಲಿ 47.2 ಡಿಗ್ರಿ, ಜಾರ್ಖಂಡ್‌ನ ಸಿಂಗ್‌ಭಮ್‌ ಜಿಲ್ಲೆಯಲ್ಲಿ ಗರಿಷ್ಠ 47.1 ಡಿಗ್ರಿ ತಾಪಮಾನ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಪಶ್ಚಿಮ ಬಂಗಾಳ, ಜಾರ್ಖಂಡ್‌ ಮತ್ತು ಕೇರಳದ ಹಲವೆಡೆ ಮುಂದಿನ ಕೆಲವು ದಿನಗಳ ಕಾಲ ಆರೆಂಜ್ ಅಲರ್ಟ್‌ ಘೋಷಿಸಿವೆ. ಈ ನಡುವೆ ಬುಧವಾರ ಜಾರ್ಖಂಡ್‌ನ ಡುಮ್ಕಾದಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಈ ನಡುವೆ ದೆಹಲಿಯಲ್ಲಿ ತಾಪಮಾನ ತುಸು ಕಡಿಮೆಯಾಗಿದ್ದು, 36.5 ಡಿಗ್ರಿಗೆ ಇಳಿದಿದೆ.

ಪಾಲಕ್ಕಾಡ್‌ನಲ್ಲಿ ರಜೆ ಮುಂದುವರಿಕೆ: ಈ ನಡುವೆ ಕೇರಳದ ಪಾಲಕ್ಕಾಡ್‌ನಲ್ಲಿ ಮೇ.4ರವರೆಗೆ 41 ಡಿಗ್ರಿ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಮುಂದುವರಿಸಿದ್ದು ಕಾರ್ಯಕ್ರಮಗಳನ್ನು ಸಂಜೆ ಸಮಯದಲ್ಲಿ ಆಯೋಜಿಸುವಂತೆ ಕರೆ ನೀಡಿದೆ.

ಗರಿಷ್ಠ ತಾಪಮಾನ:

ಕಾಲೈಕುಂಡ- 47.2 ಡಿಗ್ರಿ

ಬಹರಗೋರಾ- 47.1 ಡಿಗ್ರಿ

ಜಮ್ಶೆಡ್‌ಪುರ- 45.5 ಡಿಗ್ರಿ

ಗೊಡ್ಡಾ-45.5 ಡಿಗ್ರಿ

ಕಾಂಡ್ಲಾ- 45.4 ಡಿಗ್ರಿ

ಗಂಗಾನಗರ- 44 ಡಿಗ್ರಿ