ಸಾರಾಂಶ
ಕೋಲ್ಕತಾ: ಪ.ಬಂಗಾಳದ ಪಡಿತರ ಹಗರಣ, ಭೂಕಬಳಿಕೆ ಹಾಗೂ ಸಂದೇಶ್‌ಖಾಲಿಯಲ್ಲಿ ನಿರ್ದಿಷ್ಟ ಕೋಮಿನ ಮಹಿಳೆಯುರ ಮೇಲೆ ಅತ್ಯಚಾರ ಆರೋಪಕ್ಕೆ ಗುರಿಯಾಗಿ ತಿಂಗಳಿಂದ ತಲೆಮರೆಸಿಕೊಂಡಿರುವ ಟಿಎಂಶಿ ನಾಯಕ ಶೇಖ್ ಶಾಹಜಾನ್ ಅವರನ್ನು ಬಂಧಿಸುವಂತೆ ಪ.ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಶೇಖ್ ಕುರಿತಾದ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಶಿವಜ್ಞಾನಂ ಅವರ ಪೀಠ, ‘ಶೇಖ್ ಬಂಧನಕ್ಕೆ ಕೋರ್ಟ್ ಆದೇಶಗಳು ಅಡ್ಡಿ ಆಗುತ್ತಿವೆ’ ಎಂಬ ಟಿಎಂಸಿ ನಾಯಕರು ಹಾಗೂ ವಕೀಲರ ವಾದವನ್ನು ತಳ್ಳಿಹಾಕಿದರು. ‘ನಾವು ಶೇಖ್ ವಿರುದ್ಧದ ಬಂಗಾಳ ಪೊಲೀಸ್-ಸಿಬಿಐ ಜಂಟಿ ತನಿಖೆಗೆ ನಡೆ ನೀಡಿದ್ದೇವೆ.
ಆದರೆ ಈಗಿನ ಗಂಭೀರ ಆರೋಪಗಳಿಗೆ ಸಂಬಂಧೀಸಿದಂತೆ ನಾವು ಯಾವುದೇ ತಡೆ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು ಹಾಗೂ ವಿಚಾರಣೆಯನ್ನು ಮಾ.4ಕ್ಕೆ ಮುಂದೂಡಿದರು.
‘ಇದೇ ವೇಳೆ, ಪ.ಬಂಗಾಳ ಸರ್ಕಾರ ಶಾಹಜಾನ್‌ನನ್ನು ಬಂಧಿಸದೇ ಏಕೆ ಸುಮ್ಮನಿದೆ. ನಾವು ಆತನ ಬಂಧನಕ್ಕೆ ತಡೆಯನ್ನೇ ನೀಡಿಲ್ಲ. ಪೊಲೀಸರು ಆತನನ್ನು ಬಂಧಿಸಬಹುದು’ ಎಂದು ಪ.ಬಂಗಾಳ ಸರ್ಕಾರಕ್ಕೆ ಚಾಟಿ ಬೀಸಿತು.
7 ದಿನದೊಳಗೆ ಬಂಧನ-ಟಿಎಂಸಿ: ನಾಪತ್ತೆ ಆಗಿರುವ ತಮ್ಮ ಪಕ್ಷದ ನಾಯಕ ಶಾಹಜಾನ್ ಶೇಖ್‌ನನ್ನು ಇನ್ನು 1 ವಾರದೊಳಗೆ ಬಂಧಿಸಲಾಗುತ್ತದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಸ್ಪಷ್ಟಪಡಿಸಿದ್ದಾರೆ.
ಶೇಖ್ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ (ಇ.ಡಿ.) ಪಡಿತರ ಮತ್ತು ಭೂಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿತ್ತು. ಆಗ ಆತ ಪರಾರಿಯಾಗಿದ್ದ ಹಾಗೂ ಆತನ ಬೆಂಬಲಿಗರು ಇ.ಡಿ. ಅಧಿಕಾರಿಗಳನ್ನು ಮನಸೋಇಚ್ಛೆ ಥಳಿಸಿದ್ದರು.
ಈ ವೇಳೆ ಶೇಖ್ ಹಿಂಬಾಲಕರು ಸಂದೇಶ್‌ಖಾಲಿಯ ಸುಂದರ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ವಿಷಯ ಬೆಳಕಿಗೆ ಬಂದಿತ್ತು.