ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ ಶಿವ ದೇಗುಲ: ಹೊಸ ವಿವಾದ

| Published : Nov 29 2024, 01:01 AM IST / Updated: Nov 29 2024, 04:45 AM IST

ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ ಶಿವ ದೇಗುಲ: ಹೊಸ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾದಲ್ಲಿ ಇರುವ ‘ಖವಾಜಾ ಘರಿಬ್ ನವಾಜ್ ಸಮಾಧಿ ಸ್ಥಳದಲ್ಲಿ ಶಿವ ದೇವಾಲಯವಿದೆ. ಈ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಕೋರಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

  ಅಜ್ಮೇರ್‌ : ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾದಲ್ಲಿ ಇರುವ ‘ಖವಾಜಾ ಘರಿಬ್ ನವಾಜ್ ಸಮಾಧಿ ಸ್ಥಳದಲ್ಲಿ ಶಿವ ದೇವಾಲಯವಿದೆ. ಈ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಕೋರಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇದರ ವಿಚಾರಣೆ ಆರಂಭಿಸಿರುವ ಕೋರ್ಟು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ), ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಹಾಗೂ ಅಜ್ಮೇರ್ ದರ್ಗಾ ಕಮಿಟಿಗೆ ನೋಟಿಸ್‌ ಜಾರಿ ಮಾಡಿದೆ. ಮುಂದಿನ ವಿಚಾರಣೆ ಡಿ. 20 ರಂದು ನಡೆಯಲಿದೆ.

ಉತ್ತರ ಪ್ರದೇಶದ ಸಂಭಲ್‌ ಶಾಹಿ ಮಸೀದಿ ಸಮೀಕ್ಷೆಗೆ ಕೋರ್ಟ್‌ ಆದೇಶಿಸಿತ್ತು. ಅದರ ನಡುವೆಯೇ ಅಜ್ಮೇರ್‌ನಲ್ಲೂ ಅದೇ ಮಾದರಿಯ ವಿದ್ಯಮಾನ ನಡೆದಿದೆ.

ವಿಷ್ಣು ಗುಪ್ತಾ ಹಾಗೂ ವಕೀಲ ಯೋಗೇಶ್‌ ಸಿರೋಜಾ ಎಂಬುವರು ಅರ್ಜಿ ಸಲ್ಲಿಸಿ, ‘ದರ್ಗಾದಲ್ಲಿ ಶಿವನ ದೇವಾಲಯವಿದೆ. ದೇವಾಲಯದ ಶಿಲಾ ಕುರುಹುಗಳು ಅಲ್ಲಿವೆ. ಆ ದೇವಸ್ಥಾನದಲ್ಲಿ ಮತ್ತೆ ಪೂಜೆ ಆರಂಭಿಸಲು ಆದೇಶಿಸಬೇಕು, ದರ್ಗಾವನ್ನು ಸಂಕಟ ಮೋಚನ ಮಹಾದೇವ ದೇಗುಲ ಎಂದು ಘೋಷಿಸಬೇಕು ಮತ್ತು ದರ್ಗಾದ ನೋಂದಣಿ ರದ್ದುಗೊಳಿಸಬೇಕು. ಎಎಸ್‌ಐ ಮೂಲಕ ಸಮೀಕ್ಷೆ ನಡೆಸಿ, ಅದರ ಪೂಜೆಯ ಅಧಿಕಾರವನ್ನು ಹಿಂದೂಗಳಿಗೆ ನೀಡಬೇಕು’ ಎಂದು ಕೋರಿದ್ದಾರೆ.

 ಆಕ್ಷೇಪ, ಸ್ವಾಗತ:ಈ ನಡುವೆ ಸ್ಥಳೀಯ ನ್ಯಾಯಾಲಯದ ನಿರ್ಧಾರವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ, ದರ್ಗಾ ಉಸ್ತುವಾರಿ ಹೊತ್ತಿರುವ ಖಾದಿಂಗಳ ಸಂಘಟನೆ, ಎಂಐಎಂ ನಾಯಕ ಅಸಾಸುದ್ದೀನ್‌ ಒವೈಸಿ, ಸಿಪಿಎಂ, ಪಿಡಿಪಿ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಇದು 1991ರ ಪ್ರಾರ್ಥನಾ ಸ್ಥಳಗಳ ವಿಶೇಷ ಕಾಯ್ದೆಯ ಉಲ್ಲಂಘನೆಯಾಗಿದೆ. ಇಂಥ ಆದೇಶ ದೇಶದ ಸಂವಿಧಾನವನ್ನು ಅಣಕ ಮಾಡುವಂತಿದೆ. 800 ವರ್ಷಗಳಿಂದ ಇರುವ ದರ್ಗಾಕ್ಕೆ ಹಾಲಿ ಪ್ರಧಾನಿ ಮೋದಿಯಾಗಿ ಎಲ್ಲಾ ಪ್ರಧಾನಿಗಳು ವಸ್ತ್ರ ಸಮರ್ಪಣೆ ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾ ಇದೀಗ ಇದ್ದಕ್ಕಿದ್ದಂತೆ ಅದರ ಹಿನ್ನೆಲೆ ಪ್ರಶ್ನಿಸುವುದು ಅತ್ಯಂತ ಕಳವಳಕಾರಿ ಮತ್ತು ನೋವಿನ ಸಂಗತಿ ಎಂದಿದ್ದಾರೆ. 

ಇನ್ನೊಂದೆಡೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಮತ್ತಷ್ಟು ರಕ್ತಪಾತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.ಈ ನಡುವೆ ನ್ಯಾಯಾಲಯದ ಆದೇಶವನ್ನು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಸ್ವಾಗತಿಸಿದ್ದಾರೆ. ಕೋರ್ಟ್‌ ಸಮೀಕ್ಷೆಗೆ ಆದೇಶ ಕೊಟ್ಟಿದ್ದರಲ್ಲಿ ತಪ್ಪೇನಿದೆ? ಮುಘಲರು ಭಾರತಕ್ಕೆ ಬಂದು ನಮ್ಮ ದೇಗುಲಗಳನ್ನು ಧ್ವಂಸ ಮಾಡಿದರು ಎಂಬುದು ಸತ್ಯ ಎಂದು ಹೇಳಿದ್ದಾರೆ.

ಖಾದಿಂಗಳ ವಿರೋಧ:

ಅಜ್ಮೀರ್ ದರ್ಗಾದ ‘ಖಾದಿಮ್‌’ಗಳನ್ನು ಪ್ರತಿನಿಧಿಸುವ ಸಂಸ್ಥೆಯು ಈ ಅರ್ಜಿಯನ್ನು ಖಂಡಿಸಿದೆ. ‘ಘರಿಬ್‌ ನವಾಜ್‌ ಸಮಾಧಿ ಸ್ಥಳ ಹಿಂದೂ-ಮುಸ್ಲಿಮರ ಏಕತಾ ಸ್ಥಳ. ಆದರೆ ಬಲಪಂಥೀಯ ಶಕ್ತಿಗಳು ಮುಸ್ಲಿಮರನ್ನು ಹತ್ತಿಕ್ಕಲು ಮತ್ತು ಕೋಮು ಸಾಮರಸ್ಯ ಕಡದಲು ಯತ್ನಿಸುತ್ತಿವೆ’ ಎಂದಿದೆ. ಆದರೆ ದರ್ಗಾ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಬಾಬ್ರಿ ಮಸೀದಿ ಪ್ರಕರಣದ ನಿರ್ಧಾರವನ್ನು ಸಮುದಾಯವು ಒಪ್ಪಿಕೊಂಡಿದೆ ಮತ್ತು ಅದರ ನಂತರ ಏನೂ ಆಗುವುದಿಲ್ಲ ಎಂದು ನಾವು ನಂಬಿದ್ದೇವೆ ಆದರೆ ದುರದೃಷ್ಟವಶಾತ್ ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ. ಉತ್ತರ ಪ್ರದೇಶದ ಸಂಭಲ್ ಉದಾಹರಣೆ ನಮ್ಮ ಮುಂದಿದೆ. ಇದು ನಿಲ್ಲಬೇಕು’ ಎಂದು ಖಾದಿಂ ಸಂಘಟನೆಯ ಸಯ್ಯದ್‌ ಸರ್ವರ್‌ ಚಿಸ್ತಿ ಹೇಳಿದ್ದಾರೆ.