ದೆಹಲಿ ಮದ್ಯ ಹಗರಣ: ಸಿಎಂ ಕೇಜ್ರಿಗೆ ಇ.ಡಿ. ಸಮನ್ಸ್‌

| Published : Oct 31 2023, 01:16 AM IST

ಸಾರಾಂಶ

ನ.2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ. ಡಿಸಿಎಂ ಸಿಸೋಡಿಯಾ ಬಳಿಕ ಸಿಎಂಗೆ ಸಂಕಷ್ಟ.
ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ನ.2ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಬಂಧಿಸಿರುವ ಇ.ಡಿ. ಇದೀಗ ಸ್ವತಃ ಸಿಎಂಗೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಸಮನ್ಸ್‌ ಜಾರಿ ಮಾಡಿದೆ. ಪ್ರಕರಣ ಸಂಬಂಧ ಇ.ಡಿ. ದಾಖಲಿಸಿದ್ದ ಆರೋಪಪಟ್ಟಿಯಲ್ಲಿ ಹಲವು ಬಾರಿ ಕೇಜ್ರಿವಾಲ್‌ ಅವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಮದ್ಯ ಹಗರಣ ರೂಪಿಸಿದವರು ಮತ್ತು ಅದನ್ನು ಜಾರಿಗೊಳಿಸಿದವರ ಜೊತೆ ಕೇಜ್ರಿವಾಲ್‌ ನಿಕಟ ಮತ್ತು ಸತತ ಸಂಪರ್ಕದಲ್ಲಿದ್ದರು ಎಂದು ಆರೋಪಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಕೇಜ್ರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಏನಿದು ಹಗರಣ?: ದಿಲ್ಲಿ ಅಬಕಾರಿ ಸಚಿವರೂ ಆಗಿದ್ದ ಸಿಸೋಡಿಯಾ, ತಮಗೆ ಬೇಕಾದವರಿಗೆ ದಿಲ್ಲಿಯಲ್ಲಿ ಮದ್ಯದಂಗಡಿ ಲೈಸೆನ್ಸ್‌ ಹಂಚಿದ್ದರು. ಇದಕ್ಕೆ ಪ್ರತಿಫಲವಾಗಿ ಮದ್ಯ ಉದ್ಯಮಿಗಳಿಂದ ಹಣ ಸ್ವೀಕರಿಸಿದ್ದರು. 338 ಕೋಟಿ ರು. ಹಣವು ಮದ್ಯ ಉದ್ಯಮಿಗಳಿಂದ ಆಪ್‌ ಹಾಗೂ ಸಿಸೋಡಿಯಾಗೆ ಹರಿದುಬಂದಿತ್ತು ಎಂಬ ಆರೋಪವಿದೆ.