ಸಾರಾಂಶ
ವಂಚಿಸುವ ವ್ಯವಸ್ಥಿತ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ ಅಸಂಖ್ಯಾತ ನಿರುದ್ಯೋಗಿ ಯುವಜನರು, ಗೃಹಿಣಿಯರು, ವಿದ್ಯಾರ್ಥಿಗಳು, ಮತ್ತಿತರರು ಇವರ ಬಲೆಗೆ ಬಿದ್ದು ನಿತ್ಯ ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆಂದು ಕೇಂದ್ರ ಗೃಹ ಇಲಾಖೆಯ ವಾರ್ಷಿಕ ವರದಿಯಲ್ಲಿ ಹೇಳಿದೆ.
ನವದೆಹಲಿ: ಆಕರ್ಷಕ ಹೂಡಿಕೆ, ದುಪ್ಪಟ್ಟು ಲಾಭದ ಆಸೆ ತೋರಿಸಿ ವಂಚಿಸುವ ವ್ಯವಸ್ಥಿತ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ ಅಸಂಖ್ಯಾತ ನಿರುದ್ಯೋಗಿ ಯುವಜನರು, ಗೃಹಿಣಿಯರು, ವಿದ್ಯಾರ್ಥಿಗಳು, ಮತ್ತಿತರರು ಇವರ ಬಲೆಗೆ ಬಿದ್ದು ನಿತ್ಯ ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆಂದು ಕೇಂದ್ರ ಗೃಹ ಇಲಾಖೆಯ ವಾರ್ಷಿಕ ವರದಿಯಲ್ಲಿ ಹೇಳಿದೆ.
ಚೀನಾದಲ್ಲಿ 2016ರಲ್ಲಿ ಆರಂಭವಾದ ಈ ಜಾಲ ಇದೀಗ ವಿಶ್ವಾದ್ಯಂತ ಕೋಟ್ಯಂತರ ಜನರನ್ನು ವಂಚಿಸುತ್ತಿದೆ. ಹೆಚ್ಚಾಗಿ ಸೈಬರ್ ಖದೀಮರು ಗೂಗಲ್ ಸರ್ವೀಸ್ ವೇದಿಕೆಯನ್ನು ಬಳಸಿಕೊಂಡು ಹೂಡಿಕೆಯ ಜಾಹೀರಾತು ಲಿಂಕ್ ನೀಡಿ ಹಗರಣದ ಜಾಲ ಬೀಸುತ್ತಾರೆ. ಇಂಥ ಹಗರಣಕ್ಕೆ ಹಂದಿ ವಧೆ ಹಗರಣ ಅಥವಾ ಹೂಡಿಕೆ ಹಗರಣ ಎಂಬ ಹೆಸರೂ ಇದೆ.
ಚೀನಾದಲ್ಲಿ ಆರಂಭ: ಈ ಹಗರಣ ಮೊದಲಿಗೆ 2016ರಲ್ಲಿ ಚೀನಾದಲ್ಲಿ ಶುರುವಾಯಿತು. ಸೈಬರ್ ಕ್ರಿಮಿನಲ್‌ಗಳು ಸುಲಭವಾಗಿ ಮೋಸಹೋಗಬಹುದಾದ ವ್ಯಕ್ತಿಗಳ ವಿಶ್ವಾಸಗಳಿಸಿ ನಂತರ ಕ್ರಿಪ್ಟೋ ಕರೆನ್ಸಿ ಅಥವಾ ಇತರೆ ಆಕರ್ಷಕ ಯೋಜನೆಗಳಲ್ಲಿ ಹಣ ಹೂಡುವಂತೆ ಆಮಿಷವೊಡ್ಡುತ್ತಾರೆ. ಹಂದಿಗಳನ್ನು ಚೆನ್ನಾಗಿ ತಿನ್ನಿಸಿ ಕೊಬ್ಬಿಸಿದ ಬಳಿಕ ಕಸಾಯಿಖಾನೆಗೆ ತಳ್ಳುವಂತೆ ಇಲ್ಲೂ ಹೂಡಿಕೆದಾರರ ವಿಶ್ವಾಸಗಳಿಸಿ ಸಾಕಷ್ಟು ಹಣ ಹೂಡಿಕೆ ಮಾಡಿಸಿದ ನಂತರ ವಂಚನೆ ಮಾಡಲಾಗುತ್ತದೆ.