ಮಾಲೇಗಾಂವ್‌ ಸ್ಫೋಟ ಕೇಸಲ್ಲಿ ಎಲ್ಲ ಆರೋಪಿಗಳೂ ಖುಲಾಸೆ

| N/A | Published : Aug 01 2025, 12:00 AM IST / Updated: Aug 01 2025, 04:29 AM IST

ಸಾರಾಂಶ

ಮುಂಬೈನಿಂದ 200 ಕಿ.ಮೀ. ದೂರದಲ್ಲಿರುವ, ಮುಸ್ಲಿಂ ಬಾಹುಳ್ಯದ ಮಾಲೇಗಾಂವ್‌ನಲ್ಲಿ 6 ಜನರನ್ನು ಬಲಿ ಪಡೆದಿದ್ದ ಬೈಕ್‌ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಸೇರಿದಂತೆ ಎಲ್ಲಾ 7 ಆರೋಪಿಗಳನ್ನು ನಿರ್ದೋಷಿಗಳು ಎಂದು ಘೋಷಿಸಿ   ನ್ಯಾಯಾಲಯ  ಮಹತ್ವದ ತೀರ್ಪು ನೀಡಿದೆ.

ಮುಂಬೈ: ಮುಂಬೈನಿಂದ 200 ಕಿ.ಮೀ. ದೂರದಲ್ಲಿರುವ, ಮುಸ್ಲಿಂ ಬಾಹುಳ್ಯದ ಮಾಲೇಗಾಂವ್‌ನಲ್ಲಿ 6 ಜನರನ್ನು ಬಲಿ ಪಡೆದಿದ್ದ ಬೈಕ್‌ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಸೇರಿದಂತೆ ಎಲ್ಲಾ 7 ಆರೋಪಿಗಳನ್ನು ನಿರ್ದೋಷಿಗಳು ಎಂದು ಘೋಷಿಸಿ ಸ್ಥಳೀಯ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ. ಆರೋಪಿಗಳ ವಿರುದ್ಧ ಯಾವುದೇ ವಿಶ್ವಾಸಾರ್ಹ ಮತ್ತು ದೃಢ ಸಾಕ್ಷ್ಯಗಳಿಲ್ಲ. ಅವರು ಅನುಮಾನದ ಲಾಭ ಪಡೆಯಲು ಅರ್ಹರು ಎಂದು ನ್ಯಾಯಾಲಯ ಹೇಳಿದೆ. ಇದರೊಂದಿಗೆ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎಂಬ ಪದ ಬಳಕೆ ಮೂಲಕ ಭಾರೀ ಟೀಕೆ ಮಾಡಿದ್ದ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರಿಗೆ ಭಾರೀ ಮುಖಭಂಗವಾಗಿದೆ.

ನ್ಯಾಯಾಲಯದ ತೀರ್ಪು ಸತ್ಯ, ಕೇಸರಿ, ಧರ್ಮಕ್ಕೆ ಸಂದ ಜಯ ಎಂದು ಪ್ರಜ್ಞಾ ಸಿಂಗ್‌ ಸೇರಿದಂತೆ ದೋಷಮುಕ್ತರಾದವರು ಪ್ರತಿಕ್ರಿಯಿಸಿದ್ದರೆ, ಇದೊಂದು ಐತಿಹಾಸಿಕ ತೀರ್ಪು ಎಂದು ಬಿಜೆಪಿ ಬಣ್ಣಿಸಿದೆ. ಈ ನಡುವೆ ಹಿಂದೂ ಭಯೋತ್ಪಾದನೆಯನ್ನು ಮೊದಲ ಬಾರಿ ಮತ್ತು ಬಳಿಕ ಪದೇ ಪದೇ ಬಳಸಿದ್ದ ದಿಗ್ವಿಜಯ್‌ ಸಿಂಗ್‌, ಉಗ್ರವಾದಕ್ಕೆ ಧರ್ಮವಿಲ್ಲ. ಯಾವುದೇ ಧರ್ಮವೂ ಉಗ್ರವಾದವನ್ನು ಬೋಧಿಸುವುದಿಲ್ಲ ಎಂದು ನಣುಕಿಕೊಳ್ಳುವ ಯತ್ನ ಮಾಡಿದ್ದಾರೆ. ಮತ್ತೊಂದೆಡೆ ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಅಸಾದುದ್ದೀನ್‌ ಒವೈಸಿ ನಾಯಕತ್ವದ ಎಂಐಎಂ ಪಕ್ಷದ ನಾಯಕರು ಆಗ್ರಹಿಸಿದ್ದಾರೆ.

ಪ್ರಕರಣ ಹಿನ್ನೆಲೆ:2008ರ ಸೆ.29ರಂದು ರಮ್ಜಾನ್‌ ವೇಳೆ ಮಾಲೇಗಾಂವ್‌ನ ಮಸೀದಿಯೊಂದರ ಬಳಿ ಬೈಕ್‌ಗೆ ಕಟ್ಟಿದ್ದ ವಸ್ತುವೊಂದು ಸ್ಫೋಟಗೊಂಡು 6 ಜನರು ಸಾವನ್ನಪ್ಪಿ, 101 ಜನರು ಗಾಯಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ನಂತರದ ದಿನಗಳಲ್ಲಿ ಪ್ರಜ್ಞಾ ಸಿಂಗ್‌ ಠಾಕೂರ್‌, ನಿವೃತ್ತ ಲೆಫ್ಟಿನಂಟ್‌ ಕರ್ನಲ್‌ ಪ್ರಸಾದ್‌ ಪುರೋಹಿತ್‌, ಮೇಜರ್‌ ರಮೇಶ್‌ ಉಪಾಧ್ಯಾಯ, ಅಜಯ್‌ ರಾಹ್ರೀಕರ್‌, ಸುಧಾಕರ್‌ ದ್ವಿವೇದಿ, ಸುಧಾಕರ್‌ ಚರ್ತುವೇದಿ ಮತ್ತು ಸಮೀರ್‌ ಕುಲಕರ್ಣಿ ಅವರನ್ನು ಬಂಧಿಸಿತ್ತು. ಬಲಪಂಥೀಯ ‘ಅಭಿನವ ಭಾರತ್‌’ ಸಂಘಟನೆ ದಾಳಿಯ ಸಂಚು ರೂಪಿಸಿತ್ತು ಎಂದು ಎಟಿಎಸ್‌ ಆರೋಪಿಸಿತ್ತು. 2009ರಲ್ಲಿ ಆರೋಪಿಗಳ ವಿರುದ್ಧ ಮೋಕಾ ಕಾಯ್ದೆಯಡಿ ದೋಷಾರೋಪ ಹೊರಿಸಲಾಗಿತ್ತು. ಅದರಲ್ಲಿ ಮಾಲೇಗಾಂವ್‌ನ ಮುಸ್ಲಿಂ ಸಮುದಾಯವನ್ನು ಬೆದರಿಸಲು, ಅಗತ್ಯ ಸೌಲಭ್ಯಗಳಿಗೆ ತೊಂದರೆ ಉಂಟು ಮಾಡಲು, ಕೋಮು ಸಾಮರಸ್ಯ ಕದಡಲು ಮತ್ತು ದೇಶದ ಆಂತರಿಕ ಭದ್ರತೆಗೆ ಬೆದರಿಕೆ ಒಡ್ಡುವ ಉದ್ದೇಶದಿಂದ ಆರೋಪಿಗಳು ಸ್ಫೋಟದ ಸಂಚು ರೂಪಿಸಿದ್ದರು ಎಂದು ಆರೋಪಿಸಿತ್ತು.

2011ರಲ್ಲಿ ರಾಷ್ಟ್ರೀಯ ತನಿಖಾ ದಳ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ತನಿಖೆ ನಡೆಸಿ 2018ರಲ್ಲಿ 7 ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆದು ನ್ಯಾಯಾಲಯ ಇದೀಗ ಸಾಕ್ಷ್ಯಗಳ ಕೊರತೆ ನೀಡಿ ಆರೋಪಿಗಳನ್ನು ಖುಲಾಸೆ ಮಾಡಿದೆ.

ಕೋರ್ಟ್‌ ಹೇಳಿದ್ದೇನು?:ಕೇವಲ ಸಂಶಯವು ನಿಜವಾದ ಸಾಕ್ಷ್ಯದ ಜಾಗವನ್ನು ತುಂಬಲಾರದು. ಇಡೀ ಪ್ರಕರಣದ ಒಟ್ಟಾರೆ ಸಾಕ್ಷ್ಯವು ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಲು ನ್ಯಾಯಾಲಯಕ್ಕೆ ವಿಶ್ವಾಸವನ್ನು ನೀಡುತ್ತಿಲ್ಲ. ಆರೋಪಿಗಳ ವಿರುದ್ಧ ಯಾವುದೇ ವಿಶ್ವಾಸಾರ್ಹ ಮತ್ತು ದೃಢ ಸಾಕ್ಷ್ಯಗಳು ಕಂಡುಬರುತ್ತಿಲ್ಲ. ಜೊತೆಗೆ ಸ್ಫೋಟಕ್ಕೆ ಬಳಸಿದ ಬೈಕ್‌ ತನಿಖಾ ಸಂಸ್ಥೆಗಳು ಹೇಳಿದಂತೆ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್‌ ಹೆಸರಲ್ಲಿ ನೋಂದಣಿ ಆಗಿಲ್ಲ. ಜೊತೆಗೆ ಬೈಕ್‌ ಬಳಸಿ ಸ್ಫೋಟ ನಡೆಸಿದ್ದು ಕೂಡ ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿತು. ಜೊತೆಗೆ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯವಾಗದು ಎಂದು ಹೇಳಿತು.

 ಭಗವಾ ಧ್ವಜಕ್ಕೆ ಅಪಮಾನಮಾಡಿದವರಿಗೆ ಶಿಕ್ಷೆ ಆಗುತ್ತೆ

ನನ್ನ ಇಡೀ ಜೀವನಕ್ಕೆ ಕಳಂಕ ತರಲಾಗಿತ್ತು. ನನ್ನ ಇಡೀ ಜೀವನ ಹಾಳಾಗಿತ್ತು. ಆದರೆ ಸನ್ಯಾಸಿಯಾಗಿದ್ದ ಕಾರಣ ನಾನು ಬದುಕಲು ಸಾಧ್ಯವಾಯಿತು. ಈ ಪ್ರಕರಣದಲ್ಲಿ ನಾನೊಬ್ಬಳೇ ಅಲ್ಲ, ಕೇಸರಿ ಪಡೆ(ಭಗವಾ)ಯೂ ಹೋರಾಡಿತು. ಇಂದು ಕೇಸರಿಗೆ ಜಯವಾಗಿದೆ, ನ್ಯಾಯ ಜಯಿಸಿದೆ. ಭಗವಾ ಅವಮಾನಿಸಿದವರನ್ನು ಭಗವಂತನೇ ಶಿಕ್ಷಿಸುತ್ತಾನೆ. 

-ಪ್ರಜ್ಞಾ ಠಾಕೂರ್‌

 ತನಿಖಾ ಸಂಸ್ಥೆಯ ತಪ್ಪಿಲ್ಲ, ಸಂಸ್ಥೆಯಲ್ಲಿರುವವರ ತಪ್ಪುಯಾವುದೇ ತನಿಖಾ ಸಂಸ್ಥೆಯ ತಪ್ಪಿಲ್ಲ. ಆದರೆ ಈ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜನರೇ ತಪ್ಪು. ಈ ರಾಷ್ಟ್ರ ಅದ್ಭುತವಾಗಿದೆ. ತಪ್ಪು ಜನರು ನಮ್ಮಂತಹವರನ್ನು ನೋಯಿಸದಂತೆ ಎಚ್ಚರ ವಹಿಸಬೇಕು. ನಾನು ಮೊದಲಿನಂತೆಯೇ ದೇಶಸೇವೆಯನ್ನು ಮುಂದುವರೆಸುತ್ತೇನೆ. 

-ಪ್ರಸಾದ್‌ ಪುರೋಹಿತ್‌

 ಸಾಧ್ವಿ ಪ್ರಜ್ಞಾ, ಕರ್ನಲ್‌ ಪುರೋಹಿತ್‌ ಸೇರಿ ಯಾರ ವಿರುದ್ಧವೂ ಸಾಕ್ಷ್ಯ ಇಲ್ಲ: ಕೋರ್ಟ್‌- ಹಿಂದು ಭಯೋತ್ಪಾದನೆ ಪದ ಸೃಷ್ಟಿಸಿದ್ದ ಕಾಂಗ್ರೆಸ್‌ ನಾಯಕರಿಗೆ ಮುಖಭಂಗ: ಬಿಜೆಪಿ

ತೀರ್ಪಿನಲ್ಲಿ ಏನಿದೆ?

- ಯಾವ ಧರ್ಮವೂ ಹಿಂಸೆಯನ್ನು ಕಲಿಸುವುದಿಲ್ಲ. ಉಗ್ರವಾದಕ್ಕೆ ಧರ್ಮವಿಲ್ಲ. ಹಾಗೆಂದು, ಕೇವಲ ಗ್ರಹಿಕೆಯ ಆಧಾರದಲ್ಲಿ ಶಿಕ್ಷೆ ವಿಧಿಸಲಾಗದು

ಇಡೀ ಪ್ರಕರಣದಲ್ಲಿರುವ ಸಾಕ್ಷ್ಯವು ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸುವ ಸಂಬಂಧ ನ್ಯಾಯಾಲಯಕ್ಕೆ ವಿಶ್ವಾಸವನ್ನು ನೀಡುತ್ತಿಲ್ಲ

- ತನಿಖಾ ಸಂಸ್ಥೆಗಳು ಹೇಳುತ್ತಿರುವಂತೆ, ಮಾಲೇಗಾಂವ್‌ ಸ್ಫೋಟಕ್ಕೆ ಬಳಸಿದ ಬೈಕ್‌ ಪ್ರಜ್ಞಾ ಠಾಕೂರ್‌ ಹೆಸರಿನಲ್ಲಿ ನೋಂದಣಿ ಆಗಿರಲಿಲ್ಲ

- ಬೈಕ್‌ ಬಳಸಿ ಸ್ಫೋಟ ನಡೆಸಿದ್ದ ಕೂಡ ಸಾಬೀತಾಗಿಲ್ಲ. ಅನುಮಾನದ ಲಾಭಕ್ಕೆ ಅವರು ಅರ್ಹರು: ಸ್ಥಳೀಯ ನ್ಯಾಯಾಲಯದಿಂದ ತೀರ್ಪು

ಏನಿದು ಪ್ರಕರಣ?

- ಮುಂಬೈನಿಂದ 200 ಕಿ.ಮೀ. ದೂರದಲ್ಲಿರುವ, ಮುಸ್ಲಿಂ ಬಾಹುಳ್ಯದ ಮಾಲೇಗಾಂವ್‌ನಲ್ಲಿ 2008ರಲ್ಲಿ ಸ್ಫೋಟ ಸಂಭವಿಸಿತ್ತು

- ರಮ್ಜಾನ್‌ ಹಬ್ಬಕ್ಕೆ ಎರಡು ದಿನ ಮುನ್ನ ಅಂದರೆ, 2008ರ ಸೆ.29ರಂದು ಮೋಟರ್‌ ಬೈಕ್‌ನಲ್ಲಿ ಇಟ್ಟಿದ್ದ ಬಾಂಬ್‌ ಸಿಡಿದಿತ್ತು

- ಜನದಟ್ಟಣೆಯ ಪ್ರದೇಶದಲ್ಲಿ ಸ್ಫೋಟಗೊಂಡ ಬಾಂಬ್‌ಗೆ 6 ಮಂದಿ ಬಲಿಯಾಗಿದ್ದರು. 101 ಜನರು ಗಾಯಗೊಂಡಿದ್ದರು

- ಸಾಧ್ವಿ ಪ್ರಜ್ಞಾ ಸಿಂಗ್‌, ಕರ್ನಲ್‌ ಪುರೋಹಿತ್‌, ಮೇಜರ್‌ ರಮೇಶ್‌ ಸೇರಿ ಆರು ಮಂದಿಯನ್ನು ಎಟಿಎಸ್‌ ಬಂಧನ ಮಾಡಿತ್ತು

- ಬಲಪಂಥೀಯ ಅಭಿನವ ಭಾರತ ಸಂಘಟನೆ ದಾಳಿಯ ಸಂಚನ್ನು ರೂಪಿಸಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು

- ಇದು ಹಿಂದು ಭಯೋತ್ಪಾದನೆ ಎಂದು ದಿಗ್ವಿಜಯ್‌ ಸಿಂಗ್‌ ಆದಿಯಾಗಿ ಹಲವು ಕಾಂಗ್ರೆಸ್‌ ನಾಯಕರ ಟೀಕಾ ಪ್ರಹಾರ ನಡೆಸಿದ್ದರು

Read more Articles on