ಸಾರಾಂಶ
ನವದೆಹಲಿ: ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ 14 ಜನರನ್ನು ವಶಕ್ಕೆ ತೆಗೆದುಕೊಂಡಿರುವ ದೆಹಲಿ ಪೊಲೀಸರು, ಅಲ್ ಖೈದಾ ಪ್ರೇರಿತ ಭಯೋತ್ಪಾದನಾ ಘಟಕವನ್ನು ಭೇದಿಸಿರುವುದಾಗಿ ಹೇಳಿದ್ದಾರೆ ಹಾಗೂ ಇವರು ಖಿಲಾಫತ್ (ಭಾರತದಲ್ಲೇ ಪ್ರತ್ಯೇಕ ಮುಸ್ಲಿಂ ರಾಜ್ಯ) ಸ್ಥಾಪನೆ ಉದ್ದೇಶ ಹೊಂದಿದ್ದರು ಎಂದು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿ ಪಡೆದ ನಂತರ, ವಿವಿಧ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಭೇದಿಸಲಾದ ಮಾಡ್ಯೂಲ್‌ಗೆ ಜಾರ್ಖಂಡ್‌ನ ರಾಂಚಿಯ ಡಾ। ಇಶ್ತಿಯಾಕ್ ಎಂಬಾತ ನೇತೃತ್ವ ವಹಿಸಿದ್ದ ಮತ್ತು ಇದು ‘ಖಿಲಾಫತ್’ (ಬಂಡಾಯ ಸಾರಿ ಭಾರತದಲ್ಲೇ ಪ್ರತ್ಯೇಕ ಮುಸ್ಲಿಂ ರಾಜ್ಯ) ಘೋಷಿಸಲು ಮತ್ತು ದೇಶದೊಳಗೆ ಗಂಭೀರ ಭಯೋತ್ಪಾದಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಉದ್ದೇಶ ಹೊಂದಿತ್ತು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
ಈ ಸಂಘಟನೆಯ ಸದಸ್ಯರಿಗೆ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು ಸೇರಿದಂತೆ ವಿವಿಧ ಉಗ್ರ ಚಟುವಟಿಕೆಯ ತರಬೇತಿ ನೀಡಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದ 6 ಜನರನ್ನು ರಾಜಸ್ಥಾನದ ಭಿವಾಡಿಯಲ್ಲಿ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಿಂದ ಎಂಟು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲು ಮತ್ತಷ್ಟು ದಾಳಿಗಳು ನಡೆದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.