ಸಾರಾಂಶ
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯನ್ನು ಹಿಂದಿಕ್ಕಿರುವ ಬೆಂಗಳೂರು, ದೇಶದಲ್ಲೇ ಅತಿ ಹೆಚ್ಚು ಖಾಸಗಿ ಕಾರಗಳನ್ನು ಹೊಂದಿರುವ ನಗರವಾಗಿ ಹೊರಹೊಮ್ಮಿದೆ. ಮಾರ್ಚ್ 31, 2023ರ ಹೊತ್ತಿಗೆ ಬೆಂಗಳೂರಿನಲ್ಲಿ ಬರೋಬ್ಬರಿ 23.1 ಲಕ್ಷ ಖಾಸಗಿ ಕಾರುಗಳಿದ್ದರೆ ದೆಹಲಿಯಲ್ಲಿ 20.7 ಲಕ್ಷ ಖಾಸಗಿ ಕಾರುಗಳಿದ್ದವು ಎಂದು ವರದಿಯೊಂದು ತಿಳಿಸಿದೆ.
ಬೆಂಗಳೂರು ನಗರವು 2022ರ ಪ್ರಕಾರ ಜಗತ್ತಿನಲ್ಲೇ ಲಂಡನ್ ಬಳಿಕ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ 2ನೇ ನಗರ ಎಂಬ ದಾಖಲೆ ಮಾಡಿದೆ. ಈ ನಡುವೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿಯೇ ಇದ್ದು, ಈ ಪೈಕಿ ಖಾಸಗಿ ಕಾರುಗಳು ದೇಶದಲ್ಲಿ ಅತಿ ಹೆಚ್ಚು ಬೆಂಗಳುರಿನಲ್ಲೇ ಇವೆ.
ಇನ್ನು ದೆಹಲಿಯಲ್ಲಿ ನೋಂದಣಿಯಾಗಿರುವ ಒಟ್ಟು 1.2 ಕೋಟಿ ಖಾಸಗಿ ವಾಹನಗಳ ಪೈಕಿ 33.8 ಲಕ್ಷ ಖಾಸಗಿ ಕಾರುಗಳು ನೋಂದಾಗಿವೆ. ಆದರೆ ಕಳೆದ 2 ವರ್ಷಗಳಲ್ಲಿ ದೆಹಲಿಯಲ್ಲಿ ಬರೋಬ್ಬರಿ 55 ಲಕ್ಷ ಖಾಸಗಿ ಕಾರುಗಳ ಹಳೆಯದಾದ ಕಾರುಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ.
1.4 ಲಕ್ಷ ಕಾರುಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ. ಹೀಗಾಗಿ ಸದ್ಯ ದೆಹಲಿಯಲ್ಲಿ ಚಲಾಯಿಸಲಾಗುತ್ತಿರುವ ಖಾಸಗಿ ಕಾರುಗಳ ಸಂಖ್ಯೆ 20.7 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ದೆಹಲಿ ಸರ್ಕಾರ ಬಿಡುಗಡೆ ಮಾಡಿರುವ 2023ರ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ.