ಭಾರತದ ದಾಳಿಗೆ ಬಲಿಯಾದವರು ತ್ಯಾಗಿಗಳು ದೇವ್‌ಬಂದ್‌ ಫತ್ವಾ!

| Published : Feb 23 2024, 01:46 AM IST

ಸಾರಾಂಶ

ಭಾರತ ಕುರಿತಂತೆ ದಾರುಲ್‌ ಉಲೂಂ ವಿವಾದಿತ ಫತ್ವಾ ಹೊರಡಿಸಿದ್ದು, ಮದರಸಾ ವಿರುದ್ಧ ಕೇಸ್‌ಗೆ ಮಕ್ಕಳ ಆಯೋಗ ಸೂಚನೆ ನೀಡಿದೆ.

ದೇವಬಂದ್‌ (ಉ.ಪ್ರ.): ಆಗಾಗ ವಿವಾದಿತ ಫತ್ವಾಗಳನ್ನು ಹೊರಡಿಸಿ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ದಾರುಲ್‌ ಉಲೂಂ ದೇವಬಂದ್‌ ಮದರಸಾ, ಈಗ ಘಜ್ವಾ ಎ ಹಿಂದ್‌ (ಭಾರತ ದಾಳಿಯಲ್ಲಿ ಹುತಾತ್ಮರಾದ ಮುಸ್ಲಿಮರು) ಕುರಿತಂತೆ ಫತ್ವಾ ಹೊರಡಿಸಿ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಈ ಸಂಬಂಧ ದೇವ್‌ಬಂದ್ ವಿರುದ್ಧ ಪ್ರಕರಣ ದಾಖಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಮಕ್ಕಳ ಆಯೋಗವು ಸೂಚಿಸಿದೆ.

ಇತ್ತೀಚೆಗೆ ಕೆಲವರು ಘಜ್ವಾ ಎ ಹಿಂದ್‌ ಬಗ್ಗೆ ದೇವಬಂದ್‌ಗೆ ಕೆಲವು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ದೇವಬಂದ್‌, ಭಾರತವು ನಡೆಸಿದ ದಾಳಿಗಳಲ್ಲಿ ಪ್ರಾಣ ಕಳೆದುಕೊಳ್ಳುವವರನ್ನು ಮಹಾನ್ ತ್ಯಾಗಿಗಳು ಎಂದು ಶ್ಲಾಘಿಸಲಾಗುತ್ತದೆ ಎಂದು ವಿಶ್ಲೇಷಿಸಿದೆ.ಇದಕ್ಕೆ ಕಿಡಿಕಾರಿರುವ ಮಕ್ಕಳ ಆಯೋಗ, ಮದರಸಾದ ಈ ಹೇಳಿಕೆ ಮಕ್ಕಳಲ್ಲಿ ದ್ವೇಷ ಭಾವನೆ ಮೂಡಿಸುತ್ತದೆ ಹಾಗೂ ಘಜ್ವಾ ಎ ಹಿಂದ್‌ ಅನ್ನು ವೈಭವೀಕರಿಸುತ್ತದೆ. ಹೀಗಾಗಿ ಅದರ ವಿರುದ್ಧ ಕೇಸು ದಾಖಲಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.