ಸಾರಾಂಶ
ನವದೆಹಲಿ: 10 ವರ್ಷಗಳ ಬಳಿಕ ಪಕ್ಷಕ್ಕೆ ಒಲಿದುಬಂದಿರುವ ಲೋಕಸಭೆಯಲ್ಲಿನ ವಿಪಕ್ಷ ನಾಯಕನ ಸ್ಥಾನ ವಹಿಸಿಕೊಳ್ಳುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು, ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ಒಕ್ಕೊರಲ ಮನವಿ ಮಾಡಿದೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶನಿವಾರ ಇಲ್ಲಿ ಸಭೆ ಸೇರಿದ್ದ ಕಾರ್ಯಕಾರಿ ಸಮಿತಿ ಇಂಥದ್ದೊಂದು ಮನವಿ ಮಾಡಿದೆ.ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಲೋಕಸಭೆಯ ವಿಪಕ್ಷ ನಾಯಕ ಸ್ಥಾನ ವಹಿಸಿಕೊಳ್ಳುವಂತೆ ಸಭೆ ರಾಹುಲ್ ಅವರನ್ನು ಸರ್ವಾನುಮತದಿಂದ ಮನವಿ ಮಾಡಿತು. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ರಾಹುಲ್ ಸಭೆಗೆ ತಿಳಿಸಿದರು’ ಎಂದರು.
ಒಟ್ಟು ಸದನದ ಬಲದ ಶೇ.10ರಷ್ಟು ಅಂದರೆ ಕನಿಷ್ಠ 55 ಸ್ಥಾನ ಗೆದ್ದರೆ ಮಾತ್ರ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷ ಸ್ಥಾನ ನೀಡಲಾಗುತ್ತದೆ. ಆದರೆ ಕಾಂಗ್ರೆಸ್ 2014ರಲ್ಲಿ 44 ಮತ್ತು 2019ರಲ್ಲಿ 51 ಸ್ಥಾನ ಮಾತ್ರ ಗೆದ್ದ ಕಾರಣ ಅಧಿಕೃತ ವಿಪಕ್ಷ ಸ್ಥಾನ ಕೈತಪ್ಪಿತ್ತು. ಆದರೆ ಈ ಬಾರಿ ಕಾಂಗ್ರೆಸ್ 100 ಸ್ಥಾನ ಗೆದ್ದಿರುವ ಕಾರಣ ಅಧಿಕೃತ ವಿಪಕ್ಷ ಸ್ಥಾನ ಸಿಗಲಿದೆ. ವಿಪಕ್ಷ ನಾಯಕರಿಗೆ ಕೇಂದ್ರ ಸಂಪುಟ ಖಾತೆ ಸಚಿವರ ಸ್ಥಾನಮಾನ, ಕೆಲ ಹುದ್ದೆಗಳ ನೇಮಕಕ್ಕೆ ಇರುವ ಸಮಿತಿಯಲ್ಲಿ ಸ್ಥಾನ ಸಿಗುತ್ತದೆ.2 ನಿರ್ಣಯ:
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಾರಣ ಎಂಬ ಒಂದು ನಿರ್ಣಯ ಹಾಗೂ ರಾಹುಲ್ ಗಾಂಧಿ ನಡೆಸಿದ ಎರಡು ಭಾರತ್ ಜೋಡೋ ಯಾತ್ರೆಗಳು ಪಕ್ಷದ ಗೆಲುವಿಗೆ ಕಾರಣವಾದವು ಎಂಬ ಇನ್ನೊಂದು ನಿರ್ಣಯವನ್ನು ಸಿಡಬ್ಲ್ಯುಸಿ ಸಭೆ ಅಂಗೀಕರಿಸಿದೆ.