ಸಾರಾಂಶ
ಮಹಾಕುಂಭನಗರ (ಉ.ಪ್ರ.) : ಮಹಾ ಕುಂಭ ಮೇಳ ನಡೆಯುತ್ತಿರುವ ಪ್ರಯಾಗರಾಜ್‌ನಲ್ಲಿ ಭಾನುವಾರ ಸಂಜೆ ಅಗ್ನಿ ದುರಂತ ಸಂಭವಿಸಿದ್ದು, 18 ಟೆಂಡ್‌ಗಳು ಆಹುತಿ ಆಗಿವೆ. ಆದರೆ ತ್ವರಿತ ಕಾರ್ಯಾಚರಣೆ ಕಾರಣ ಬೆಂಕಿ ನಂದಿಸಲಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ.
ಈ ನಡುವೆ ಮೌನಿ ಆಮಾವಾಸ್ಯೆ ಸ್ನಾನದ ಸಿದ್ಧತೆ ಪರಿಶೀಲನೆಗಾಗಿ ಪ್ರಯಾಗ್‌ನಲ್ಲೇ ಇದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿಗೆ ಕರೆ ಮಾಡಿ ಘಟನೆಯ ಕುರಿತು ಮಾಹಿತಿ ಪಡೆದರು.
ಆಗಿದ್ದೇನು?:
‘ಪ್ರದೇಶದ ಸೆಕ್ಟರ್ 19ರಲ್ಲಿ 18 ಟೆಂಟ್‌ಗಳಿಗೆ ಬೆಂಕಿ ತಗುಲಿತು. ಕೂಡಲೇ 15 ಅಗ್ನಿಶಾಮಕ ತಂಡಗಳನ್ನು ಬೆಂಕಿ ನಂದಿಸಲು ನಿಯೋಜಿಸಿ ಬೆಂಕಿ ನಂದಿಸಲಾಯಿತು’ ಎಂದು ಕುಂಭಮೇಳದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಶರ್ಮಾ ಹೇಳಿದ್ದಾರೆ.
ಈ ನಡುವೆ, ‘2 ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡದ್ದರಿಂದ ಬೆಂಕಿ ಹತ್ತಿಕೊಂಡಿತು’ ಎಂದು ಅಖಾಡ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ಪ್ರದೇಶದಿಂದ ದಟ್ಟ ಕಪ್ಪು ಹೊಗೆ ಏಳುತ್ತಿರುವ ದೃಶ್ಯಗಳನ್ನು ಮಹಾಕುಂಭ 2025ರ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಇದು ಆಘಾತಕಾರಿ ಘಟನೆ. ಆಡಳಿತವು ತುರ್ತು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಎಲ್ಲರ ಸುರಕ್ಷತೆಗಾಗಿ ತಾಯಿ ಗಂಗೆಯಲ್ಲಿ ಪ್ರಾರ್ಥಿಸುತ್ತೇವೆ’ ಎಂದು ಬರೆಯಲಾಗಿದೆ.
ಘಟನೆಗೆ ಸಮಾಜವಾದಿ ಪಕ್ಷ ಬೇಸರ ವ್ಯಕ್ತಪಡಿಸಿದೆ.ಕುಂಭಮೇಳವು ಜ.13ರಂದು ಶುರುವಾಗಿದ್ದು, ಈವರೆಗೆ 7.72 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.