ಸಾರಾಂಶ
‘ಮಹಿಳೆಯರ ಬಲವಂತದ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸಲು ನಮ್ಮ ಸರ್ಕಾರ ಕಾನೂನನ್ನು ತಿದ್ದುಪಡಿ ಮಾಡಲಿದೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಭೋಪಾಲ್: ‘ಮಹಿಳೆಯರ ಬಲವಂತದ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸಲು ನಮ್ಮ ಸರ್ಕಾರ ಕಾನೂನನ್ನು ತಿದ್ದುಪಡಿ ಮಾಡಲಿದೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಇದು ಸಾಕಾರವಾದರೆ ಬಲವಂತದ ಮತಾಂತರಕ್ಕೆ ಗಲ್ಲು ಶಿಕ್ಷೆ ಜಾರಿಗೆ ತರಲಿರುವ ದೇಶದ ಮೊದಲ ರಾಜ್ಯ ಎಂಬ ಖ್ಯಾತಿ ಮಧ್ಯಪ್ರದೇಶಕ್ಕೆ ಪ್ರಾಪ್ತವಾಗಲಿದೆ.
ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಯಾದವ್, ‘ಈಗಾಗಲೇ ನಮ್ಮ ಮುಗ್ಧ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಕಾನೂನು ಜಾರಿಗೆ ತಂದಿದ್ದೇವೆ. ಇನ್ನು ಮಧ್ಯಪ್ರದೇಶದಲ್ಲಿ ಹುಡುಗಿಯರನ್ನು ಮತಾಂತರಿಸುವವರಿಗೆ ಮರಣದಂಡನೆ ವಿಧಿಸುವ ನಿಬಂಧನೆಯನ್ನು ಜಾರಿಗೆ ತರಲಾಗುವುದು. ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಲ್ಲಿ ಈ ನಿಬಂಧನೆಯನ್ನು ಜಾರಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಪರಾಧಿಯನ್ನು ಬಿಡುವುದಿಲ್ಲ. ಅಕ್ರಮ ಮತಾಂತರಕ್ಕೆ ಅವಕಾಶ ನೀಡಲ್ಲ’ ಎಂದು ಹೇಳಿದರು.
ಬಳಿಕ ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಹೇಳಿಕೆ ನೀಡಿ, ‘ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಜಾರಿಯಲ್ಲಿದೆ. ಬಲವಂತವಾಗಿ ಅಥವಾ ಮದುವೆಯಾಗಲು ಆಮಿಷವೊಡ್ಡುವ ಮೂಲಕ ಅವರ ಮತಾಂತರ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದಿದೆ.
ಇದೇ ಅಧಿವೇಶನದಲ್ಲಿ ತಿದ್ದುಪಡಿ?:
ಮಧ್ಯಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 10ರಂದು (ಸೋಮವಾರ) ಪ್ರಾರಂಭವಾಗುತ್ತದೆ. ಮುಖ್ಯಮಂತ್ರಿ ಭಾಷಣವನ್ನು ಆಧರಿಸಿ ಮರಣದಂಡನೆ ಶಿಕ್ಷೆಯನ್ನು ಸೇರಿಸಲು ಸರ್ಕಾರ 2021ರ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಗೆ ತಿದ್ದುಪಡಿ ತರಲು ಯೋಜಿಸಿದೆ.
ದೇಶದ ಕಾನೂನು ಏನು ಹೇಳುತ್ತದೆ?
ಭಾರತೀಯ ಸಂವಿಧಾನದ 25 ನೇ ವಿಧಿಯು ಯಾವುದೇ ಧರ್ಮವನ್ನು ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಬಲವಂತವಲ್ಲದ ಅಥವಾ ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳುವ ಹಕ್ಕನ್ನು ಅದು ನೀಡುತ್ತದೆ.
ಮೊದಲ ರಾಜ್ಯವಾಗಲಿದೆ ಮಧ್ಯಪ್ರದೇಶ
ಬಲವಂತದ ಮತಾಂತರದ ವಿರುದ್ಧ ಈಗಾಗಲೇ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಸೇರಿ ಕೆಲವು ಬಿಜೆಪಿ ಆಡಳಿತದ ರಾಜ್ಯಗಳು ಕಾನೂನು ಜಾರಿ ಮಾಡಿವೆ. ಆದರೆ ಆ ಕಾನೂನಿನ ಅಡಿ ಗಲ್ಲು ಶಿಕ್ಷೆಗೆ ಅವಕಾಶವಿಲ್ಲ. ಆದರೆ ಮಧ್ಯಪ್ರದೇಶ ಸಿಎಂ ಗಲ್ಲಿನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದು ಜಾರಿಯಾದರೆ ಬಲವಂತದ ಮತಾಂತರಕ್ಕೆ ಮರಣದಂಡನೆ ವಿಧಿಸುವ ಮೊದಲ ರಾಜ್ಯ ಮಧ್ಯಪ್ರದೇಶ ಆಗಲಿದೆ.
ಈ ಹಿಂದೆ 2017ರಲ್ಲೇ ಬಲವಂತದ ಮತಾಂತರದ ವಿರುದ್ಧ ಕಾನೂನನ್ನು ಮಧ್ಯಪ್ರದೇಶ ಜಾರಿಗೆ ತಂದಿತ್ತು ಹಾಗೂ ಆ ಕಾಯ್ದೆ ಜಾರಿಗೆ ತಂದಿದ್ದ ಮೊದಲ ರಾಜ್ಯ ಎನ್ನಿಸಿಕೊಂಡಿತ್ತು.
ಮಹಾರಾಷ್ಟ್ರ ಕೂಡ ಮದುವೆಗಾಗಿ ಬಲವಂತದ ಮತಾಂತರ ಮಾಡುವ ಲವ್ ಜಿಹಾದ್ ವಿರುದ್ಧ ಕಾಯ್ದೆ ರೂಪಿಸುವ ಇರಾದೆ ಹೊಂದಿದೆ ಎಂದು ಇತ್ತೀಚೆಗೆ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))