ಸಾರಾಂಶ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಡಿಗ್ರಿ ಮಾಹಿತಿ ಬಹಿರಂಗಪಡಿಸುವ ಸಂಬಂಧ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದು ಮಾಡಿದೆ.
ನೀರಜ್ ಎಂಬವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿ ಹಿನ್ನೆಲೆಯಲ್ಲಿ ಸಿಐಸಿಯು, 1978ರಲ್ಲಿ ಬಿಎ ಪದವಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆ ಪರಿಶೀಲಿಸಲು ಅವರಿಗೆ ಡಿ.21, 2016ರಂದು ಅನುಮತಿ ನೀಡಿತ್ತು. ಈ ಅವಧಿಯಲ್ಲೇ ಪ್ರಧಾನಿ ಮೋದಿ ಅವರು ಕೂಡ ಪದವಿ ಪಡೆದಿದ್ದರು.
ಆದರೆ, ಸಿಐಸಿ ಆದೇಶ ಪ್ರಶ್ನಿಸಿ ದೆಹಲಿ ವಿವಿಯು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪದವಿ ಪಡೆದವರ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಲು ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಆರ್‌ಟಿಐ ಮೂಲಕ ಮೂರನೇ ವ್ಯಕ್ತಿಯೊಬ್ಬ ಪದವಿ ತರಗತಿಯ ದಾಖಲೆ ನೋಡುವುದು ಸಮಂಜಸವಲ್ಲ ಎಂದು ವಾದಿಸಿತ್ತು.
ಈ ಸಂಬಂಧದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾ.ಸಚಿನ್ ದತ್ತಾ ಅವರು ಫೆ.27ರಂದು ತಮ್ಮ ಆದೇಶ ಕಾಯ್ದಿರಿಸಿದ್ದರು. ಇದೀಗ ಸಿಐಸಿಯ ಆದೇಶವನ್ನು ರದ್ದು ಮಾಡಿ ಅವರು ಆದೇಶ ಹೊರಡಿಸಿದ್ದಾರೆ.