ಭಾತದ ಪ್ರಥಮ ಸ್ವದೇಶಿ ಖಾಸಗಿ ರಾಕೆಟ್ ವಿಕ್ರಂ-1 ಶನಿವಾರ ನಭಕ್ಕೆ ನೆಗೆದಿದ್ದು, ಯಶಸ್ವಿಯಾಗಿ ಭೂಮಿಯ ಕೆಳಕಕ್ಷೆಯಲ್ಲಿ ಪೇಲೋಡ್‌ಅನ್ನು ಇಳಿಸಿದೆ. ಹೈದರಾಬಾದ್‌ನ ಸ್ಕೈರೂಟ್ ಏರೋಸ್ಪೇಸ್ ಎಂಬ ಸ್ಟಾರ್ಟ್‌ಅಪ್‌ನ ಸಾಹಸದೊಂದಿಗೆ ದೇಶದ ಬಾಹ್ಯಾಕಾಶ ಕ್ಷೇತ್ರದ ಬಾಗಿಲು ಖಾಸಗಿಯವರಿಗೂ ತೆರೆದುಕೊಂಡಂತಾಗಿದೆ.
ಶ್ರೀಹರಿಕೋಟ : ಭಾತದ ಪ್ರಥಮ ಸ್ವದೇಶಿ ಖಾಸಗಿ ರಾಕೆಟ್ ವಿಕ್ರಂ-1 ಶನಿವಾರ ನಭಕ್ಕೆ ನೆಗೆದಿದ್ದು, ಯಶಸ್ವಿಯಾಗಿ ಭೂಮಿಯ ಕೆಳಕಕ್ಷೆಯಲ್ಲಿ ಪೇಲೋಡ್‌ಅನ್ನು ಇಳಿಸಿದೆ. ಹೈದರಾಬಾದ್‌ನ ಸ್ಕೈರೂಟ್ ಏರೋಸ್ಪೇಸ್ ಎಂಬ ಸ್ಟಾರ್ಟ್‌ಅಪ್‌ನ ಈ ಸಾಹಸದೊಂದಿಗೆ ದೇಶದ ಬಾಹ್ಯಾಕಾಶ ಕ್ಷೇತ್ರದ ಬಾಗಿಲು ಖಾಸಗಿಯವರಿಗೂ ತೆರೆದುಕೊಂಡಂತಾಗಿದೆ.
ಈ ಸಾಧನೆಗೈದವರನ್ನು ಪ್ರಧಾನಿ ನರೇಂದ್ರ ಮೋದಿ, ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು ಅಭಿನಂದಿಸಿದ್ದಾರೆ.
7 ಅಂತಸ್ತಿನ ಕಟ್ಟಡದಷ್ಟು ಎತ್ತರವಿರುವ ವಿಕ್ರಂ-1 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 11.30ಕ್ಕೆ ಉಡ್ಡಯನ ಮಾಡಲು ನಿರ್ಧರಿಸಲಾಗಿತ್ತು. ಆದರೆ ರಾಕೆಟ್‌ನ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿ, 12.05ಕ್ಕೆ ಉಡಾವಣೆ ಮಾಡಲಾಯಿತು.
ಹೀಗೆ ಆಗಸಕ್ಕೆ ಚಿಮ್ಮಿದ ರಾಕೆಟ್, ಭೂಮಿಯಿಂದ 450 ಕಿ.ಮೀ. ದೂರದಲ್ಲಿರುವ ಕೆಳಕಕ್ಷೆಯನ್ನು ತಲುಪುತ್ತಿದ್ದಂತೆ ಗ್ರಹಾ ಸ್ಪೇಸ್, ಕಾಸ್ಮೋಸರ್ವ್, ಡಿ-ಕ್ಯೂಬ್ಡ್ ಮತ್ತು ಸ್ಕೈರೂಟ್‌ನ ಸ್ಕೋಪ್ ಉಪಗ್ರಹಗಳನ್ನು ಒಂದೊಂದಾಗಿ ಇಳಿಸಿತು. ಎಲ್ಲಾ ಹಂತಗಳನ್ನು ನಿರೀಕ್ಷೆಯಂತೆ ದಾಟಿದ ವಿಕ್ರಂ ಕೆಳಕಕ್ಷೆಯನ್ನು ತಲುಪುತ್ತಿದ್ದಂತೆ, ‘ಮಿಷನ್ ಆಗಮನ್ ಅದ್ಭುತ ಯಶಸ್ಸು ಕಂಡಿದೆ’ ಎಂದು ಸ್ಕೈರೂಟ್ ಹರ್ಷ ವ್ಯಕ್ತಪಡಿಸಿದೆ.
ಜತೆಗೆ, ಈ ಯೋಜನೆ ವೇಳೆ ಸಂಗ್ರಹಿಸಲಾದ ದತ್ತಾಂಶಗಳನ್ನು ಮುಂದಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದೆ.
ಚಿನ್ನ, ವಜ್ರವೂ ಕಕ್ಷೆಗೆ:
ಉಪಗ್ರಹಗಳ ಜತೆಗೆ ಪ್ರತ್ಯೇಕ ಪೇಲೋಡ್ ಒಂದರಲ್ಲಿ ಕಲಾತ್ಮಕ ವಸ್ತುಗಳನ್ನಿಟ್ಟು ಕಳಿಸಲಾಗಿದೆ. ಅಲ್ಯೂಮಿನಿಯಂ ಫಲಕದ ಮೇಲೆ ವಜ್ರಗಳನ್ನು ಜೋಡಿಸಿ ತಯಾರಿಸಿದ ಆಭರಣದ ರಚನೆ, 18 ಕ್ಯಾರಟ್ ಚಿನ್ನ ಬಳಸಿ ತಯಾರಿಸಿದ ಪುಟಾಣಿ ರಾಕೆಟ್ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ವಂದೇ ಮಾತರಂ’ ಎಂದು ಬರೆದ ಪೋಸ್ಟ್‌ಕಾರ್ಡ್ ಜತೆಗೆ ಎಂಜಿನಿಯರ್, ವಿಜ್ಞಾನಿಗಳು ಮತ್ತು ಭಾರತೀಯ ಗಗನಯಾತ್ರಿಗಳ ಶುಭಾಶಯಗಳಿರುವ ಪೋಸ್ಟ್‌ಕಾರ್ಡ್ ಅದರಲ್ಲಿತ್ತು. ಜತೆಗೆ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ವಿಕ್ರಮ್ ಸಾರಾಭಾಯಿ, ವಿಜ್ಞಾನಿ ಸರ್ ಸಿ.ವಿ. ರಾಮನ್ ಮತ್ತು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಣ್ಣ ಕಲಾಕೃತಿಯನ್ನೂ ಕಳಿಸುವ ಮೂಲಕ ಆ ದಿಗ್ಗಜರಿಗೆ ಗೌರವ ಅರ್ಪಿಸಲಾಗಿದೆ. ಇವನ್ನು ಹೊತ್ತೊಯ್ದ ರಾಕೆಟ್‌ಗೆ ಇಟ್ಟಿರುವ ಹೆಸರು ವಿಕ್ರಂ ಸಾರಾಭಾಯಿ ಅವರದ್ದೆನ್ನುವುದು ಗಮನಾರ್ಹ.
ದಿಗ್ಗಜರ ಉಪಸ್ಥಿತಿಯಲ್ಲಿ ಉಡಾವಣೆ:
ವಿಕ್ರಂ-1 ರಾಕೆಟ್ ಬೆಂಕಿಯುಗುಳುತ್ತ ಉಡಾವಣೆಯಾಗುವುದನ್ನು, ಇಸ್ರೋ ಮುಖ್ಯಸ್ಥ ನಾರಾಯಣನ್, ಗಗನಯಾನಿ ಶುಭಾಂಶು ಶುಕ್ಲಾ, ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರೊಂದಿಗೆ ಸ್ಕೈರೂಟ್‌ನ ಸ್ಥಾಪಕರಾದ ಪವನ್ ಕುಮಾರ್ ಚಂದನ ಮತ್ತು ದಾಕಾ ಅವರು ನಿಯಂತ್ರಣ ಕೇಂದ್ರದಲ್ಲಿ ವೀಕ್ಷಿಸಿದರು. ಇವರಿಬ್ಬರು ಇಸ್ರೋದ ಮಾಜಿ ವಿಜ್ಞಾನಿಗಳು ಎಂಬುದು ಗಮನಾರ್ಹ.
ಸ್ಟಾರ್ಟ್‌ಅಪ್ ಪರ್ವ ಶುರು:
ಇಷ್ಟು ವರ್ಷ ಎಲ್ಲಾ ಬಾಹ್ಯಾಕಾಶ ಯೋಜನೆಗಳನ್ನು ಸರ್ಕಾರಿ ಸಂಸ್ಥೆಯಾದ ಇಸ್ರೋ ಕೈಗೊಳ್ಳುತ್ತಿತ್ತು. ಆದರೆ ಇದೀಗ ಖಾಸಗಿ ಕಂಪನಿಗಳಿಗೂ ಈ ಅವಕಾಶ ಲಭಿಸಿರುವುದಕ್ಕೆ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು ಹರ್ಷಿಸಿದ್ದು, ‘ಇದೊಂದು ತೃಪ್ತಿದಾಯಕ ಕ್ಷಣ. ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯುವ ನಿರ್ಧಾರವನ್ನು ಪ್ರಧಾನಿ ಮೋದಿ ಕೈಗೊಂಡಾಗ ದೇಶದಲ್ಲಿ ಒಂದೇ ನವೋದ್ಯಮವಿತ್ತು. ಆದರೀಗ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ 400ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ. ರಾಕೆಟ್ ತಯಾರಿ ಅತ್ಯಂತ ಕಠಿಣವಾದ ಕೆಲಸ. ಆದರೆ ಇದನ್ನು ಮೊದಲ ಪ್ರಯತ್ನದಲ್ಲೇ ಮಾಡಿದ ಸ್ಕೈರೂಟ್‌ಗೆ ಅಭಿನಂದನೆ’ ಎಂದಿದ್ದಾರೆ.
ಶಾಲೇಲಿ ಗಣಿತದಲ್ಲಿ 51 ಅಂಕ ಪಡೆದಿದ್ದ ವಿಕ್ರಂ ರೂವಾರಿ
ಹೈದರಾಬಾದ್: ವಿಜ್ಞಾನಿಗಳೆಂದರೆ ಹುಟ್ಟಿನಿಂದಲೇ ಪ್ರತಿಭಾವಂತರು ಎಂದು ಭಾವಿಸಲಾಗುತ್ತದೆ. ಆದರೆ, ದೇಶದ ಮೊದಲ ಸ್ವದೇಶಿ ನಿರ್ಮಿತ ಖಾಸಗಿ ರಾಕೆಟ್ ವಿಕ್ರಂ-1ನ್ನು ಭೂಮಿಯ ಕೆಳಕಕ್ಷೆಗೆ ತಲುಪಿಸಿದ ಸ್ಕೈರೂಟ್‌ನ ಸಂಸ್ಥಾಪಕರಲ್ಲೊಬ್ಬರಾದ ಪವನ್ ಕುಮಾರ್ ಚಂದನ ಅವರು ಶಾಲೆಯಲ್ಲಿದ್ದಾಗ ಗಣಿತದಲ್ಲಿ 51 ಅಂಕಗಳನ್ನು ಪಡೆದಿದ್ದರಂತೆ.ಬಾಲ್ಯದಿಂದಲೇ ಸಂಖ್ಯೆಗಳಲ್ಲಿ ನಿರಾಸಕ್ತಿ ಹೊಂದಿದ್ದ ಹೈದರಾಬಾದ್‌ನ ಚಂದನ ಅವರನ್ನು ಯಂತ್ರಗಳು ಮತ್ತು ತಂತ್ರಜ್ಞಾನ ಸೆಳೆಯುತ್ತಿದ್ದವು. ವರ್ಷ ಕಳೆದಂತೆ ಗಣಿತದೊಂದಿಗೂ ಸ್ನೇಹ ಮಾಡಿಕೊಂಡ ಅವರು, ಮೊದಲ ಯತ್ನದಲ್ಲೇ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಖರಗ್‌ಪುರದ ಐಐಟಿ ಸೇರಿಕೊಂಡರು.
ಬಾಹ್ಯಾಕಾಶ ಮತ್ತು ರಾಕೆಟ್‌ಗಳ ಮೇಲೆ ಅವರಿಗೆ ಒಲವು ಶುರುವಾಗಿದ್ದು ಅಲ್ಲೇ. ಅಲ್ಲಿಂದ ಅವರು ಇಸ್ರೋಗೆ ಸೇರಿಕೊಳ್ಳುತ್ತಾರೆ. ತಿರುವನಂತಪುರಂನ ಕೇಂದ್ರದಲ್ಲಿ ಕೆಲಸ ಆರಂಭಿಸಿದ ಚಂದನ, ಜಿಎಸ್‌ಎಲ್‌ವಿ ಮಾರ್ಕ್-3 ಅಭಿವೃದ್ಧಿ ವಿಭಾಗದಲ್ಲಿದ್ದರು. ಅಲ್ಲಿ 6 ವರ್ಷಗಳ ಅನುಭವ ಪಡೆದ ಅವರು ತಮ್ಮದೇ ಆದ ಸ್ಪೇಸ್ ಸ್ಟಾರ್ಟ್‌ಅಪ್ ಆರಂಭಿಸಲು ಮುಂದಾದಾಗ ಐಐಟಿ ಬಾಂಬೆಯ ನಾಗಾ ಭರತ್ ಡಾಕಾ ಜತೆಯಾದರು.
ಇವರಿಬ್ಬರು ಸೇರಿ 2018ರಲ್ಲಿ ಹುಟ್ಟುಹಾಕಿದ ಸ್ಕೈರೂಟ್ ಕಂಪನಿ ರಾಮನ್-1 ಎಂಬ ರಾಕೆಟ್ ಎಂಜಿನ್ ಪರೀಕ್ಷೆ ಮಾಡಿತು. ಇದು ದೇಶದ ಮೊದಲ ಖಾಸಗಿ ರಾಕೆಟ್ ಎಂಜಿನ್ ಎನಿಸಿಕೊಂಡಿತ್ತು. ಬಳಿಕ 2022ರಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸಬ್‌ಆರ್ಬಿಟಲ್ ರಾಕೆಟ್ ಆದ ''''''''ವಿಕ್ರಮ್-ಎಸ್'''''''' ಅನ್ನು ಉಡಾವಣೆ ಮಾಡಿತು. ಇದರ ಮುಂದುವರಿದ ಭಾಗವಾಗಿ ವಿಕ್ರಂ-1 ಇದೀಗ ಕಕ್ಷೆ ತಲುಪಿದ್ದು, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.