ದೇಶದಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ಗುಜರಾತಿನ ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ ಸಂಭವಿಸಿ 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಅಹಮದಾಬಾದ್: ದೇಶದಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ಗುಜರಾತಿನ ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ ಸಂಭವಿಸಿ 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.ಇಲ್ಲಿನ ರಾಮೋಲ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಪಟಾಕಿ ಕಾರ್ಖಾನೆಯಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಈ ಅವಘಢ ಸಂಭವಿಸಿದೆ. ಗಾಯಗೊಂಡಿರುವ ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಶಂಕೆಯಿದೆ. ಯಾವುದೇ ಪರವಾನಗಿ ಇಲ್ಲದೆ ತೆರೆದ ಜಮೀನಿನಲ್ಲಿ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ.
ಮೋದಿ ಶೋಕ, ಪರಿಹಾರ:
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಇನ್ನು ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರು. ಹಾಗೂ ಗಾಯಗೊಂಡವರಿಗೆ ತಲಾ 50,000 ರು. ಪರಿಹಾರ ಘೋಷಿಸಿದ್ದಾರೆ.
3ನೇ ಮದುವೆ: ಅಮೀರ್ ಖಾನ್‌ಗೆ ಬಿಷ್ಣೋಯಿ ಗ್ಯಾಂಗ್ ಬೆದರಿಕೆ?
ಮುಂಬೈ: ಸಲ್ಮಾನ್ ಖಾನ್ ಆಯ್ತು, ಇದೀಗ ಮತ್ತೊಬ್ಬ ಬಾಲಿವುಡ್ ನಟ ಅಮೀರ್ ಖಾನ್‌ಗೆ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅನುಯಾಯಿಗಳು ಎನ್ನಲಾದ ಇಬ್ಬರಿಂದ ಬೆದರಿಕೆ ಕರೆ ಬಂದಿದೆ.ಇತ್ತೀಚೆಗಷ್ಟೇ ಮೂರನೇ ಮದುವೆಯಾಗಿದ್ದ ಅಮಿರ್ ಖಾನ್ ಅವರು ಲವ್ ಜಿಹಾದ್‌ಗೆ ಉತ್ತೇಜನ ನೀಡುತ್ತಿದ್ದಾರೆಂದು ಆರೋಪಿಸಿ ಬೆದರಿಕೆವೊಡ್ಡಲಾಗಿದೆ.
ಸಾಮಾಜಿಕ ಜಾಲತಾಣ ಪೋಸ್ಟ್ ಹಾಗೂ ವಾಯ್ಸ್ ನೋಟ್ ಮೂಲಕ ಈ ಬೆದರಿಕೆ ಹಾಕಲಾಗಿದ್ದು, ಈ ಕುರಿತು ಮುಂಬೈ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ. ಈ ಕುರಿತು ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.ಆರ್ಜು ಬಿಷ್ಣೋಯಿ ಮತ್ತು ಟೈಸನ್ ಬಿಷ್ಣೋಯಿ ಎಂದು ಹೇಳಿಕೊಂಡಿರುವ ಇಬ್ಬರು ವ್ಯಕ್ತಿಗಳು ಈ ಬೆದರಿಕೆ ಕರೆ ಹಾಕಿದ್ದು, ತಮ್ಮನ್ನು ತಾವು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಎಂದು ಹೇಳಿಕೊಂಡಿದ್ದಾರೆ.
ಅಮೀರ್ ಖಾನ್ ಅವರು ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಗೌರಿ ಎಂಬವರನ್ನು ಮೂರನೇ ಮದುವೆಯಾಗಿದ್ದರು. ಆಕೆ ಹಿಂದೂ ಎಂದು ಭಾವಿಸಿ ಅನೇಕರು ಲವ್ ಜಿಹಾದ್ ಆರೋಪ ಹೊರಿಸಿದ್ದರು. ಆದರೆ ಆಕೆ ಕ್ರೈಸ್ತ ಎಂದು ಅಮೀರ್ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು.
ಪತಿ ಆರೋಗ್ಯಕ್ಕಾಗಿ ತಿರುಪತಿ ಮೆಟ್ಟಿಲು ಹತ್ತಿದ ಪವನ್ ಪತ್ನಿ
ಹೈದರಾಬಾದ್: ಭುಜದ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ರ ಆರೋಗ್ಯಕ್ಕಾಗಿ ಅವರ ಪತ್ನಿ, ರಷ್ಯಾ ಮೂಲದ ಅನ್ನಾ ಕೊನಿಡಾಲ ಅವರು ಶುಕ್ರವಾರ ಅಲಿಪಿರಿ ಮಾರ್ಗದ ಮೂಲಕ ನಡೆದುಕೊಂಡೇ ತಿರುಪತಿ ಬೆಟ್ಟವನ್ನೇರಿದ್ದಾರೆ. ಶನಿವಾರ ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದು ಸುಪ್ರಭಾತ ಸೇವೆಯಲ್ಲೂ ಭಾಗಿಯಾಗಿದ್ದಾರೆ.
ಈ ಬಗ್ಗೆ ಇನ್ಸ್‌ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ತಿರುಮಲ ಬೆಟ್ಟವನ್ನು ಹತ್ತುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಷ್ಟಕರವಾಗಿತ್ತು. ನಡುನಡುವೆ ನಿಲ್ಲಿಸಿಬಿಡೋಣ ಅನ್ನಿಸಿದ್ದೂ ಉಂಟು. ಆದರೆ ಅಂಥ ಸಂದರ್ಭಗಳಲ್ಲಿ ಮೆಟ್ಟಿಲು ಎಣಿಸುವುದರ ಬದಲು ನನಗೆ ಸಿಕ್ಕಿರುವ ಪರಿವಾರ, ಆರೋಗ್ಯದಂತಹ ವರಗಳನ್ನು ಲೆಕ್ಕ ಮಾಡುತ್ತಾ ನಡೆಯತೊಡಗಿದೆ’ ಎಂದು ಹೇಳಿದ್ದಾರೆ.
ಈ ಮೊದಲು ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ತಮ್ಮ ಮಗ ಸುರಕ್ಷಿತವಾಗಿ ಚೇತರಿಸಿಕೊಂಡಿದ್ದಕ್ಕಾಗಿ ಕೃತಜ್ಞತೆಯ ಸಂಕೇತವಾಗಿ, ಅನ್ನಾ ಅವರು ತಿರುಮಲ ದೇವಾಲಯದಲ್ಲಿ ಮುಡಿ ಅರ್ಪಿಸಿದ್ದರು.
6 ಶಿಂಧೆ ಸಂಸದರಿಗೆ ಮಾನ್ಯತೆ, 20 ಟಿಎಂಸಿ ಎಂಪಿಗಳಿಗೆ ಪ್ರತ್ಯೇಕ ಆಸನ
ನವದೆಹಲಿ: ಲೋಕಸಭಾ ಮುಂಗಾರು ಅಧಿವೇಶನಕ್ಕೂ ಮುನ್ನ ಸ್ಪೀಕರ್ ಓಂ ಬಿರ್ಲಾ, ಅವರು ಮಹಾರಾಷ್ಟ್ರದಲ್ಲಿ ಶಿವಸೇನೆ ಯುಬಿಟಿ ಬಣದಿಂದ ಪಕ್ಷಾಂತರಗೊಂಡು ಶಿಂಧೆ ಬಣಕ್ಕೆ ಸೇರಿದ 6 ಸಂಸದರಿಗೆ ಶಿವಸೇನಾ ಸಂಸದರು ಎಂಬ ಮಾನ್ಯತೆ ನೀಡಿದ್ದಾರೆ. ಇದರಿಂದ ಶಿಂಧೆ ಶಿವಸೇನೆ ಬಲ ಲೋಕಸಭೆಯಲ್ಲಿ 13ಕ್ಕೇರಿದೆ.ಮತ್ತೊಂದೆಡೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲಿನ ಬಳಿಕ ಬಂಡಾಯವೆದ್ದಿರುವ 20 ಸಂಸದರಿಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದರೆ ಅವರಿಗೆ ಪ್ರತೇಕ ಆಸನಗಳ ವ್ಯವಸ್ಥೆ ಕಲ್ಪಿಸುವ ಮನವಿಯನ್ನು ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ. ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ.
ಅಕ್ರಮ ನಿರ್ಮಾಣ: ಅಭಿಷೇಕ್ ಬ್ಯಾನರ್ಜಿ ಕಚೇರಿ ಧ್ವಂಸ
ಪಿಟಿಐ ಕೋಲ್ಕತಾ (ಪ.ಬಂಗಾಳ)ಕಟ್ಟಡ ಯೋಜನೆ ಅನುಮೋದನೆ ಪಡೆಯದೆ, ನಿಯಮಗಳ ಉಲ್ಲಂಘನೆ ಮಾಡಿ ನಿರ್ಮಿಸಲಾಗಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿಯನ್ನು ಜಿಲ್ಲಾಡಳಿತ ಶನಿವಾರ ಧ್ವಂಸ ಮಾಡಿದೆ.
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಆಮ್‌ತಾಲಾದಲ್ಲಿ ಅಭಿಷೇಕ್, ಪಕ್ಷದ ಕಚೇರಿಯನ್ನು ನಡೆಸುತ್ತಿದ್ದರು. ಅಕ್ರಮ ನಿರ್ಮಾಣದ ಕಾರಣ ಅದನ್ನು ಕೇಂದ್ರ ಪಡೆಗಳು, ಪೊಲೀಸರ ಭಾರಿ ಭದ್ರತೆಯೊಂದಿಗೆ ತೆರವು ಮಾಡಲಾಗಿದೆ. ಅಗ್ನಿಶಾಮಕ, ತುರ್ತು ಸೇವಾ ಸಿಬ್ಬಂದಿಯೂ ಅಲ್ಲಿದ್ದರು. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಿಸಿದರು. ಕೆಲವರು ಪಕ್ಷದ ಪರ ಘೋಷಣೆ ಕೂಗಿದರು. ಸ್ಥಳೀಯ ಬಿಜೆಪಿ ಶಾಸಕ ಅಗ್ನಿಶ್ವರ್ ನಸ್ಕರ್ ಜಿಲ್ಲಾಡಳಿತದ ಕ್ರಮವನ್ನು ಸ್ವಾಗತಿಸಿದ್ದಾರೆ.ಅಭಿಷೇಕ್ ಕಚೇರಿ ಅಕ್ರಮ ನಿರ್ಮಾಣದ ಬಗ್ಗೆ ದೂರುಗಳು ಬಂದ ನಂತರ ಸಂಬಂಧಿಸಿದವರಿಗೆ ಕಾನೂನು ಪ್ರಕ್ರಿಯೆ ನಡೆಸಲು ಜು.15ಕ್ಕೆ ನೋಟಿಸ್ ನೀಡಲಾಗಿದೆ. ಆದರೆ 2 ಬಾರಿ ನೋಟಿಸ್ ನೀಡಿದರೂ ಉತ್ತರ ಬಾರದಿದ್ದರಿಂದ ತೆರವು ಕಾರ್ಯ ಕೈಗೊಳ್ಳಲಾಗಿದೆ ಎಂದು ದಕ್ಷಿಣ 24 ಪರಗಣ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಅಭಿಷೇಕ್ ಡೈಮಂಡ್ ಹಾರ್ಬರ್ ಕ್ಷೇತ್ರ ಟಿಎಂಸಿ ಸಂಸದ. ಅಮತಲಾ ಕ್ಷೇತ್ರದ ಒಂದು ಭಾಗ.
