ಸಾರಾಂಶ
ಚಂಡೀಗಢ: ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲಿರುವ ಶಂಭು ಮತ್ತು ಕನೌರಿ ಗಡಿಯಲ್ಲಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತೆರವು ಮಾಡುವ ಕೆಲಸಕ್ಕೆ ಬುಧವಾರ ಚಾಲನೆ ನೀಡಲಾಗಿದೆ.
ರೈತರ ಬೇಡಿಕೆ ಕುರಿತು ಬುಧವಾರ ಚಂಡೀಗಢದಲ್ಲಿ ಕೇಂದ್ರ ಸಚಿವರನ್ನು ಒಳಗೊಂಡ ನಿಯೋಗದ ಜೊತೆ ರೈತ ನಾಯಕರು ಮಾತುಕತೆ ನಡೆಸಿದ್ದರು. ಮಾತುಕತೆ ಮುಗಿಸಿ ಮರಳಿ ಪ್ರತಿಭಟನಾ ಸ್ಥಳಕ್ಕೆ ಮರಳುತ್ತಿದ್ದ ರೈತ ನಾಯಕರಾದ ಸರವಣ್ ಸಿಂಗ್ ಪಂಧೇರ್, ಜಗಜಿತ್ ಸಿಂಗ್ ದಲ್ಲೇವಾಲ್ ಸೇರಿದಂತೆ ಹಲವರನ್ನು ಪಂಜಾಬ್ ಪೊಲೀಸರು ಮೊಹಾಲಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಅದರ ಬೆನ್ನಲ್ಲೇ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ತೆರವು ಕಾರ್ಯಾಚರಣೆಯನ್ನೂ ಪೊಲೀಸರು ಆರಂಭಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ರೈತರು ನಿರ್ಮಿಸಿದ್ದ ತಾತ್ಕಾಲಿಕ ವಸತಿಗಳನ್ನು ಪೊಲೀಸರು ಜೆಸಿಬಿ ಬಳಸಿ ತೆರವು ಮಾಡುತ್ತಿದ್ದಾರೆ.
ಈ ನಡುವೆ ತೆರವು ಕಾರ್ಯಾಚರಣೆ ಸಮರ್ಥಿಸಿರುವ ಪಂಜಾಬ್‌ನ ಆಪ್ ಸರ್ಕಾರ, ಎರಡು ಹೆದ್ದಾರಿ ಮುಚ್ಚಿರುವ ಕಾರಣ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಗಡಿ ತೆರವು ವ್ಯಾಪಾರ, ಉದ್ಯೋಗ ಚಟುವಟಿಕೆಗಳ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡಲಿದೆ ಎಂದು ಹೇಳಿದೆ. ತೆರವು ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆ್ಯಂಬುಲೆನ್ಸ್, ಬಸ್, ಅಗ್ನಿಶಾಮಕ ವಾಹನ, ಗಲಭೆ ನಿಗ್ರಹ ವಾಹನಗಳನ್ನು ನಿಯೋಜಿಸಲಾಗಿದೆ.
ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಒಂದು ವರ್ಷದಿಂದ ರೈತರು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಈ ಎರಡೂ ಗಡಿಯನ್ನು ಒಂದು ವರ್ಷದಿಂದ ಮುಚ್ಚಲಾಗಿದೆ.