ವೈದ್ಯರಿಲ್ಲದೇ ಮನೇಲೇ ಹೆರಿಗೆಗೆ ತಮಿಳ್ನಾಡಲ್ಲಿ ವಾಟ್ಸಾಪ್‌ ಗ್ರೂಪ್‌! ಪ್ರಕರಣ ತನಿಖೆ

| Published : Nov 22 2024, 01:18 AM IST / Updated: Nov 22 2024, 04:34 AM IST

ಸಾರಾಂಶ

ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡರೂ ಆಸ್ಪತ್ರೆಗೆ ಹೋಗದೆ, ಕೇವಲ ವಾಟ್ಸಾಪ್‌ ಗ್ರೂಪ್‌ನ ಸಲಹೆಯಂತೆ ಪತಿ ಪತ್ನಿಗೆ ಹೆರಿಗೆ ಮಾಡಿಸಿದ ಘಟನೆ ತಮಿಳುನಾಡಿನ ಕುಂಡ್ರತೂರ್‌ನಲ್ಲಿ ನಡೆದಿದೆ.

ಚೆನ್ನೈ: ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡರೂ ಆಸ್ಪತ್ರೆಗೆ ಹೋಗದೆ, ಕೇವಲ ವಾಟ್ಸಾಪ್‌ ಗ್ರೂಪ್‌ನ ಸಲಹೆಯಂತೆ ಪತಿ ಪತ್ನಿಗೆ ಹೆರಿಗೆ ಮಾಡಿಸಿದ ಘಟನೆ ತಮಿಳುನಾಡಿನ ಕುಂಡ್ರತೂರ್‌ನಲ್ಲಿ ನಡೆದಿದೆ.

ಸುಕನ್ಯಾ ಮತ್ತು ಮನೋಹರನ್‌ ದಂಪತಿ ‘ಹೋಂ ಡೆಲಿವರಿ ಎಕ್ಸ್‌ಪಿರಿಯನ್ಸ್‌’ ಎಂಬ ವಾಟ್ಸಾಪ್‌ ಗ್ರೂಪ್‌ನ ಸದಸ್ಯರಾಗಿದ್ದು, ಅದರಲ್ಲಿ ಬರುವ ಪ್ರತಿಯೊಂದು ಸಲಹೆ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಸುಕನ್ಯಾ ಗರ್ಭಿಣಿಯಾದ ಬಳಿಕ ದಂಪತಿಯು ಒಮ್ಮೆಯೂ ವೈದ್ಯರ ಬಳಿ ಹೋಗದೆ ಕೇವಲ ವಾಟ್ಸಾಪ್‌ ಅವಲಂಬಿಸಿದ್ದಾರೆ. ನ.17ರಂದು ಸುಕನ್ಯಾಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕವೂ ಸಹ ಇಬ್ಬರು ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಇದ್ದು, ಗ್ರೂಪ್‌ನ ಸದಸ್ಯರ ಸಲಹೆ ಸೂಚನೆಗಳನ್ನು ಪಾಲಿಸಿ ಮನೋಹರನ್‌ ತನ್ನ ಪತ್ನಿ ಸುಕನ್ಯಾಗೆ ಹೆರಿಗೆ ಮಾಡಿಸಿದ್ದಾರೆ. ಇದಿಷ್ಟೇ ಅಲ್ಲದೇ ತಾಯಿ ಮಗುವಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಾರೆ.

ಇವರ ಫೋಟೋಗಳನ್ನು ಗಮನಿಸಿದ ಆರೋಗ್ಯ ಇಲಾಖೆಯು ಮನೋಹರನ್‌, ವಾಟ್ಸಾಪ್‌ ಗ್ರೂಪ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಇದು ಕೇವಲ ವಾಟ್ಸಾಪ್‌ ನಂಬಿ ಆರೋಗ್ಯ ಕ್ರಮಗಳನ್ನು ಬದಿಗೊತ್ತಿದ್ದಕ್ಕೆ, ವಾಟ್ಸಾಪ್‌ನಲ್ಲಿ ಇಂಥಹ ಸಲಹೆಗಳನ್ನು ಕಳುಹಿಸುವವರ ವಿರುದ್ಧ ತನಿಖೆ ನಡೆಸುತ್ತಿದೆ.