ಬಾಂಗ್ಲಾದೇಶದಲ್ಲಿ ಕಾಳಿ ದೇವಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕಿರೀಟ ಕಳ್ಳತನ

| Published : Oct 13 2024, 01:15 AM IST / Updated: Oct 13 2024, 04:14 AM IST

ಸಾರಾಂಶ

 ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಆರಂಭವಾಗಿರುವ ಹಿಂದೂಗಳ ಮೇಲೆ ದಾಳಿಗಳು, ದುರ್ಗಾಪೂಜೆ ವೇಳೆ ಮತ್ತಷ್ಟು ತೀವ್ರಗೊಂಡಂತಿದೆ. ಇದೀಗ ಬಾಂಗ್ಲಾದೇಶದ ಕಾಳಿ ಮಂದಿರವೊಂದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ಕಳವು ಮಾಡಲಾಗಿದೆ.

ಢಾಕಾ/ನವದೆಹಲಿ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಆರಂಭವಾಗಿರುವ ಹಿಂದೂಗಳ ಮೇಲೆ ದಾಳಿಗಳು, ದುರ್ಗಾಪೂಜೆ ವೇಳೆ ಮತ್ತಷ್ಟು ತೀವ್ರಗೊಂಡಂತಿದೆ. ಇದೀಗ ಬಾಂಗ್ಲಾದೇಶದ ಕಾಳಿ ಮಂದಿರವೊಂದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ಕಳವು ಮಾಡಲಾಗಿದೆ.

ಅಷ್ಟು ಮಾತ್ರವಲ್ಲ, ನವರಾತ್ರಿ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ದುರ್ಗಾಪೂಜೆ ಪೆಂಡಾಲ್‌ಗಳ ಮೇಲೆ 35ಕ್ಕೂ ಹೆಚ್ಚು ದಾಳಿಗಳು ನಡೆದಿವೆ.

ಇದರ ಬೆನ್ನಲ್ಲೇ ಬೆಳವಣಿಗೆಯನ್ನು ಅತ್ಯಂತ ಗಂಭೀರ ಮತ್ತು ವ್ಯವಸ್ಥಿತ ರೀತಿಯ ದಾಳಿ ಎಂದು ಕಳವಳ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಹಿಂದೂಗಳ ಭದ್ರತೆ ಮತ್ತು ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದೆ.

ಕಿರೀಟ ಕಳ್ಳತನ:

ಪ್ರಧಾನಿ ಮೋದಿ 2021ರಲ್ಲಿ ಬಾಂಗ್ಲಾಕ್ಕೆ ಭೇಟಿ ನೀಡಿದ್ದ ವೇಳೆ ರಾಜಧಾನಿ ಢಾಕಾದ ತಂತಿಬಜಾರ್‌ನಲ್ಲಿರುವ ಪ್ರಸಿದ್ದ ಜೇಶೋರೇಶ್ವರಿ ಕಾಳಿ ದೇಗುಲಕ್ಕೆ ಚಿನ್ನ ಲೇಪಿತ ಬೆಳ್ಳಿ ಕಿರೀಟ ಉಡುಗೊರೆಯಾಗಿ ನೀಡಿದ್ದರು. ಇದು ಭಾರತ ಮತ್ತು ನೆರೆಹೊರೆಯ 51 ಶಕ್ತಿಪೀಠಗಳ ಪೈಕಿ ಒಂದು ಎಂಬ ಹಿರಿಮೆ ಹೊಂದಿದೆ. ಅದನ್ನು ಇತ್ತೀಚಿನ ದುರ್ಗಾಪೂಜೆ ವೇಳೆ ಕಳ್ಳತನ ಮಾಡಲಾಗಿದೆ. ಕಳ್ಳತನದ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿವೆ. ಇದೇ ಪ್ರದೇಶದಲ್ಲಿನ ಇನ್ನೊದು ದುರ್ಗಾ ಪೂಜೆ ಪೆಂಡಾಲ್‌ ಮೇಲೆ ಬಾಂಬ್‌ ಕೂಡಾ ಎಸೆಯಲಾಗಿದೆ.

ಸತತ ದಾಳಿ:

ಈ ನಡುವೆ ಅ.1ರಿಂದ ಬಾಂಗ್ಲಾದೇಶದಾದ್ಯಂತ ದುರ್ಗಾ ಪೂಜೆ ಪೆಂಡಾಲ್‌ಗಳ ಮೇಲೆ ದಾಳಿಯ 35 ಘಟನೆಗಳು ನಡೆದಿವೆ. ಘಟನೆಗಳ ಸಂಬಂಧ 11 ಪ್ರಕರಣ ದಾಖಲಾಗಿದ್ದು, 17 ಜನರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಸರ್ಕಾರ ಹೇಳಿದೆ. ಈ ನಡುವೆ, ಶನಿವಾರ ಬಾಂಗ್ಲಾ ಆಡಳಿತಗಾರ ಮುಹಮ್ಮದ್‌ ಯೂನಸ್‌, ಢಾಕೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಹಿಂದೂಗಳಲ್ಲಿ ಧೈರ್ಯ ತುಂಬುವ ಯತ್ನ ಮಾಡಿದ್ದಾರೆ.