ಸಾರಾಂಶ
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಬುಧವಾರದ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳಲಿದೆ.
ಪಿಟಿಐ ನವದೆಹಲಿ
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಬುಧವಾರದ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳಲಿದೆ. ಮುಂದಿನ 2 ದಿನಗಳಲ್ಲಿ ಶ್ರೀಲಂಕಾ ಕರಾವಳಿಯನ್ನು ದಾಟಿ ತಮಿಳುನಾಡು ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಹೀಗಾಗಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಗಳಲ್ಲಿ ಇನ್ನು 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಮಂಗಳವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಿಡುಗಡೆ ಮಾಡಿರುವ ಅಪ್‌ಡೇಟ್‌ನಲ್ಲಿ, ‘ಮಂಗಳವಾರ ಬೆಳಗ್ಗೆ 8.30 ರ ಹೊತ್ತಿಗೆ ವಾಯುಭಾರ ಕುಸಿತವು ಚೆನ್ನೈನಿಂದ 800 ಕಿಮೀ ಆಗ್ನೇಯದಲ್ಲಿ ಕೇಂದ್ರೀಕೃತವಾಗಿದೆ. ಇದು ವಾಯವ್ಯದ್ತತ ಚಲಿಸಿ ನ.26ರಂದು ಚಂಡಮಾರುತವಾಗಿ ತೀವ್ರಗೊಳ್ಳಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.ತಮಿಳ್ನಾಡಲ್ಲಿ ಭಾರಿ ಮಳೆ ಮುನ್ಸೂಚನೆ:
ಚಂಡಮಾರುತ ಭೀತಿಯ ಕಾರಣ ಹವಾಮಾನ ಇಲಾಖೆ ತಮಿಳುನಾಡಿನ ಮೈಲಾಡುತುರೈ, ಕಾರೈಕಲ್, ತಿರುವರೂರು ಮತ್ತು ನಾಗಪಟ್ಟಿಣಂನಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಸಾರಿದೆ.ಇದಲ್ಲದೆ, ರಾಮನಾಥಪುರಂ, ತಿರುಚಿರಾಪಳ್ಳಿ, ಪೆರಂಬಲೂರು, ಕಲ್ಲಕುರಿಚಿ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.ಸಮುದ್ರದ ಪ್ರಕ್ಷುಬ್ಧತೆಯ ಕಾರಣ ಈ ಅವಧಿಯಲ್ಲಿ ಮೀನುಗಾರರು ಕರಾವಳಿಗೆ ಮರಳಲು ಮತ್ತು ಹೊರಗೆ ಹೋಗದಂತೆ ಸೂಚಿಸಲಾಗಿದೆ. ನ.30ಕ್ಕೆ ಚಂಡಮಾರುತದ ಪ್ರಭಾವ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.