ಸಾರಾಂಶ
ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಪರಂಪರೆಯನ್ನು ಬೆಳೆಸುವುದು ಮತ್ತು ಅಭಿವೃದ್ಧಿಯ ಸಂಪ್ರದಾಯವನ್ನು ಬೆಳೆಸುವುದು ವಿಕಸಿತ ಭಾರತದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದೂ ಹೇಳಿದ್ದಾರೆ.
ಇಲ್ಲಿ ನಡೆದ ದಿನಗಳ ‘ಬಿಜೆಪಿ ಮುಖ್ಯಮಂತ್ರಿ ಪರಿಷತ್’ ಸಭೆಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ 13 ಮುಖ್ಯಮಂತ್ರಿಗಳು ಮತ್ತು 15 ಉಪಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಮೋದಿ, ಈ ಮೇಲ್ಕಂಡ ಮಾತುಗಳನ್ನು ಆಡಿದರು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸರ್ಕಾರ ಉತ್ತಮ ಕೆಲಸಗಳನ್ನು ಜನರಿಗೆ ತಲುಪಿಸಿ. ಕೇಂದ್ರೀಯ ಯೋಜನೆಗಳನ್ನು ಬದಲಿಸದೇ ಯಥಾವತ್ತಾಗಿ ರಾಜ್ಯಗಳಲ್ಲಿ ಜಾರಿಗೆ ತನ್ನಿ ಎಂದು ಸೂಚಿಸಿದರು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಹಿರಿಯ ನಾಯಕ ವಿನಯ್ ಸಹದ್ರಬುದ್ಧೆ ಹೇಳಿದರು.
ಇದೇ ವೇಳೆ, ಭಾರತವನ್ನು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿ ಮಾಡಲು ಸರ್ಕಾರ ಹಾಕಿಕೊಂಡಿರುವ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಬೆಳಕು ಚೆಲ್ಲಿದ ಮೋದಿ, ಸರ್ಕಾರದ ಕಲ್ಯಾಣ ಕಾಯಕ್ರಮಗಳಲ್ಲಿ ಸಾರ್ವಜನಿಕ ಭಾಗಿಯ ಮಹತ್ವನ್ನು ಒತ್ತಿ ಹೇಳಿದರು. ಜೊತೆಗೆ, ಸರ್ಕಾರದ ವಿವಿಧ ಯೋಜನೆಗಳು ಸಮಾಜದ ವಿವಿಧ ವರ್ಗವನ್ನು ತಲುಪಿಸುವಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆಯೂ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ರಾಜ್‌ನಾಥ್ ಸಿಂಗ್, ಅಮಿತ್ ಶಾ ಭಾಗವಹಿಸಿದ್ದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೂತನ ಶಿಕ್ಷಣ ಪದ್ಧತಿಯ ಪ್ರಯೋಜನಗಳ ವಿವರ ನೀಡಿದರು.