ಬಂಧನದಿಂದ ಯೂಟ್ಯೂಬರ್‌ ಸಮೀರ್‌ ಸ್ವಲ್ಪದರಲ್ಲೇ ಪಾರು

| N/A | Published : Aug 22 2025, 01:00 AM IST

ಸಾರಾಂಶ

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿಕೊಂಡಿದ್ದ ಅನಾಮಿಕ ದೂರುದಾರನ ಪ್ರಕರಣ ಸಂಬಂಧ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸುಳ್ಳು ಮಾಹಿತಿಯನ್ನೊಳಗೊಂಡ ವಿಡಿಯೋ ಬಿಡುಗಡೆ ಮಾಡಿದ ಪ್ರಕರಣದಲ್ಲಿ ಯೂಟ್ಯೂಬರ್‌ ಸಮೀರ್‌ ಎಂ.ಡಿ. ಗುರುವಾರ ಸ್ವಲ್ಪದರಲ್ಲೇ ಬಂಧನದಿಂದ ಪಾರಾಗಿದ್ದಾರೆ

 ಮಂಗಳೂರು/ ಬಳ್ಳಾರಿ :  ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿಕೊಂಡಿದ್ದ ಅನಾಮಿಕ ದೂರುದಾರನ ಪ್ರಕರಣ ಸಂಬಂಧ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸುಳ್ಳು ಮಾಹಿತಿಯನ್ನೊಳಗೊಂಡ ವಿಡಿಯೋ ಬಿಡುಗಡೆ ಮಾಡಿದ ಪ್ರಕರಣದಲ್ಲಿ ಯೂಟ್ಯೂಬರ್‌ ಸಮೀರ್‌ ಎಂ.ಡಿ. ಗುರುವಾರ ಸ್ವಲ್ಪದರಲ್ಲೇ ಬಂಧನದಿಂದ ಪಾರಾಗಿದ್ದಾರೆ. ಸಮೀರ್‌ ಬಂಧಿಸಲು ಪೊಲೀಸರು ಶೋಧ ಆರಂಭಿಸಿ, ಅವರ ಮನೆಗೆ ಎಡತಾಕಿದ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವ ಹೂತ ಪ್ರಕರಣ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ವರದಿ ಪ್ರಸಾರ ಮಾಡಿದ ಕುರಿತು ಧರ್ಮಸ್ಥಳ ಪೊಲೀಸರು ಜು.12ರಂದು ಸಮೀರ್‌ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಆತನ ಬಂಧನಕ್ಕಾಗಿ ಪೊಲೀಸರು ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಬಳಿಯ ಹುಲ್ಲಹಳ್ಳಿ ಹಾಗೂ ಬಳ್ಳಾರಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದರಿಂದ ಸಮೀರ್‌ ನಿರಾಳರಾಗಿದ್ದಾರೆ. 

ಪೊಲೀಸರ ತಲಾಶ್‌:

ದೂರುದಾರ ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ, ಇತರ ಸಂಗತಿಗಳ ಕುರಿತು ಎಐ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಸಮೀರ್‌ ಹರಿಯಬಿಟ್ಟಿದ್ದರು. ಸಾಕ್ಷಿ ದೂರುದಾರ ಹಾಗೂ ಪ್ರಕರಣದ ಬಗ್ಗೆ ಇತರ ಹೆಚ್ಚಿನ ಮಾಹಿತಿಗಳನ್ನು ಒಳಗೊಂಡಿರುವ ಕಾಲ್ಪನಿಕವಾಗಿ ಈ ವಿಡಿಯೋ ಸೃಷ್ಟಿಸಲಾಗಿತ್ತು. ಸುಳ್ಳು ಮಾಹಿತಿಗಳನ್ನೊಳಗೊಂಡ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ ಆರೋಪ ಸಮೀರ್‌ ಮೇಲೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಜು.12ರಂದು ಬಿಎನ್‌ಎಸ್ 192, 240, 353(1)(ಬಿ) ರಂತೆ ಸುಮೋಟೋ ಕೇಸ್‌ ದಾಖಲಿಸಲಾಗಿತ್ತು.

ಹಲವು ಬಾರಿ ನೋಟಿಸ್‌ ನೀಡಿದರೂ ಸಮೀರ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಧರ್ಮಸ್ಥಳ ಪೊಲೀಸರು ಸಮೀರ್‌ ಬಂಧನಕ್ಕಾಗಿ ಬಳ್ಳಾರಿಯ ಕೌಲ್‌ಬಜಾರ್‌ನ ಅಜಾದ್ ನಗರ, ಹೊಸಪೇಟೆ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲ್ಲಹಳ್ಳಿ ಬಳಿಯ ರಾಯಲ್ ರೆಸಿಡೆನ್ಸಿ ಲೇಔಟ್‌, ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಪಕ್ಕದಲ್ಲಿರುವ ಆತನ ಮನೆಗಳಿಗೆ ತೆರಳಿದ್ದರು. ಆದರೆ, ಪೊಲೀಸರ ಆಗಮನದ ಸುಳಿವು ಅರಿತಿದ್ದ ಆತ, ಅಲ್ಲಿಂದ ಪರಾರಿಯಾಗಿದ್ದರು.

ಈ ಮಧ್ಯೆ, ಸಮೀರ್ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯದಲ್ಲಿ ಆ.19ರಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುರುವಾರ ಆದೇಶ ಕಾಯ್ದಿರಿಸಿತ್ತು. ಗುರುವಾರ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಎರಡು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ, ಪೊಲೀಸ್ ವಿಚಾರಣೆಗೆ ಸಹಕರಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಸಾಕ್ಷ್ಯ ನಾಶ ಮಾಡದಂತೆಯೂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಂಧನದ ಆತಂಕದಲ್ಲಿದ್ದ ಸಮೀರ್‌, ಕಳೆದೊಂದು ವಾರದಿಂದ ತನ್ನ ಮೊಬೈಲ್ ಉಪಯೋಗಿಸದೆ, ಚಿಕ್ಕಮ್ಮನ ಮಗನ ಮೊಬೈಲ್ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಮೊಬೈಲ್ ಲೊಕೇಷನ್ ಆಧರಿಸಿ ಜಿಗಣಿ ಸಮೀಪದ ಬನ್ನೇರುಘಟ್ಟ ಬಳಿಯ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಪಕ್ಕದಲ್ಲಿರುವ ಮನೆಗೆ ಬಂದಿದ್ದರು. ಆ ವೇಳೆಗಾಗಲೇ ಆತ ಮನೆಯಿಂದ ಪರಾರಿಯಾಗಿದ್ದರು. ಸಮೀರ್‌ ಬಂದರೆ ಕಡ್ಡಾಯವಾಗಿ ತಿಳಿಸುವಂತೆ ಸೂಚನೆ ನೀಡಿ, ಪೊಲೀಸರು ಅಲ್ಲಿಂದ ತೆರಳಿದ್ದರು. ಬಳಿಕ, ಹುಲ್ಲಹಳ್ಳಿ ಬಳಿಯ ರಾಯಲ್ ರೆಸಿಡೆನ್ಸಿ ಲೇಔಟ್ ಲೊಕೇಷನ್‌ ಆಧರಿಸಿ, ಪೊಲೀಸರು ಅಲ್ಲಿಗೆ ತೆರಳಿದರಾದರೂ, ಸಮೀರ್‌ ಅಲ್ಲಿಂದಲೂ ಪರಾರಿಯಾಗಿದ್ದರು.

ಇನ್ನೊಂದು ತಂಡ ಬಳ್ಳಾರಿ, ಹೊಸಪೇಟೆಗೆ ತೆರಳಿತ್ತು. ಮೂಲತಃ ಬಳ್ಳಾರಿಯ ಕೌಲ್‌ಬಜಾರ್‌ನ ಅಜಾದ್ ನಗರ ನಿವಾಸಿಯಾದ ಸಮೀರ್ ತಂದೆ-ತಾಯಿ 2012-13ರಲ್ಲಿಯೇ ಬಳ್ಳಾರಿ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಈ ಮಧ್ಯೆ, ಆತ ಮೊದಲ ಬಾರಿ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದಾಗ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಕೆಲ‌ಕಾಲ ಹೊಸಪೇಟೆಯ ಅನಂತಶಯನ ಗುಡಿ ಪ್ರದೇಶದ ಚಪ್ಪರದಹಳ್ಳಿ ಬಡಾವಣೆಯಲ್ಲಿರುವ ಸಂಬಂಧಿಕರ ಮನೆಯಲ್ಲಿಯೂ ಸಮೀರ್‌ ವಾಸವಾಗಿದ್ದರು. ಈಗ ಈತನ ತಾಯಿ ಆಂಧ್ರಪ್ರದೇಶದ ಗುಂತಕಲ್ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ 

ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ:

ಈ ನಡುವೆ, ಸಮೀರ್‌ ಪಕ್ಕದ ಮನೆಯ ನಿವಾಸಿ ಆಶಾ ಹೇಳಿಕೆ ನೀಡಿದ್ದು, ಕಳೆದ ಒಂದು ವರ್ಷದಿಂದ ಸಮೀರ್ ಕುಟುಂಬ ಇಲ್ಲಿ ವಾಸವಿದೆ. ತಾಯಿ ಆಪ್ರೋಜಾ ಜೊತೆ ಸಮೀರ್ ವಾಸವಿದ್ದರು. ಆದರೆ, ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ತಾಯಿ ಬಳ್ಳಾರಿ ಮೂಲದವರು, ಅವರು ಕೂಡ ಇತ್ತೀಚೆಗೆ ಊರಿಗೆ ಹೋಗಿದ್ದರು. ನಮಗೂ ಕೂಡ ಧರ್ಮಸ್ಥಳ ಸ್ಟೋರಿ ಬಂದ ಮೇಲೆ ಸಮೀರ್ ಯೂಟ್ಯೂಬರ್ ಎಂಬುದು ತಿಳಿಯಿತು ಎಂದು ಮಾಹಿತಿ ನೀಡಿದ್ದಾರೆ.

Read more Articles on