ಗೋವು ಕಳ್ಳಸಾಗಣೆ ಮಾಡಿದರೆ ತಲೆಕೆಳಗಾಗಿ ನೇಣು: ಅಮಿತ್‌ಶಾ

| Published : May 18 2024, 01:36 AM IST / Updated: May 18 2024, 04:53 AM IST

ಸಾರಾಂಶ

 ಮೋದಿ ಅವರನ್ನು 3ನೇ ಬಾರಿ ಪ್ರಧಾನಿ ಮಾಡಿ. ಆಗ ದೇಶದಲ್ಲಿ ಗೋಹತ್ಯೆ ಮಾಡುವವರನ್ನು, ಗೋವುಗಳ ಕಳ್ಳಸಾಗಣೆ ಮಾಡುವವರನ್ನು ಉಲ್ಟಾ ನೇತುಹಾಕುತ್ತೇವೆ  ಎಂದು ಅಮಿತ್‌ ಶಾ ಹೇಳಿದ್ದಾರೆ.

ಪಟನಾ: ‘ಎನ್‌ಡಿಎ ಮೈತ್ರಿಕೂಟ 3ನೇ ಬಾರಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸುತ್ತದೆ ಮತ್ತು ಗೋವುಗಳ ಕಳ್ಳಸಾಗಣೆದಾರರನ್ನು ತಲೆಕೆಳಗಾಗಿ ಗಲ್ಲಿಗೇರಿಸುತ್ತೇವೆ’ ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಹಾರದ ಮಧುಬನಿ ಮತ್ತು ಸೀತಾಮಢಿಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಶಾ,‘ನರೇಂದ್ರ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮತ್ತು ಗೋವು ಕಳ್ಳ ಸಾಗಾಣಿಕೆಗೆ ಅವಕಾಶ ನೀಡಲ್ಲ’ (ಗೋಹತ್ಯಾ ಕರ್ನೆ ವಾಲೋಂ ಕೋ ಉಲ್ಟಾ ಲಟ್ಕಾ ಕರ್ ಸಿದ್ಧ ಕರ್ ದೇಂಗೆ. ನಾ ಗಾಯ್‌ ಕಿ ತಸ್ಕರಿ ಹೋನೆ ದೇಂಗೆ, ನಾ ಹತ್ಯಾ) ಎಂದು ಹೇಳಿದರು. 

ಇದಲ್ಲದೆ, ರಾಮನ ರೀತಿಯಲ್ಲಿ ಸೀತಾಮಾತೆ ಜನ್ಮಸ್ಥಳವಾದ ಸೀತಾಮಢಿಯಲ್ಲೂ ಸೀತೆಗೆ ಮಂದಿರ ನಿರ್ಮಿಸಲಾಗುವುದು ಎಂದು ಪುನರುಚ್ಚರಿಸಿದರು.ಈಗಾಗಲೇ ಬಿಹಾರದಲ್ಲಿ ಹಸುಗಳು, ಕರುಗಳ ಹತ್ಯೆಯನ್ನು ನಿಷೇಧಿಸಲಾಗಿದ್ದು, 15 ವರ್ಷಕ್ಕಿಂತ ಮೇಲ್ಪಟ್ಟ ಹೋರಿಗಳು ಮತ್ತು ಹೋರಿಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಉಲ್ಲಂಘಿಸುವವರಿಗೆ 6 ತಿಂಗಳ ಜೈಲು ಮತ್ತು ಅಥವಾ 1,000 ರು. ದಂಡ ವಿಧಿಸಲಾಗುತ್ತದೆ. ದೇಶದ ಅನೇಕ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂಥ ಕಾನೂನು ಇದೆ. ಇದಕ್ಕಿಂತ ಕಠಿಣವಾದ ಹಾಗೂ ದೇಶಾದ್ಯಂತ ಏಕರೂಪ ಕಾನೂನು ರೂಪಿಸುವ ಉದ್ದೇಶ ಬಿಜೆಪಿಗೆ ಇದೆ ಎನ್ನಲಾಗಿದೆ.