ಸಾರಾಂಶ
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ದೀಪಿಕಾ ಪಡುಕೋಣೆ ಮುಂಬೈನಲ್ಲಿರುವ ಹೆಚ್.ಎನ್. ರಿಲಯನ್ಸ್ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಜಂಟಿಯಾಗಿ ಇನ್‌ಸ್ಟಾಗ್ರಾಂನಲ್ಲಿ ಇಬ್ಬರೂ ಈ ವಿಷಯ ಘೋಷಿಸಿದ್ದಾರೆ. ‘ವೆಲ್‌ಕಂ ಬೇಬಿ ಗರ್ಲ್. 8.9.2024’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಅಭಿನಂದನೆಯ ಮಹಾಪೂರ ಹರಿದುಬಂದಿದೆ.ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು. ಕೆಲ ದಿನಗಳ ಹಿಂದಷ್ಟೇ ದೀಪಿಕಾ ತಮ್ಮ ಪತಿಯೊಂದಿಗಿನ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದರು. 2018ರಲ್ಲಿ ಇಟಲಿಯಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ಮುಂಬೈ ಲಾಲ್‌ಬಾಗ್ ಗಣೇಶಗೆ ಅಂಬಾನಿ 20 ಕೇಜಿ ಚಿನ್ನದ ಕಿರೀಟ!ಮುಂಬೈ: ಉದ್ಯಮಿ ಅನಂತ್ ಅಂಬಾನಿ ಮತ್ತು ಅವರ ರಿಲಯನ್ಸ್ ಫೌಂಡೇಶನ್ 15 ಕೋಟಿ ರು. ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ಮುಂಬೈನ ಪ್ರಸಿದ್ಧ ಸಾರ್ವಜನಿಕ ಗಣೇಶನಾದ ಲಾಲ್‌ಬೌಚಾ ರಾಜಾಗೆ ಕೊಡುಗೆಯಾಗಿ ನೀಡಿದ್ದಾರೆ. ಈ ನಡುವೆ, ಮುಂಬೈನ ಅತ್ಯಂತ ಶ್ರೀಮಂತ ಜಿಎಸ್‌ಬಿ ಸೇವಾ ಮಂಡಲ್‌ನ ಮಹಾ ಗಣಪತಿಯನ್ನು 400.58 ಕೋಟಿ ರೂ.ಗೆ ವಿಮೆ ಮಾಡಲಾಗಿದ್ದು, ಕಳೆದ ವರ್ಷದ 360 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚಿನ ದಾಖಲೆಯನ್ನು ಮುರಿದಿದೆ. ಲಾಲ್‌ಬಾಗ್ ಚಾ ರಾಜಾ 33 ಕೋಟಿ ರು. ವಿಮೆ ಹೊಂದಿದೆ.ಇಂದು ಜಿಎಸ್‌ಟಿ ಮಂಡಳಿ ಸಭೆ: ಆರೋಗ್ಯ ವಿಮೆ ತೆರಿಗೆ ಇಳಿಕೆ ಚರ್ಚೆ ಸಂಭವ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಮಹತ್ವದ ಸಭೆ ಸೋಮವಾರ ಇಲ್ಲಿ ನಡೆಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆವ ಈ ಸಭೆಯಲ್ಲಿ, ಆರೋಗ್ಯ ವಿಮೆಯ ಪ್ರೀಮಿಯಂಗೆ ವಿಧಿಸುವ ತೆರಿಗೆಯನ್ನು ಪ್ರಸ್ತುತ ಇರುವ ಶೇ.18 ರಿಂದ ಕಡಿಮೆ ಮಾಡಬೇಕೆ ಅಥವಾ ಹಿರಿಯ ನಾಗರಿಕರಂತಹ ಕೆಲವು ವರ್ಗದ ವ್ಯಕ್ತಿಗಳಿಗೆ ವಿನಾಯಿತಿ ನೀಡಬೇಕೆ ಎಂಬುದರ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಇಂಥ ತೆರಿಗೆ ತೆಗೆಯುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಂಗಾಳದ ಆರ್ಥಿಕ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ, ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಇಂಡಿಯಾ ಕೂಟ ಸಂಸತ್ ಭವನದ ಆವರಣದಲ್ಲಿ ಈ ಕುರಿತು ಪ್ರತಿಭಟನೆ ಕೂಡಾ ನಡೆಸಿತ್ತು.ಮಗಧ ಎಕ್ಸ್‌ಪ್ರೆಸ್ ಸಂಪರ್ಕ ಕೊಂಡಿ ಕಟ್: ರೈಲು ಇಬ್ಭಾಗ!
ಪಟನಾ: ರೈಲ್ವೆಯಲ್ಲಿನ ಅವಾಂತರಗಳು ಮುಂದುವರಿದಿವೆ. ದೆಹಲಿಯಿಂದ ಇಸ್ಲಾಂಪುರಕ್ಕೆ ಸಾಗುವ ಮಗಧ ಎಕ್ಸ್‌ಪ್ರೆಸ್ ರೈಲಿನ 2 ಬೋಗಿಗಳ ನಡುವಿನ ಸಂಪರ್ಕ ಕೊಂಡಿ ಕಳಚಿಕೊಂಡು ರೈಲು 2 ಭಾಗವಾದ ಘಟನೆ ಭಾನುವಾರ ಬಿಹಾರದ ಬಕ್ಸರ್ ಜಿಲ್ಲೆಯ ಟ್ವಿನಿಗಂಜ್ ಮತ್ತು ರಘುನಾಥಪುರ ನಿಲ್ದಾಣಗಳ ನಡುವೆ ನಡೆದಿದೆ.ಈ ಘಟನೆಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಆದರೂ ಇದು ರೈಲ್ವೆಯಲ್ಲಿನ ಸುರಕ್ಷತೆ ಪ್ರಶ್ನೆಗಳನ್ನು ಎತ್ತಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.ಬೆಳಗ್ಗೆ 11.08ರ ಆಸುಪಾಸಿನಲ್ಲಿ ರೈಲಿನ ಎಸ್-7 ಮತ್ತು ಎಸ್-6 ಕೋಚ್‌ಗಳ ನಡುವೆ ಸಂಪರ್ಕ ಕಡಿತವಾಗಿದೆ. ತಕ್ಷಣ ರಕ್ಷಣಾ ತಂಡ ಹಾಗೂ ತಾಂತ್ರಿಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಶೀಘ್ರದಲ್ಲೇ ರೈಲಿನ ಬೋಗಳನ್ನು ಮರುಜೋಡಣೆ ಮಾಡಲಾಯಿತು. ಮಧ್ಯಾಹ್ನ 2.25ಕ್ಕೆ ರೈಲು ಮತ್ತೆ ತನ್ನ ಪ್ರಯಾಣವನ್ನು ಆರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೇಮಸ್ ಆಗಲು ಬಾಯಲ್ಲಿ ಹಾವು ಇಟ್ಟುಕೊಂಡ ಯುವಕ ಸಾವುಕಾಮರೆಡ್ಡಿ (ತೆಲಂಗಾಣ): ಜನಪ್ರಿಯತೆ ಪಡೆಯಲು ನಾಗರ ಹಾವಿನ ತಲೆಯನ್ನು ಬಾಯಿಯೊಳಗೆ ಇಟ್ಟುಕೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. 20 ವರ್ಷದ ಶಿವರಾಜ್ ಎನ್ನುವ ವ್ಯಕ್ತಿ ವಿಡಿಯೋ ಮಾಡಲು ಹೋಗಿ ಹಾನಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ರಸ್ತೆ ಮಧ್ಯದಲ್ಲಿ ನಿಂತು ನಾಗರ ಹಾವಿನ ತಲೆಯನ್ನು ಬಾಯಿಯೊಳಗೆ ಕಚ್ಚಿದ್ದಾನೆ. ಅವನ ಬಾಯಿಯೊಳಗೆ ಸಿಲುಕಿಕೊಂಡ ಹಾವು ತಪ್ಪಿಸಿಕೊಳ್ಳಲು ಒದ್ದಾಡಿದ್ದು ಆಗ ಅದು ಕೂಡ ಕಚ್ಚಿದೆ.ಮೂಲಗಳ ಪ್ರಕಾರ ಶಿವರಾಜ್ ಹಾಗೂ ಆತನ ತಂದೆ ಉರಗ ತಜ್ಞರಾಗಿ ಕೆಲಸ ಮಾಡುತ್ತಿದ್ದರು. ಶಿವರಾಜ್ ತಂದೆ ಮಗನಿಗೆ ಈ ರೀತಿಯ ವಿಡಿಯೋ ಮಾಡಿ ಅದನ್ನು ವಾಟ್ಸ್ಯಾಪ್‌ಗಳಲ್ಲಿ ಹಂಚಿಕೊಳ್ಳಲು ಹೇಳಿಕೊಂಡಿದ್ದಾರಂತೆ. ಅದೇ ರೀತಿ ಮಗ ವಿಡಿಯೋ ಮಾಡಲಿ ಹೋಗಿ ಹಾವು ಕಡಿತದಿಂದ ಯುವಕ ಸಾವನ್ನಪ್ಪಿದ್ದಾನೆ.