ಸಾರಾಂಶ
ನೂತನ ರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನನಾದ ಬಳಿಕ ಮೊದಲ ದೀಪಾವಳಿಗೆ ಅಯೋಧ್ಯೆ ಸಾಕ್ಷಿಯಾಗಿದೆ.
ಅಯೋಧ್ಯೆ: ನೂತನ ರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನನಾದ ಬಳಿಕ ಮೊದಲ ದೀಪಾವಳಿಗೆ ಅಯೋಧ್ಯೆ ಸಾಕ್ಷಿಯಾಗಿದೆ. ರಾಮಲಲ್ಲಾನ ಮೊದಲ ದೀಪಾವಳಿ ಹಿನ್ನೆಲೆಯಲ್ಲಿ ಬುಧವಾರ ಸರಯೂ ನದಿ ತೀರದಲ್ಲಿ ಏಕಕಾಲಕ್ಕೆ 25 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿ ಮತ್ತು ಏಕಕಾಲಕ್ಕೆ 1121 ಮಂದಿಯಿಂದ ದೀಪಾರತಿ ಮಾಡುವ ಮೂಲಕ ಹೊಸ ಗಿನ್ನೆಸ್ ದಾಖಲೆ ರಚನೆಯಾಗಿದೆ.
500 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರದ ಕನಸು ಸಾಕಾರಗೊಂಡಿದ್ದು, ರಾಮಮಂದಿರದ ದೀಪೋತ್ಸವ ಹಲವು ವಿಶೇಷತೆಗಳಿಗೆ ಬುಧವಾರ ಸಾಕ್ಷಿಯಾಗಿತ್ತು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳ ಜೊತೆಗೆ ದೀಪೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ರಾಮಲಲ್ಲಾ ಎದುರು ಯೋಗಿ ದೀಪ ಬೆಳಗಿಸಿದರು. ದೀಪೋತ್ಸವದ ಅಂಗವಾಗಿ ಪೌರಾಣಿಕ ಪಾತ್ರಗಳನ್ನು ಹೊತ್ತ ಅದ್ಧೂರಿ ಮೆರವಣಿಗೆ , ಸ್ತಬ್ಧ ಚಿತ್ರಗಳ ಮೆರವಣಿಗೆಯೂ ನಡೆಯಿತು.ಅಯೋಧ್ಯೆಯ ಬೀದಿ ಬೀದಿಗಳು ಬೆಳಕಿನ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಸಂಗೀತ ಕಾರ್ಯಕ್ರಮಗಳು ದೀಪಾವಳಿ ಮೆರುಗನ್ನು ಹೆಚ್ಚಿಸಿತ್ತು. ಇನ್ನು ದೀಪೋತ್ಸವದಲ್ಲಿ ಮಯನ್ಮಾರ್, ನೇಪಾಳ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಇಂಡೋನೇಷ್ಯಾದ ಕಲಾವಿದರ ಪ್ರದರ್ಶನಗಳನ್ನು ಕೂಡ ಆಯೋಜಿಸಲಾಗಿತ್ತು.