ಸಾರಾಂಶ
ನವದೆಹಲಿ: ಈವರೆಗೆ ಬಿಸಿಗಾಳಿ ಹಾಗೂ ಬಿರುಬೇಸಿಗೆಯಿಂದ ತತ್ತರಿಸಿದ್ದ ದಿಲ್ಲಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿ ಮೊದಲ ದಿನವೇ 88 ವರ್ಷದಲ್ಲಿ ಕಂಡು ಕೇಳರಿಯದ ಮಳೆ ಸುರಿಸಿದೆ. ಒಂದೇ ದಿನ 23 ಸೆಂ.ಮೀ. ಮಳೆ ಸುರಿದಿದ್ದು, ರಾಜಧಾನಿ ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಭಾರೀ ಗಾಳಿ ಸಹಿತ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ವಾಹನ, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಹಲವು ತಗ್ಗು ಪ್ರದೇಶಗಳು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಜನಜೀವನವೂ ವ್ಯತ್ಯಯವಾಗಿದೆ.
ಗಾಳಿ, ಮಳೆಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿದು ಕಾರು ಚಾಲಕ ಅಸುನೀಗಿ ಸುಮಾರು 10 ಜನ ಗಾಯಗೊಂಡಿದ್ದಾರೆ. ಇನ್ನೊಂದೆಡೆ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಮೂವರು ಮಣ್ಣಿನಡಿ ಸಿಕ್ಕಿಬಿದ್ದಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದ್ದು, ಅವರು ಬದುಕಿರುವ ಸಾಧ್ಯತೆ ಕ್ಷೀಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವಸಂತ್ ವಿಹಾರ್ ಪ್ರದೇಶದಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಸಾವನ್ನಪ್ಪುವುದರೊಂದಿಗೆ ಮೊದಲ ದಿನವೇ ಮಳೆ 5 ಜನರನ್ನು ಬಲಿ ಪಡೆದ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ದೆಹಲಿಯ ವಿಐಪಿ ಪ್ರದೇಶಗಳು ಹಾಗೂ ಜನಸಾಮಾನ್ಯರ ಪ್ರದೇಶಗಳಿಗೂ ಪ್ರವಾಹ ಪರಿಸ್ಥಿತಿ ಉಂಟಾಗಿ ಇಡೀ ದಿನ ಜನರು ಹಾಗೂ ಗಣ್ಯರು ಪರದಾಡಿದ್ದಾರೆ.
ಈ ಮಳೆಯು ರಾಷ್ಟ್ರ ರಾಜಧಾನಿಯ ಮೂಲಸೌಕರ್ಯಗಳು, ವಿಶೇಷವಾಗಿ ಒಳಚರಂಡಿ ವ್ಯವಸ್ಥೆಯಲ್ಲಿನ ಕೊರತೆಗಳನ್ನು ಎತ್ತಿ ತೋರಿಸಿದೆ. ನಗರದ ಹಲವು ಭಾಗಗಳು ನೀರಿನಿಂದ ಮನೆಗಳಿಗೆ ನುಗ್ಗಿ, ವಾಹನಗಳು ಮುಳುಗಿವೆ. ಮೈಲುಗಟ್ಟಲೆ ಸಂಚಾರ ದಟ್ಟಣೆ ಕಂಡುಬಂದಿದೆ.
ಏರ್‌ಪೋರ್ಟ್ ಮೇಲ್ಛಾವಣಿ ಕುಸಿತ
ಶುಕ್ರವಾರ ನಸುಕಿನ 3 ಗಂಟೆಯಿಂದ ಆರಂಭವಾದ ಮಳೆ ಸುಮಾರು 4 ತಾಸು ಸತತವಾಗಿ ಸುರಿದಿದೆ. ಇದರಿಂದಾಗಿ ದಿಲ್ಲಿ ಏರ್‌ಪೋರ್ಟ್‌ನ ಟರ್ಮಿನಲ್ 1ರ ಕೆನೋಪಿ ಮೇಲ್ಛಾವಣಿಯೊಂದು ಬೆಳಗ್ಗೆ 5 ಗಂಟೆಗೆ ಕುಸಿದು, ಕೆಳಗೆ ನಿಂತಿದ್ದ ಕಾರುಗಳ ಮೇಲೆ ಬಿದ್ದಿದೆ. ಹೀಗಾಗಿ ಕಾರಿನ ಒಳಗಿದ್ದ ಕ್ಯಾಬ್ ಚಾಲಕನೊಬ್ಬ ಮೃತಪಟ್ಟಿದ್ದಾನೆ. ಸುಮಾರು 10 ಜನ ಗಾಯಗೊಂಡಿದ್ದು, ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರಿಂದಾಗು ಟಿ-1ಗೆ ಬರುವ ಹಾಗೂ ಟಿ-1ನಿಂದ ಹೋಗುವ ಎಲ್ಲ ವಿಮಾನಗಳ ಕಾರ್ಯಾಚರಣೆಯನ್ನು ಬಹುತೇಕ ಇಡೀ ದಿನ ಸ್ಥಗಿತಗೊಳಿಸಲಾಗಿತ್ತು. ಇದರಿಂದ ನೂರಾರು ವಿಮಾನ ಸಂಚಾರಗಳು ರದ್ದಾದವು. ಕೆಲವು ವಿಮಾನಗಳನ್ನು ಟಿ2 ಹಾಗೂ ಟಿ3 ಮೂಲಕ ಹಾರಿಸಿ ಸಮಸ್ಯೆ ನಿಯಂತ್ರಣಕ್ಕೆ ಪ್ರಯತ್ನಿಸಲಾಯಿತು.
ಘಟನಾ ಸ್ಥಳಕ್ಕೆ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಭೇಟಿ ನೀಡಿ, ‘ಏರ್‌ಪೋರ್ಟ್‌ನ ಸಮಗ್ರ ಸುರಕ್ಷತೆಯನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ತಪಾಸಣಾ ವರದಿ ಬಂದ ನಂತರ ಈ ಘಟನೆಗೆ ಕಾರಣಕರ್ತರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು. ಅಲ್ಲದೆ, ಸಾವನ್ನಪ್ಪಿದ ಕ್ಯಾಬ್ ಕಾರು ಚಾಲಕನ ಬಗ್ಗೆ ಆಘಾತ ವ್ಯಕ್ತಪಡಿಸಿ, ಆತನ ಕುಟುಂಬಕ್ಕೆ 20 ಲಕ್ಷ ರು. ಪರಿಹಾರ ನೀಡಲಾಗುತ್ತದೆ ಎಂದು ಘೋಷಿಸಿದರು.ಟಿ1 ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಿಂದ ದೇಶೀಯ ವಿಮಾನ ಕಾರ್ಯಾಚರಣೆಗಳನ್ನು ಮಾತ್ರ ಹೊಂದಿದೆ. ಒಟ್ಟು 3 ವಿಮಾನ ನಿಲ್ದಾಣದ ಟರ್ಮಿನಲ್‌ಗಳು (ಟಿ1, ಟಿ2 ಮತ್ತು ಟಿ3) ಪ್ರತಿದಿನ ಸುಮಾರು 1,400 ವಿಮಾನ ಸಂಚಾರ ನಿರ್ವಹಿಸುತ್ತವೆ.
ದಿಲ್ಲಿ, ನೋಯ್ಡಾ ಇತರೆಡೆ ಭಾರಿ ಪರದಾಟ
ದಿಲ್ಲಿ ಏರ್‌ಪೋರ್ಟ್‌ನಲ್ಲಿ ಆದ ಅವಾಂತರದ ಬೆನ್ನಲ್ಲೇ ದಿಲ್ಲಿಯ ಅನೇಕ ಭಾಗಗಳಿಗೆ ನೀರು ನುಗ್ಗಿ ರಸ್ತೆ ಸಂಚಾರ ಹಾಗೂ ದೈನಂದಿನ ಜೀವನಕ್ಕೆ ಅಡಚಣೆ ಉಂಟಾಯಿತು. ಒಳಚರಂಡಿ ವ್ಯವಸ್ಥೆ ವೈಫಲ್ಯದ ಕಾರಣ, ದಿಲ್ಲಿಯಲ್ಲಿ ಪ್ರಮುಖ ರಾಜಕಾರಣಿಗಳು ಇರುವ ಲೂಟನ್ಸ್ ಪ್ರದೇಶ, ಪ್ರಗತಿ ಮೈದಾನದ ಸುರಂಗ, ಹೌಜ್ ಖಾಸ್, ಸೌತ್ ಎಕ್ಸ್‌ಟೆನ್ಶನ್, ವಾಹನ ನಿಬಿಡ ಐಟಿಒ ಜಂಕ್ಷನ್ ಮತ್ತು ಮಯೂರ್ ವಿಹಾರ್ ಸೇರಿದಂತೆ ನಗರದಾದ್ಯಂತ ರಸ್ತೆಗಳು ಜಲಾವೃತವಾದವು ಹಾಗೂ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿತು. ನೋಯ್ಡಾದಲ್ಲೂ ಪರಿಸ್ಥಿತಿ ಅಷ್ಟೇ ತೀವ್ರವಾಗಿತ್ತು. ಮಹಾಮಾಯಾ ಫ್ಲೈಓವರ್, ಸೆಕ್ಟರ್ 62, ಮತ್ತು ಸೆಕ್ಟರ್ 15 ಮತ್ತು 16 ಸೇರಿದಂತೆ ಹಲವು ಪ್ರದೇಶಗಳು ತೀವ್ರ ಜಲಾವೃತವಾಗಿದೆ. ಮಳೆ ಕಾರಣ ಸಾವಿರಾರು ಪ್ರಯಾಣಿಕರು ಕಚೇರಿ, ಶಾಲೆ ಅಥವಾ ಕಾಲೇಜಿಗೆ ತೆರಳಲು ತೀವ್ರ ಪರದಾಡುವಂತಾಯಿತು.
ಪ್ರವಾಹಕ್ಕೆ ಕಾರಣ ಏನು?
ಭಾರತೀಯ ಹವಾಮಾನ ಇಲಾಖೆಯ (IMD) ಮಾಹಿತಿಯ ಪ್ರಕಾರ, ನಗರದ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ 228.1 ಮಿಮೀ ಮಳೆ ಬಿದ್ದಿದೆ. ಉಳಿದ ಕಡೆ 10ರಿಂದ 20 ಸೆಂ.ಮೀ. ಮಳೆ ಸುರಿದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಸಚಿವೆ ಆತಿಶಿ, ‘ಒಂದೇ ದಿನ 23 ಸೆಂ.ಮೀ. ದಾಖಲೆ ಮಳೆ ಸುರಿದಿದೆ. ಇಷ್ಟೊಂದು ಮಳೆ ಆದರೆ ಅದನ್ನು ತಾಳುವ ಶಕ್ತಿ ದಿಲ್ಲಿಯ ಒಳಚರಂಡಿಗಳಿಗೆ ಇಲ್ಲ. ಹೀಗಾಗಿ ಒಳಚರಂಡಿಗಳ ಸ್ವಚ್ಛತೆ ಹಾಗೂ ನವೀಕರಣಕ್ಕೆ ಕ್ರಮ ಜರುಗಿಸಲಾಗುತ್ತಿದೆ. ಪ್ರವಾಹದ 200 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ’ ಎಂದಿದ್ದಾರೆ. ಈ ನಡುವೆ, ಪ್ರವಾಹಕ್ಕೆ ದಿಲ್ಲಿ ಸರ್ಕಾರದ ವೈಫಲ್ಯವೇ ಕಾರಣ. ದಿಲ್ಲಿ ಮುಖ್ಯಮಂತ್ರಿ ಜೈಲಲ್ಲಿದ್ದಾರೆ. ಮೂಲಸೌಕರ್ಯ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಜನರು ಹಾಗೂ ಪ್ರತಿಪಕ್ಷಗಳು ಕಿಡಿಕಾರಿವೆ. ಬಿಜೆಪಿ ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ಜಲಾವೃತವಾದ ಬೀದಿಯಲ್ಲಿ ದೋಣಿಯನ್ನು ಓಡಿಸಿ ಕಿಡಿಕಾರಿದ್ದಾರೆ.