ಕಾಂಗ್ರೆಸ್‌ ಪಕ್ಷಕ್ಕೆ ಶಾಕ್‌ : ಅಧ್ಯಕ್ಷರ ರಾಜೀನಾಮೆ

| Published : Apr 29 2024, 01:40 AM IST / Updated: Apr 29 2024, 04:58 AM IST

Congress flag

ಸಾರಾಂಶ

ಸತತ ಮೂರನೇ ಬಾರಿಗೆ ಬಿಜೆಪಿ ದೆಹಲಿಯ ಎಲ್ಲ 7 ಲೋಕಸಭಾ ಸ್ಥಾನಗಳನ್ನೂ ಗೆಲ್ಲುವುದಕ್ಕೆ ತಡೆಯೊಡ್ಡಲು ಆಮ್‌ ಆದ್ಮಿ ಪಕ್ಷ (ಆಪ್‌)ದ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಚುನಾವಣೆಗೂ ಮುನ್ನ ಭರ್ಜರಿ ಶಾಕ್‌ ಆಗಿದೆ.

 ನವದೆಹಲಿ :  ಸತತ ಮೂರನೇ ಬಾರಿಗೆ ಬಿಜೆಪಿ ದೆಹಲಿಯ ಎಲ್ಲ 7 ಲೋಕಸಭಾ ಸ್ಥಾನಗಳನ್ನೂ ಗೆಲ್ಲುವುದಕ್ಕೆ ತಡೆಯೊಡ್ಡಲು ಆಮ್‌ ಆದ್ಮಿ ಪಕ್ಷ (ಆಪ್‌)ದ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಚುನಾವಣೆಗೂ ಮುನ್ನ ಭರ್ಜರಿ ಶಾಕ್‌ ಆಗಿದೆ. ಆಪ್‌ ಜತೆಗಿನ ಮೈತ್ರಿಯನ್ನು ವಿರೋಧಿಸಿ ದೆಹಲಿ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಅವರು ರಾಜೀನಾಮೆ ನೀಡಿದ್ದಾರೆ.

ದೆಹಲಿಯ ಕಾಂಗ್ರೆಸ್ ಘಟಕ ಆಪ್‌ ಜತೆಗಿನ ಮೈತ್ರಿಗೆ ವಿರುದ್ಧವಿತ್ತು. ಆದರೂ ಪಕ್ಷದ ಹೈಕಮಾಂಡ್‌ ಮೈತ್ರಿ ಮಾಡಿಕೊಂಡಿದೆ. ದೆಹಲಿ ಘಟಕದ ನಾಯಕರು ಸರ್ವಾನುಮತದಿಂದ ತೆಗೆದುಕೊಳ್ಳುವ ನಿರ್ಧಾರಗಳನ್ನು ಎಐಸಿಸಿ ದೆಹಲಿ ಉಸ್ತುವಾರಿಯಾಗಿರುವ ದೀಪಕ್‌ ಬಾಬ್ರಿಯಾ ಅವರು ತಿರಸ್ಕರಿಸುತ್ತಿದ್ದಾರೆ ಎಂದು ದೂರಿ ಲವ್ಲಿ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ದೂರಿದ್ದಾರೆ.

ಬಾಬ್ರಿಯಾ ಜತೆಗಿನ ತಿಕ್ಕಾಟದ ಹಿನ್ನೆಲೆಯಲ್ಲಿ ದೆಹಲಿ ಮಾಜಿ ಸಚಿವ ಹಾಗೂ ಎಐಸಿಸಿ ಸದಸ್ಯ ರಾಜಕುಮಾರ್‌ ಚೌಹಾಣ್‌ ಅವರು ಕೆಲ ದಿನಗಳ ಹಿಂದಷ್ಟೇ ರಾಜೀನಾಮೆ ನೀಡಿದ್ದರು. ಈಗ ಲವ್ಲಿ ಅವರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಆಧರೆ ತಾವು ಯಾವುದೇ ಅನ್ಯ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಲವ್ಲಿ ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಶೀಲಾ ದೀಕ್ಷಿತ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಲವ್ಲಿ ಅವರು ಕಳೆದ ಆಗಸ್ಟ್‌ನಲ್ಲಿ ದೆಹಲಿ ಕಾಂಗ್ರೆಸ್‌ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೌತಮ್‌ ಗಂಭೀರ್‌ ವಿರುದ್ಧ ಪೂರ್ವ ದೆಹಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದರು.