240 ಸುಖೋಯ್‌ ಎಂಜಿನ್‌ ಖರೀದಿ: ಎಚ್‌ಎಎಲ್‌ ಜತೆ ಒಪ್ಪಂದ

| Published : Sep 10 2024, 01:37 AM IST

ಸಾರಾಂಶ

ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ.ನಿಂದ (ಎಚ್‌ಎಎಲ್‌) 260 ಸುಖೋಯ್‌ ಯುದ್ಧವಿಮಾನಗಳ ಎಂಜಿನ್‌ ಖರೀದಿಸುವ ಒಪ್ಪಂದಕ್ಕೆ ರಕ್ಷಣಾ ಇಲಾಖೆ ಸಹಿ ಹಾಕಿದೆ.

ಪಿಟಿಐ ನವದೆಹಲಿ

ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ.ನಿಂದ (ಎಚ್‌ಎಎಲ್‌) 260 ಸುಖೋಯ್‌ ಯುದ್ಧವಿಮಾನಗಳ ಎಂಜಿನ್‌ ಖರೀದಿಸುವ ಒಪ್ಪಂದಕ್ಕೆ ರಕ್ಷಣಾ ಇಲಾಖೆ ಸಹಿ ಹಾಕಿದೆ.

ಇದು 26,000 ಕೋಟಿ ರು. ಮೌಲ್ಯದ ಬೃಹತ್‌ ವ್ಯವಹಾರವಾಗಿದೆ. ಭಾರತೀಯ ಕಂಪನಿಯಿಂದಲೇ ಯುದ್ಧವಿಮಾನಗಳ ಎಂಜಿನ್‌ ಖರೀದಿಸುವ ರಕ್ಷಣಾ ಇಲಾಖೆಯ ಉಪಕ್ರಮವು ಆತ್ಮನಿರ್ಭರ ಭಾರತ ಯೋಜನೆಯಡಿ ಇನ್ನೊಂದು ಮಹತ್ವದ ಹೆಜ್ಜೆಯೆಂದು ವಿಶ್ಲೇಷಿಸಲಾಗುತ್ತಿದೆ.

ಒಪ್ಪಂದದ ಪ್ರಕಾರ, ರಕ್ಷಣಾ ಇಲಾಖೆಗೆ ಎಚ್‌ಎಎಲ್‌ ಸಂಸ್ಥೆಯು ಒಡಿಶಾದ ಕೋರಾಪುಟ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಿಂದ ಪ್ರತಿ ವರ್ಷ 30 ಸುಖೋಯ್‌-30ಎಂಕೆಐ ಯುದ್ಧವಿಮಾನಗಳ ಎಂಜಿನ್‌ ತಯಾರಿಸಿ ಪೂರೈಕೆ ಮಾಡಲಿದೆ. ಒಟ್ಟು ಎಂಟು ವರ್ಷಗಳಲ್ಲಿ 240 ಎಂಜಿನ್‌ಗಳನ್ನು ಪೂರೈಸಬೇಕಿದೆ. ಎಂಜಿನ್‌ ತಯಾರಿಸುವ ವೇಳೆ ಭಾರತದ ಸಣ್ಣ ಹಾಗೂ ಮಧ್ಯಮ ಗಾತ್ರದ ಸರ್ಕಾರಿ ಮತ್ತು ಖಾಸಗಿ ರಕ್ಷಣಾ ಉತ್ಪಾದಕರಿಂದಲೇ ನೆರವು ಪಡೆಯುವುದಾಗಿ ಎಚ್‌ಎಎಲ್‌ ತಿಳಿಸಿದೆ.

ಭಾರತೀಯ ವಾಯುಪಡೆಯಲ್ಲಿ ಯುದ್ಧವಿಮಾನಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ನಿಗದಿತ 42 ಸ್ಕ್ವಾಡ್ರನ್‌ ಬದಲು 30 ಸ್ಕ್ವಾಡ್ರನ್‌ಗಳು ಮಾತ್ರ ಸದ್ಯ ಇವೆ. ತೇಜಸ್‌ ಯುದ್ಧವಿಮಾನಗಳನ್ನು ಎಚ್‌ಎಎಲ್‌ ಪೂರೈಸುವುದು ವಿಳಂಬವಾಗುತ್ತಿದೆ. ಅದರ ನಡುವೆಯೇ ಎಚ್‌ಎಎಲ್‌ಗೆ ಇನ್ನೊಂದು ಬೃಹತ್‌ ಗುತ್ತಿಗೆ ಲಭಿಸಿದೆ.