ಮಣಿಪುರ ಗಲಭೆಗೆ ಕಾರಣವಾಗಿದ್ದ ವಿವಾದಿತ ಆದೇಶ ರದ್ದು

| Published : Feb 23 2024, 01:46 AM IST / Updated: Feb 23 2024, 08:46 AM IST

ಸಾರಾಂಶ

ಮೈತೇಯಿಗಳನ್ನು ಎಸ್ಟಿಗೆ ಸೇರಿಸಲು ಆದೇಶಿಸಿದ್ದ ಹೈಕೋರ್ಟ್‌ ಈಗ ತನ್ನದೇ ಆದೇಶವನ್ನು ನ್ಯಾಯಪೀಠ ರದ್ದು ಮಾಡಿದೆ. ಕಳೆದ ವರ್ಷದ ಈ ಆದೇಶದಿಂದ ಗಲಭೆ ಆಗಿ 200 ಜನ ಸಾವು ಕಂಡಿದ್ದರು.

ಇಂಫಾಲ್: ಮಣಿಪುರದಲ್ಲಿ ಭೀಕರ ಜನಾಂಗೀಯ ಸಂಘರ್ಷಕ್ಕೆ ನಾಂದಿ ಹಾಡಿ ಸುಮಾರು 200 ಜನರ ಹತ್ಯೆಗೆ ಕಾರಣವಾದ ವಿವಾದಿತ ಆದೇಶವನ್ನು ಮಣಿಪುರ ಹೈಕೋರ್ಟ್‌ ಈಗ ರದ್ದುಗೊಳಿಸಿದೆ. 

ಅರ್ಥಾತ್‌, ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವಂತೆ ತಾನೇ ನೀಡಿದ ಆದೇಶವನ್ನು ಹಿಂಪಡೆದುಕೊಂಡಿದೆ.

2023ರ ಮಾ.27ರಂದು ಅಂದಿನ ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾ। ಎಂ.ವಿ. ಮುರಳೀಧರನ್‌ ಆದೇಶ ಹೊರಡಿಸಿ, ‘ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಮಣಿಪುರ ಸರ್ಕಾರಕ್ಕೆ ಸೂಚನೆ ನೀಡಿದ್ದರು. 

ಇದನ್ನು ವಿರೋಧಿಸಿದ್ದ ಕುಕಿ ಸಮುದಾಯದ ಜನರು, ಈ ಆದೇಶದ ವಿರುದ್ಧ ದಂಗೆ ಎದ್ದಿದ್ದರು. ಆ ಬಳಿಕ ತಿಂಗಳಾನುಗಟ್ಟಲೆ ನಡೆದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಬಲಿಯಾಗಿದ್ದಾರೆ.

ಈ ನಡುವೆ, ಈ ಆದೇಶ ರದ್ದತಿ ಕೋರಿ ಮಣಿಪುರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ। ಗೋಲ್ಮಿ ಗೈಫುಲ್‌ಶಿಲ್ಲು ಅವರು, ‘ಎಸ್ಸಿ-ಎಸ್ಟಿ ಪಟ್ಟಿಗೆ ಜಾತಿಗಳನ್ನು ಸೇರಿಸುವಂತೆ ಸೂಚನೆ ನೀಡುವ ಅಧಿಕಾರ ಕೋರ್ಟ್‌ಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟು, ಈ ಹಿಂದೆ ಮಹಾರಾಷ್ಟ್ರದ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು. 

ಈ ಹಿನ್ನೆಲೆಯಲ್ಲಿ ಮೈತೇಯಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಆದೇಶವನ್ನು ರದ್ದು ಮಾಡುತ್ತೇವೆ’ ಎಂದು ಹೇಳಿದ್ದಾರೆ. ಇದರೊಂದಿಗೆ 1 ವರ್ಷದಿಂದ ನಡೆದಿರುವ ಜನಾಂಗೀಯ ಸಂಘರ್ಷಕ್ಕೆ ಮಹತ್ವದ ತಿರುವು ಸಿಕ್ಕಂತಾಗಿದೆ.