ರೆಮಲ್‌ ಚಂಡಮಾರುತಕ್ಕೆ 22 ಬಲಿ, 30,000 ಮನೆಗೆ ಹಾನಿ

| Published : May 28 2024, 01:04 AM IST / Updated: May 28 2024, 05:10 AM IST

ಸಾರಾಂಶ

ಗಂಟೆಗೆ 135 ಕಿ.ಮೀ. ವೇಗದಲ್ಲಿ ಭಾನುವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳ- ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸಿದ ಈ ವರ್ಷದ ಮೊದಲ ಚಂಡಮಾರುತ ‘ರೆಮಲ್‌’ನಿಂದ ಅಪಾರ ಪ್ರಮಾಣದ ಸಾವು, ನೋವು, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ.

 ಕೋಲ್ಕತಾ/ಢಾಕಾ ಗಂಟೆಗೆ 135 ಕಿ.ಮೀ. ವೇಗದಲ್ಲಿ ಭಾನುವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳ- ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸಿದ ಈ ವರ್ಷದ ಮೊದಲ ಚಂಡಮಾರುತ ‘ರೆಮಲ್‌’ನಿಂದ ಅಪಾರ ಪ್ರಮಾಣದ ಸಾವು, ನೋವು, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಭಾನುವಾರ ಬಾಂಗ್ಲಾ, ಬಂಗಾಳದ ಮೇಲೆ ಅಪ್ಪಳಿಸಿದ್ದ ಚಂಡಮಾರುತ ಭಾರೀ ಅನಾಹುತ ಸೃಷ್ಟಿಸಿದ ಬಳಿಕ ಸೋಮವಾರ ಬೆಳಗಿನ ವೇಳೆಗೆ ತನ್ನ ತೀವ್ರತೆ ಕಳೆದುಕೊಂಡಿದೆ.

ಆದರೆ ಪ್ರಭಾವ ಹೊಂದಿದ್ದ ವೇಳೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಸೃಷ್ಟಿಯಾದ ಬಿರುಗಾಳಿ ಮಳೆಗೆ 6 ಜನರು ಬಲಿಯಾಗಿದ್ದರೆ, ಅತ್ತ ಬಾಂಗ್ಲಾದೇಶದಲ್ಲಿ 16 ಮಂದಿ ಜೀವ ತೆತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಲಕ್ಷಾಂತರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಪರಿಣಾಮವಾಗಿ ಹೆಚ್ಚಿನ ಸಾವು- ನೋವು ತಪ್ಪಿದೆ.

ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಕೆಲವೊಂದು ಕಡೆ 30 ಸೆಂ.ಮೀ.ವರೆಗೂ ಮಳೆಯಾಗಿದೆ. ಧಾರಾಕಾರ ಮಳೆ, ಬಿರುಗಾಳಿ ಅಬ್ಬರದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿಯಾಗಿದೆ. 2500 ಮನೆಗಳು ಪೂರ್ಣವಾಗಿ ಹಾನಿಗೊಳಗಾಗಿದ್ದರೆ, 27500 ಮನೆಗಳು ಭಾಗಶಃ ಹಾನಿಗೆ ತುತ್ತಾಗಿದೆ. 2500ಕ್ಕೂ ಮರಗಳು ಧರೆಗೆ ಉರುಳಿವೆ. 337 ವಿದ್ಯುತ್‌ ಕಂಬಗಳು ಕುಸಿದು ಬಿದ್ದಿವೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಪೂರ್ಣ ಪರಿಶೀಲನೆ ಮುಗಿದ ಬಳಿಕ ನಿಖರ ಮಾಹಿತಿ ದೊರೆಯಲಿದೆ.

ಅತ್ತ ಬಾಂಗ್ಲಾದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಿದ ಫಲವಾಗಿ 15 ಲಕ್ಷ ಮಂದಿ ವಿದ್ಯುತ್‌ ಇಲ್ಲದೆ ಇಡೀ ರಾತ್ರಿಯನ್ನು ಕಳೆದಿದ್ದಾರೆ. 35 ಲಕ್ಷಕ್ಕೂ ಹೆಚ್ಚು ಜನರು ಚಂಡಮಾರುತದ ಪ್ರಭಾವಕ್ಕೆ ಗುರಿಯಾಗಿದ್ದಾರೆ. 6 ಅಡಿವರೆಗೂ ಅಲೆಗಳು ಬಂದಿದ್ದರಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದೀಗ ಚಂಡಮಾರುತ ದುರ್ಬಲವಾಗುತ್ತಾ ಸಾಗಿದೆ.

ವಾರದ ಆರಂಭದ ದಿನವೇ ಚಂಡಮಾರುತದ ಪರಿಣಾಮವಾಗಿ ಮಳೆಯಾಗುತ್ತಿರುವ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಸ್ಥಗಿತಗೊಳಿಸಲಾಗಿದ್ದ ರೈಲು, ವಿಮಾನ ಹಾಗೂ ಬಂದರು ಸೇವೆ ಪುನಾರಂಭವಾಗಿದೆ. ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಮರಳಿದೆ.

ಪ್ರತಿ ಚಂಡಮಾರುತಕ್ಕೂ ಒಂದು ಹೆಸರನ್ನು ನಾಮಕರಣ ಮಾಡುವ ಪರಿಪಾಠವಿದೆ. ವಿವಿಧ ದೇಶಗಳು ಸೂಚಿಸುವ ಹೆಸರಿನ ಪೈಕಿ ಒಂದನ್ನು ಚಂಡಮಾರುತಕ್ಕೆ ಇಡಲಾಗುತ್ತದೆ. ಅದರಂತೆ ಈ ವರ್ಷದ ಮೊದಲ ಚಂಡಮಾರುತಕ್ಕೆ ಒಮಾನ್‌ ಸೂಚಿಸಿದ ‘ರೆಮಲ್‌’ ಎಂಬ ಹೆಸರನ್ನಿಡಲಾಗಿದೆ. ಅರಬ್ಬೀ ಭಾಷೆಯಲ್ಲಿ ರೆಮಲ್‌ ಎಂದರೆ ಮರಳು ಎಂದರ್ಥ.