ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಇದೀಗ ಅತ್ಯಂತ ಗಂಭೀರ ಮಟ್ಟಕ್ಕೆ : ದೇಶದಲ್ಲೇ ನಂ.1 ಮಾಲಿನ್ಯದ ನಗರ

| Published : Nov 18 2024, 12:07 AM IST / Updated: Nov 18 2024, 04:52 AM IST

ಸಾರಾಂಶ

ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಭಾನುವಾರ ಈ ಋತುವಿನಲ್ಲಿ ಅತ್ಯಂತ ಗಂಭೀರ ಎನ್ನಬಹುದಾದ 490ಕ್ಕೆ ತಲುಪಿದೆ. ಈ ಮೂಲಕ ದೆಹಲಿ ದೇಶದಲ್ಲೇ ನಂ.1 ಮಾಲಿನ್ಯದ ನಗರವಾಗಿ ಹೊರಹೊಮ್ಮಿದೆ.

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಭಾನುವಾರ ಈ ಋತುವಿನಲ್ಲಿ ಅತ್ಯಂತ ಗಂಭೀರ ಎನ್ನಬಹುದಾದ 490ಕ್ಕೆ ತಲುಪಿದೆ. ಈ ಮೂಲಕ ದೆಹಲಿ ದೇಶದಲ್ಲೇ ನಂ.1 ಮಾಲಿನ್ಯದ ನಗರವಾಗಿ ಹೊರಹೊಮ್ಮಿದೆ.ಭಾನುವಾರ ಬೆಳಗ್ಗೆ ರಾಜಧಾನಿಯಲ್ಲಿ ಮಾಲಿನ್ಯ ಅಳೆಯಲು ಬಳಸುವ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) 441 ದಾಖಲಾಗಿತ್ತು. ಆದರೆ ಸಂಜೆಯ ವೇಳೆಗೆ ಬವನಾ ಪ್ರದೇಶದಲ್ಲಿ ಎಕ್ಯುಐ ಮಟ್ಟ 490ಕ್ಕೆ ತಲುಪಿದೆ. ಜೊತೆಗೆ ಅಶೋಕ್‌ ವಿಹಾರ್ ಪ್ರದೇಶದಲ್ಲಿ 487 ಮತ್ತು ವಜೀರ್‌ಪುರ ಪ್ರದೇಶದಲ್ಲಿ 483ಕ್ಕೆ ತಲುಪಿದೆ. ಇದರಿಂದಾಗಿ ಮಾಲಿನ್ಯ ನಿಯಂತ್ರಣ ಕ್ರಮಗಳು ಫಲ ನೀಡಿಲ್ಲ ಎಂಬುದು ಸಾಬೀತಾಗಿದೆ. ಇದು ಹಲವು ನಿರ್ಬಂಧ, ನಿಷೇಧ ಹೇರುವ ಮೊದಲಿನ ದಿನಕ್ಕಿಂತಲೂ ಹೆಚ್ಚು ಎಂಬುದು ವಿಶೇಷ.

ಉಳಿದಂತೆ ಹರ್ಯಾಣದ ಬಹಾದ್ದೂರ್‌ಗಢದಲ್ಲಿ 445, ದೆಹಲಿಯಲ್ಲಿ 441 ಹಾಗೂ ಹರ್ಯಾಣದ ಭಿವಾನಿಯಲ್ಲಿ 404 ಎಕ್ಯುಐ ದಾಖಲಾಗಿತ್ತು.

ವಾಯು ಗುಣಮಟ್ಟ 0 ಇಂದ 50 ನಡುವೆ ಇದ್ದರೆ ಅದನ್ನು ಉತ್ತಮ, 51-100 ನಡುವೆ ಇದ್ದರೆ ತೃಪ್ತಿದಾಯಕ, 101-200 ಇದ್ದರೆ ಮಧ್ಯಮ, 201-300 ಇದ್ದರೆ ಕಳಪೆ, 301-400 ಇದ್ದರೆ ತೀರಾ ಕಳಪೆ, 401-450 ಇದ್ದರೆ ಗಂಭೀರ, 451 ದಾಟಿದರೆ ಅತ್ಯಂತ ಗಂಭೀರ ಎಂದು ಪರಿಗಣಿಸಲಾಗುತ್ತದೆ.