ಕರೆನ್ಸಿ ಚಲಾವಣೆ ಏರಿಕೆಗೆ ಬಿತ್ತು ಬ್ರೇಕ್‌

| Published : Feb 26 2024, 01:38 AM IST

ಸಾರಾಂಶ

₹2000 ನೋಟು ಹಿಂಪಡೆತ ಪರಿಣಾಮ ಕರೆನ್ಸಿ ಚಲಾವಣೆ ಏರಿಕೆ ಪ್ರಮಾಣ ಶೇ.3.7ಕ್ಕೆ ಕುಸಿತ ಕಂಡಿದೆ. ಕಳೆದ ವರ್ಷ ಏರಿಕೆ ಪ್ರಮಾಣ ಶೇ.8.2ರಷ್ಟಿತ್ತು.

ಮುಂಬೈ: 2000 ರು.ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ಆರ್‌ಬಿಐ ನಿರ್ಧಾರದ ಪರಿಣಾಮ ಮಾರುಕಟ್ಟೆಯಲ್ಲಿ ಗೋಚರವಾಗಿದ್ದು, ಕರೆನ್ಸಿ ಚಲಾವಣೆಯಲ್ಲಿ ಕಂಡುಬರುವ ಏರಿಕೆಗೆ ಬ್ರೇಕ್‌ ಬಿದ್ದಿದೆ.ಕಳೆದ ವರ್ಷದ ಫೆ.9ರಂದು ಮುಕ್ತಾಯಗೊಂಡ ವಾರದಲ್ಲಿ ಕರೆನ್ಸಿ ಚಲಾವಣೆಯಲ್ಲಿ ಏರಿಕೆ ಪ್ರಮಾಣ ಶೇ.8.2ರಷ್ಟು ದಾಖಲಾಗಿದ್ದರೆ 2024ರ ಫೆ.9ಕ್ಕೆ ಮುಕ್ತಾಯಗೊಂಡ ವಾರದಲ್ಲಿ ಏರಿಕೆ ಪ್ರಮಾಣ ಶೇ.3.7ಕ್ಕೆ ಕುಸಿತವಾಗಿದೆ ಎಂದು ಆರ್‌ಬಿಐ ಹೇಳಿದೆ.

ಇದೇ ವೇಳೆ ಕಳೆದ ಜನವರಿ ತಿಂಗಳಲ್ಲಿ ಬ್ಯಾಂಕ್‌ ಠೇವಣಿಗಳಲ್ಲಿ ಎರಡಂಕಿಯ ಏರಿಕೆ ಕಂಡುಬಂದಿದೆ. ಇದು 2000 ರು. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ನೀಡಿದ ಅವಕಾಶ ಪರಿಣಾಮವಾಗಿರಬಹುದು ಎಂದು ಅದು ಹೇಳಿದೆ.

ಶೇ.98ರಷ್ಟು ಜಮೆ:ಜೊತೆಗೆ 2024ರ ಜ.31ರ ವೇಳೆಗೆ 2000 ರು. ಮುಖಬೆಲೆಯ ನೋಟುಗಳ ಪೈಕಿ ಶೆ.97.5ರಷ್ಟು ಮರಳಿ ಬ್ಯಾಂಕ್‌ಗಳಲ್ಲಿ ಜಮೆಯಾಗಿದೆ. ಇನ್ನು 8897 ಕೋಟಿ ರು.ಮೌಲ್ಯದ ನೋಟುಗಳ ಜನರ ಬಳಿಯೇ ಇದೆ. 2023ರ ಮೇ 19 ರಂದು 2000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರ ಪ್ರಕಟಿಸಿದ ದಿನ, ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ 2000 ರು. ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರು.ನಷ್ಟಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ.2016ರಲ್ಲಿ 500 ರು. ಮುಖಬೆಲೆಯ ಹಳೆಯ ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಅಪನಗದೀಕರಣದ ಮಾಡಿದ ಬಳಿಕ 2000 ರು. ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.