ಇದು ಹೆಚ್ಚು ಯುವ, ಹೆಚ್ಚು ಸುಶಿಕ್ಷಿತ ಲೋಕಸಭೆ!

| Published : Feb 11 2024, 01:47 AM IST / Updated: Feb 11 2024, 11:20 AM IST

ಸಾರಾಂಶ

ಉತ್ತಮ ವಿದ್ಯಾರ್ಹತೆ ಹೊಂದಿರುವವರ ಸಂಖ್ಯೆಯೂ ಹೆಚ್ಚು. ಉತ್ತಮ ಲಿಂಗಾನುಪಾತ, 397 ಸಂಸದರು ಮರು ಆಯ್ಕೆಯಂತಹ ವಿಶೇಷತೆಗಳನ್ನು ಪ್ರಸ್ತುತ ಲೋಕಸಭೆ ಒಳಗೊಂಡಿತ್ತು.

ನವದೆಹಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ 17ನೇ ಲೋಕಸಭೆ ಅತಿ ಹೆಚ್ಚು ಯುವಸಮೂಹ, ಉತ್ತಮ ವಿದ್ಯಾರ್ಹತೆ ಹೊಂದಿರುವ ಸಂಸದರನ್ನು ಹೊಂದಿರುವ ಲೋಕಸಭೆಯಾಗಿದೆ. ಅಲ್ಲದೇ ಈ ಬಾರಿ ಲಿಂಗಾನುಪಾತವೂ ಸಹ ಉತ್ತಮಗೊಂಡಿದೆ.

2019ರಲ್ಲಿ ಲೋಕಸಭೆ ರಚನೆಯಾದಾಗ 303 ಸಂಸದರನ್ನು ಹೊಂದುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿತ್ತು. 

ವಿಧಾನಸಭೆ ಚುನಾವಣೆ ಕಾರಣಕ್ಕೆ ಒಂದಷ್ಟು ಸಂಸದರು ರಾಜೀನಾಮೆ ಸಲ್ಲಿಸಿದ ಕಾರಣ ಬಿಜೆಪಿಯ ಸ್ಥಾನ 290ಕ್ಕೆ ಕುಸಿದಿದೆ. 2019ರಲ್ಲಿ 397 ಮಂದಿ ಸಂಸದರು ಮರು ಆಯ್ಕೆಗೊಂಡಿದ್ದಾರೆ. 

17ನೇ ಲೋಕಸಭೆಯಲ್ಲಿ 70 ವರ್ಷ ಮೀರಿದವರ ಸಂಖ್ಯೆ ಕಡಿಮೆ ಇದ್ದು, 40 ವರ್ಷಕ್ಕಿಂತ ಚಿಕ್ಕವರ ಸಂಖ್ಯೆ ಹೆಚ್ಚಿದೆ. ಸಂಸದರ ಸರಾಸರಿ ವಯೋಮಾನ 54 ವರ್ಷ.

ಕಿಯೋಂಜಾರ್ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಡಿಯ ಚಂದ್ರಾಣಿ ಮುರ್ಮು (25) ಅತ್ಯಂತ ಕಿರಿಯ ಸಂಸದೆಯಾಗಿದ್ದಾರೆ. 

ಸಂಭಲ್‌ ಕ್ಷೇತ್ರದಿಂದ ಗೆದ್ದಿರುವ ಸಮಾಜವಾದಿ ಪಕ್ಷದ ಶಫೀಕರ್‌ ರಹಮಾನ್‌ ಬಾರ್ಕ್‌ (89) ಹಿರಿಯ ಸಂಸದ.

400 ಮಂದಿ ಸಂಸದರು ಕನಿಷ್ಠ ಪಕ್ಷ ಪದವಿ ಶಿಕ್ಷಣ ಪಡೆದಿದ್ದಾರೆ. 78 ಮಹಿಳಾ ಸಂಸದರು ಆಯ್ಕೆಯಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠವಾಗಿದೆ.