ಸಾರಾಂಶ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ದೇಶದಲ್ಲೇ ಅತ್ಯಂತ ಕಳಪೆ ಸ್ಥಿತಿಗೆ ಕುಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆಮ್ ಆದ್ಮಿ ಪಕ್ಷ (ಆಪ್) ನೇತೃತ್ವದ ಸರ್ಕಾರ ಹರಸಾಹಸ ಆರಂಭಿಸಿದೆ. ಅದರ ಮೊದಲ ಭಾಗವಾಗಿ, ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಬಸ್ ಹಾಗೂ ಮೆಟ್ರೋ ರೈಲು ಸಂಚಾರದಲ್ಲಿ ಹೆಚ್ಚಳ ಮಾಡಿದೆ.
ಮತ್ತೊಂದೆಡೆ, ಪಂಜಾಬ್-ಹರ್ಯಾಣ ರಾಜ್ಯಗಳ ಜಂಟಿ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢ, ಹರ್ಯಾಣದ ಹಲವು ಕಡೆಗಳಲ್ಲಿ ವಾಯುಗುಣಮಟ್ಟ ಕಳಪೆ ಸ್ಥಿತಿಯಲ್ಲೇ ಮುಂದುವರಿದಿದೆ. ಆದರೆ ಪಂಜಾಬ್‌ನಲ್ಲಿ ಪರಿಸ್ಥಿತಿ ಸುಧಾರಿಸಿದೆ.
ದೆಹಲಿಯಲ್ಲಿ ಹಲವು ಕ್ರಮ:
ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡುವುದಾಗಿ ಮುಖ್ಯಮಂತ್ರಿ ಆತಿಷಿ ಅವರು ಪ್ರಕಟಿಸಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ನಿವಾರಣೆಯಾಗುವುದರ ಜತೆಗೆ, ಮಾಲಿನ್ಯ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ವೇಳಾಪಟ್ಟಿಯ ಪ್ರಕಾರ, ದೆಹಲಿ ನಗರಪಾಲಿಕೆ ಕಚೇರಿಗಳು ಬೆಳಗ್ಗೆ 8.30ರಿಂದ ಸಂಜೆ 5, ಕೇಂದ್ರ ಸರ್ಕಾರಿ ಕಚೇರಿಗಳು ಬೆಳಗ್ಗೆ 9ರಿಂದ ಸಂಜೆ 5.30 ಹಾಗೂ ದೆಹಲಿ ಸರ್ಕಾರಿ ಕಚೇರಿಗಳು ಬೆಳಗ್ಗೆ 10ರಿಂದ ಸಂಜೆ 6.30ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆ ಹೆಚ್ಚಳ:
ಗಾಳಿ ಕಲುಷಿತವಾಗಿರುವ ಹಿನ್ನೆಲೆಯಲ್ಲಿ ಸ್ವಂತ ಬಳಕೆಯ ವಾಹನಗಳನ್ನು ಬಳಸದಂತೆ ಜನರನ್ನು ಉತ್ತೇಜಿಸಲು ದೆಹಲಿ ಸರ್ಕಾರ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಹೆಚ್ಚಿಸಿದೆ. 106 ಕ್ಲಸ್ಟರ್ ಬಸ್‌ಗಳ ಹೆಚ್ಚುವರಿ ಸಂಚಾರ ಹಾಗೂ ಮೆಟ್ರೋ ರೈಲುಗಳ 60 ಹೆಚ್ಚುವರಿ ಟ್ರಿಪ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.
ಈ ನಡುವೆ ದೆಹಲಿಯ ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಶಾಲೆ ಹೊರಗೆ ನಡೆಸುವ ಪಠ್ಯೇತರ ಚಟುವಟಿಕೆಗಳಿಗೆ ಪೂರ್ಣ ಬ್ರೇಕ್ ಹಾಕಿವೆ. ಜೊತೆಗೆ ಶಾಲೆಯ ಅವಧಿಯಲ್ಲಿ ಕೊಠಡಿ ಬಾಗಿಲು, ಕಿಟಕಿ ಮುಚ್ಚುವಂತೆಯೂ ಸೂಚಿಸಲಾಗಿದೆ.
ಹೊಗೆಮಂಜು ‘ಆರೋಗ್ಯ ಬಿಕ್ಕಟ್ಟು’: ಪಂಜಾಬ್ ಸರ್ಕಾರ ಘೋಷಣೆ
ಲಾಹೋರ್: ವಾಯುಮಾಲಿನ್ಯದಿಂದ ಕಂಗೆಟ್ಟಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹೊಗೆಮಂಜನ್ನು ಆರೋಗ್ಯ ಬಿಕ್ಕಟ್ಟು ಎಂದು ಸರ್ಕಾರ ಘೋಷಿಸಿದೆ. ಲಕ್ಷಾಂತರ ಜನರು ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ತುತ್ತಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪಂಜಾಬ್ ಸರ್ಕಾರ ಲಾಹೋರ್ ಮತ್ತು ಮುಲ್ತಾನ ಪ್ರದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಆರೋಗ್ಯ ಇಲಾಖೆ ಪ್ರಕಾರ, ಸುಮಾರು 20 ಲಕ್ಷ ಜನರು ಅಸ್ತಮಾ, ಎದೆಯ ಸೋಂಕುಗಳು, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮುಲ್ತಾನದಲ್ಲಿ ವಾಯುಗುಣಮಟ್ಟ ಸೂಚ್ಯಂಕ 2000ವನ್ನು ಈಗಾಗಲೇ 2 ಸಲ ದಾಟಿ, ಹೊಸ ದಾಖಲೆ ಬರೆದಿದೆ. ಇದು ದೆಹಲಿಯಲ್ಲಿ ದಾಖಲಾದ ಗರಿಷ್ಠ ಮಾಲಿಯನ್ಯಕ್ಕಿಂತ 5 ಪಟ್ಟು ಹೆಚ್ಚು.