ಸಾರಾಂಶ
ಚೆನ್ನೈ/ಪುದುಚೇರಿ: ಫೆಂಗಲ್ ಚಂಡಮಾರುತ ಶನಿವಾರ ಸಂಜೆ ಪುದುಚೇರಿ ಮೇಲೆ ಅಪ್ಪಳಿಸಿದೆ. ಸಂಜೆ 5.30ಕ್ಕೆ ಆರಂಭವಾದ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ರಾತ್ರಿ 10 ಗಂಟೆಯವರೆಗೂ ಮುಂದುವರೆಯಿತು.
ಪರಿಣಾಮ ಪುದುಚೇರಿ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ದಕ್ಷಿಣ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಜೊತೆಗೆ ಇನ್ನೂ ಎರಡು ದಿನ ಈ ಮಳೆ ಮುಂದುವರೆಯುವ ಎಚ್ಚರಿಕೆ ನೀಡಲಾಗಿದೆ. ಹಲವು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ನೀಡಲಾಗಿದೆ.ಭಾರೀ ಮಳೆ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣವನ್ನು ಶನಿವಾರ ಮಧ್ಯಾಹ್ನ 12.30ರಿಂದ ಭಾನುವಾರ ಬೆಳಗಿನ ಜಾವ 4.30ರವರೆಗೂ ಮುಚ್ಚಲಾಗಿದೆ.
ಜೊತೆಗೆ ಹಲವಾರು ರೈಲು ಸಂಚಾರವನ್ನೂ ರದ್ದು ಮಾಡಲಾಗಿದ್ದು, ಸಾಮಾನ್ಯ ಜನಜೀವನ ಬಹುತೇಕ ಅಸ್ತವ್ಯಸ್ಥಗೊಣಡಿತ್ತು. ಚಂಡಮಾರುತ ಅಪ್ಪಳಿಸಿದ ಬಳಿಕ ಸಂಭವಿಸಬಹುದಾದ ಅನಾಹುತ ಎದುರಿಸಲು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ವಿವಿಧ ಇಲಾಖೆಯ 22000ಕ್ಕೂ ಹೆಚ್ಚು ಅಧಿಕಾರಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಪುದುಚೇರಿಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ 12 ಲಕ್ಷ ಜನರಿಗೆ ಎಸ್‌ಎಂಎಸ್ ಮೂಲಕ ಮುನ್ನೆಚ್ಚರಿಕೆ ನೀಡಲಾಗಿದೆ. ಕೇರಳದಲ್ಲೂ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬೀಚ್‌ಗಳಿಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದ್ದು, ಶಾಲಾ, ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.
ಎಟಿಎಂನಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು
ಚೆನ್ನೈ: ಭಾರೀ ಮಳೆಯಿಂದಾಗಿ ಎಟಿಎಂನಲ್ಲಿ ನೀರು ನುಗ್ಗಿ ವಿದ್ಯುತ್ ಪ್ರವಹಿಸಿದ ಕಾರಣ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.