ಸಾರಾಂಶ
ನವದೆಹಲಿ: ಮಾಜಿ ರಾಷ್ಟ್ರಪತಿ ಡಾ। ಎಪಿಜಿ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ ಸಿನಿಮಾವನ್ನು ನಿರ್ದೇಶಕ ಓಂ ರಾವತ್ ನಿರ್ದೇಶಿಸಲಿದ್ದು, ಈ ಸಿನಿಮಾದಲ್ಲಿ ತಮಿಳು ನಟ ಧನುಷ್ ಅವರು ಕಲಾಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎನ್ನುವ ಹೆಸರಿನ ಚಿತ್ರ ತೆರೆಗೆ ಬರಲಿದ್ದು, ಬುಧವಾರ ಕಾನ್ಸ್ ಚಿತ್ರೋತ್ಸವ ಸಂದರ್ಭದಲ್ಲಿ ಶೀರ್ಷಿಕೆಗೆ ಘೋಷಣೆಯಾಗಿದೆ. ಈ ಬಗ್ಗೆ ನಟ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಿನಿಮಾದ ಮೊದಲ ಪೋಸ್ಟರ್ ಹಂಚಿಕೊಂಡು ಖುಷಿ ವ್ಯಕ್ತ ಪಡಿಸಿದ್ದಾರೆ. ‘ಕಲಾಂರಂತಹ ಸ್ಫೂರ್ತಿದಾಯಕ, ಉದಾತ್ತ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಾನು ನಿಜವಾಗಿಯೂ ಧನ್ಯ’ ಎಂದಿದ್ದಾರೆ.
ಸಿನಿಮಾವನ್ನು ತಾನಾಜಿ: ದಿ ಅನ್ಸಂಗ್ ವಾರಿಯರ್, ಆದಿಪುರಷ ಸಿನಿಮಾ ಖ್ಯಾತಿಯ ಓಂ ರಾವುತ್ ನಿರ್ದೇಶಿಸಲಿದ್ದಾರೆ,
ಟಿ- ಸಿರೀಸ್‌ನ ಭೂಷಣ್ ಕುಮಾರ್ ಮತ್ತು ಕೃಷ್ಣ ಕುಮಾರ್ , ಆರ್ಟ್ಸ್‌ನ ಅಭಿಷೇಕ್ ಅಗರ್ವಾಲ್ ಮತ್ತು ಅನಿಲ್ ಸುಂಕಾರ ನಿರ್ಮಿಸಲಿದ್ದಾರೆ.
ತಿರುಪತಿ: ವಂಚನೆ ತಡೆ, ಸುಲಭ ದರ್ಶನಕ್ಕೆ ಎಐ ಅಳವಡಿಕೆ
ತಿರುಪತಿ: ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದ ತೀರ್ಥಯಾತ್ರೆಯ ಅನುಭವವನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನದ ಬಳಕೆಗೆ ದೇವಸ್ಥಾನದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ.‘ದೇವರ ಸುಗಮ ದರ್ಶನ ಖಚಿತಪಡಿಸಿಕೊಳ್ಳಲು, ಸೋಗು ಮತ್ತು ವಂಚನೆಯ ಚಟುವಟಿಕೆಗಳನ್ನು ತಡೆಯಲು, ವಸತಿ, ಪ್ರವೇಶ ನಿಯಂತ್ರಣ ಮತ್ತು ಇತರ ಕಾರ್ಯಾಚರಣೆಗಳನ್ನು ಸುಲಭಗೊಳಿಸಲು, ನಿಜವಾದ ಯಾತ್ರಿಕರನ್ನು ದೃಢೀಕರಿಸಲು ಎಐ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಟಿಟಿಡಿ ಹೇಳಿದೆ.
‘ಈ ಉಪಕ್ರಮಗಳ ಭಾಗವಾಗಿ, ಯಾತ್ರಿಕರಿಗೆ ದರ್ಶನ ಟೋಕನ್‌ಗಳನ್ನು ಒದಗಿಸಲಾಗುವುದು. ಇದು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಅವರ ಮುಖದ ವೈಶಿಷ್ಟ್ಯಗಳನ್ನು ಸೆರೆಹಿಡಿಯುತ್ತದೆ. ಯಾತ್ರಿಕರ ಚಿತ್ರವನ್ನು ಸೆರೆಹಿಡಿಯುವಾಗ, ಕಳೆದ 30 ದಿನಗಳ ದತ್ತಾಂಶ ಅಥವಾ ಸುಮಾರು 10 ಲಕ್ಷ ಚಿತ್ರಗಳ ಮೂಲಕ ಅದನ್ನು ಪರಿಶೀಲಿಸುತ್ತದೆ’ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲ ರಾವ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ನಕ್ಸಲ್ ಕೃಷ್ಣಮೂರ್ತಿ ಸೇರಿ ಇಬ್ಬರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್
ಎರ್ನಾಕುಲಂ (ಕೇರಳ): ನಿಷೇಧಿತ ಸಿಪಿಐ(ಮಾವೋವಾದಿ) ನಕ್ಸಲ್ ಸಂಘಟನೆಯ ಯುವಘಟಕಕ್ಕೆ ಕೇರಳದಲ್ಲಿ 2022ರಲ್ಲಿ ಯುವಜನರನ್ನು ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ಕರ್ನಾಟಕದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಸೇರಿ ಇಬ್ಬರು ನಕ್ಸಲರ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.
ಎರ್ನಾಕುಲಂನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಈ ಚಾರ್ಜ್‌ಶೀಟ್‌ನಲ್ಲಿ ನಕ್ಸಲರಾದ ಆರ್.ರಾಘವೇಂದ್ರ ಅಲಿಯಾಸ್ ರಾಘವೇಂದ್ರ ಮತ್ತು ಸಿಪಿಐನ ಕೇಂದ್ರೀಯ ಸಮಿತಿ ಸದಸ್ಯನೂ ಆಗಿರುವ ಬಿ.ಜಿ.ಕೃಷ್ಣಮೂರ್ತಿ ಅಲಿಯಾಸ್ ವಿಜಯ್ ಅಲಿಯಾಸ್ ಬಾಬಣ್ಣ ವಿರುದ್ಧ ಆರೋಪ ದಾಖಲಿಸಲಾಗಿದೆ.
2022ರ ಫೆಬ್ರವರಿಯಲ್ಲಿ ಸಿಪಿಐಯ ಶಸ್ತ್ರಸಜ್ಜಿತ ಪಿಎಲ್‌ಜಿಎ (ಪೀಪಲ್ಸ್ ಲಿಬರೇಷನ್ ಗೊರಿಲ್ಲಾ ಆರ್ಮಿ)ಗೆ ಯುವಕರನ್ನು ನೇಮಿಸಿದ ಸಂಬಂಧ ಎನ್‌ಐಎ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿತ್ತು.ಈ ರೀತಿ ನೇಮಕಾತಿಗೊಂಡವರಿಗೆ ಪಶ್ಚಿಮಘಟ್ಟದಲ್ಲಿ ದೇಶದ ವಿರುದ್ಧ ಯುದ್ಧಸಾರಲು ಕೃಷ್ಣಮೂರ್ತಿ ಸೈದ್ಧಾಂತಿಕ ಮತ್ತು ಶಸ್ತ್ರಾಸ್ತ್ರ ತರಬೇತಿ ನೀಡಿದ್ದಾನೆ ಎಂದು ಎನ್‌ಐಎ ಆರೋಪಿಸಿದೆ. ಬಿ.ಜಿ.ಕೃಷ್ಣಮೂರ್ತಿ ಮೂಲ ಕರ್ನಾಟಕದ ಚಿಕ್ಕಮಗಳೂರಾಗಿದ್ದರೆ, ನಕ್ಸಲ್ ರಾಘವೇಂದ್ರನ ಮೂಲ ತಮಿಳುನಾಡಿನ ವೆಲ್ಲೂರು ಆಗಿದೆ.
ಮಣಿಪುರ ಹೈಕೋರ್ಟ್ ಸಿಜೆ ಆಗಿ ಕನ್ನಡಿಗ ನ್ಯಾ। ಸೋಮಶೇಖರ್ ಪ್ರಮಾಣ
ಇಂಫಾಲ್: ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ನ್ಯಾ. ಕೆಂಪಯ್ಯ ಸೋಮಶೇಖರ್ ಅವರು ಮಣಿಪುರ ಹೈಕೋರ್ಟ್‌ನ 9ನೇ ಮುಖ್ಯ ನ್ಯಾಯಾಧೀಶರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.ಇಂಫಾಲ್‌ನ ರಾಜಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ನ್ಯಾ. ಸೋಮಶೇಖರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಮಣಿಪುರ ಹೈಕೋರ್ಟ್‌ನ ನ್ಯಾಯಾಧೀಶರು, ಮುಖ್ಯ ಕಾರ್ಯದರ್ಶಿ, ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ, ಪೊಲೀಸ್ ಮಹಾನಿರ್ದೇಶಕರು, ಇನ್ನಿತರ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.ನ್ಯಾ. ಕೆಂಪಯ್ಯ ಸೋಮಶೇಖರ್ ಅವರನ್ನು ಮೇ 20ರಂದು ರಾಷ್ಟ್ರಪತಿಗಳು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದರು.