ಟ್ರಂಪ್‌ಗೆ ಹೆದರಿ ಜಿಎಸ್ಟಿ ಸುಧಾರಣೆ ಮಾಡಿಲ್ಲ : ಸಚಿವೆ ನಿರ್ಮಲಾ

| N/A | Published : Sep 09 2025, 09:57 AM IST

nirmala seetharaman
ಟ್ರಂಪ್‌ಗೆ ಹೆದರಿ ಜಿಎಸ್ಟಿ ಸುಧಾರಣೆ ಮಾಡಿಲ್ಲ : ಸಚಿವೆ ನಿರ್ಮಲಾ
Share this Article
  • FB
  • TW
  • Linkdin
  • Email

ಸಾರಾಂಶ

ಜಿಎಸ್‌ಟಿಯಲ್ಲಿ ಏನಾದರೂ ಸುಧಾರಣೆ ತನ್ನಿ. ಅದರ ಜಾರಿ ಮತ್ತು ಅನುಸರಣೆ ಸರಳವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಬಜೆಟ್‌ ಮಂಡನೆ ಮುಗಿಯುತ್ತಿದ್ದಂತೆ ನಾನು ಆ ಕೆಲಸಕ್ಕೆ ಇಳಿದೆ

ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ 

ಜಿಎಸ್‌ಟಿಯಲ್ಲಿ ಏನಾದರೂ ಸುಧಾರಣೆ ತನ್ನಿ. ಅದರ ಜಾರಿ ಮತ್ತು ಅನುಸರಣೆ ಸರಳವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಬಜೆಟ್‌ ಮಂಡನೆ ಮುಗಿಯುತ್ತಿದ್ದಂತೆ ನಾನು ಆ ಕೆಲಸಕ್ಕೆ ಇಳಿದೆ. ಫಲವಾಗಿ ದೇಶದ ಜನತೆಗೆ ದಸರಾ ಉಡುಗೊರೆ ರೂಪದಲ್ಲಿ ಸೆ.22ರಂದು ಜಿಎಸ್‌ಟಿ 2.0 ಜಾರಿಯಾಗಲಿದೆ. ಇದು ಜನಸಾಮಾನ್ಯರಿಗಾಗಿ ಮಾಡಲಾದ ಬದಲಾವಣೆ.

 ದೇಶದಲ್ಲಿ ಆರ್ಥಿಕ ಸುಧಾರಣೆ ತರುವ ಉದ್ದೇಶದಿಂದ ಜಾರಿಗೆ ತರಲಾದ ಜಿಎಸ್‌ಟಿ (ಸರಕು ಮತ್ತು ಸೇವೆ ತೆರಿಗೆ) ವ್ಯವಸ್ಥೆಯನ್ನು ಇದೀಗ ಇನ್ನಷ್ಟು ಸರಳೀಕರಿಸಲಾಗಿದೆ. ಇದು ಜನಸಾಮಾನ್ಯರು, ರೈತರು ಮತ್ತು ಸಣ್ಣ ಉದ್ದಿಮೆದಾರರಿಗಾಗಿ ಮಾಡಲಾದ ಸುಧಾರಣೆ. ಈ ಮೊದಲು 4 ಇದ್ದ ಸ್ತರಗಳನ್ನು ಎರಡಕ್ಕೆ ಇಳಿಸಿರುವುದರಿಂದ ರದ್ದಾದ ಸ್ತರಗಳಲ್ಲಿದ್ದ ವಸ್ತುಗಳು ಶೇ.5 ಮತ್ತು ಶೇ.18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದು ದೇಶದ 140 ಕೋಟಿ ಜನರ ನಿತ್ಯಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. 2017ರಲ್ಲಿ ‘ಒಂದು ದೇಶ, ಒಂದು ತೆರಿಗೆ’ ಉದ್ದೇಶದಿಂದ ಜಿಎಸ್‌ಟಿ ಜಾರಿಗೆ ತಂದ ಬಳಿಕ, ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮಾಡಲಾದ ಮೊದಲ ಅತಿದೊಡ್ಡ ಸುಧಾರಣೆ ಇದಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್‌ ಕೂಡ ಮಧ್ಯಮ ವರ್ಗದ ಕೇಂದ್ರಿತವಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಇನ್ನು ಮುಟ್ಟಿದ್ದೆಲ್ಲಾ ಅಗ್ಗ: ಈ ಬದಲಾವಣೆಯಿಂದ ದಿನಬಳಕೆಯ ಅದೆಷ್ಟೋ ವಸ್ತುಗಳು ಅಗ್ಗವಾಗಲಿವೆ. ಫಲವಾಗಿ ಕೊಳ್ಳುವಿಕೆ ಹೆಚ್ಚಿ, ಆರ್ಥಿಕತೆಯ ಬಲವರ್ಧನೆ ಸಾಧ್ಯವಾಗುತ್ತದೆ. ಈಗಾಗಲೇ ಇದರ ಪರಿಣಾಮಗಳು ಗೋಚರಿಸಲು ಪ್ರಾರಂಭವಾಗಿದೆ. ಬಟ್ಟೆ, ಪಾದರಕ್ಷೆ, ಸೋಪು, ಶಾಂಪುಗಳಂತಹ ಸಣ್ಣ-ಪುಟ್ಟ ಅತ್ಯಗತ್ಯ ವಸ್ತುಗಳ ತಯಾರಿಕಾ ಕಂಪನಿಗಳಿಂದ ಹಿಡಿದು, ಕಾರ್‌, ಎಸಿ ಉತ್ಪಾದಕರು, ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಸಹ ತಮ್ಮ ಸರಕು ಮತ್ತು ಸೇವೆಗಳ ದರ ಇಳಿಕೆಯ ಘೋಷಣೆ ಮಾಡಿವೆ. ಸೆ.22ರಂದು ಸುಧಾರಿತ ಜಿಎಸ್‌ಟಿ ಜಾರಿಯ ಬಳಿಕವೂ ಹಲವು ಕ್ಷೇತ್ರಗಳಲ್ಲಿ ಈ ಟ್ರೆಂಡ್‌ ಮುಂದುವರೆಯಲಿದೆ. ಜೀವವಿಮೆ ಮತ್ತು ಆರೋಗ್ಯ ವಿಮೆಗಳ ಮೇಲಿನ ತೆರಿಗೆಯನ್ನಂತೂ ಶೂನ್ಯಕ್ಕೆ ಇಳಿಸಲಾಗಿದೆ.

ಎಲ್ಲರ ಮೇಲೂ ಪರಿಣಾಮ: ಜಿಎಸ್‌ಟಿ 2.0ರ ಲಾಭವನ್ನು ಪ್ರತಿಯೊಬ್ಬ ದೇಶವಾಸಿ ಪಡೆಯಲಿದ್ದಾರೆ. ಜನ ದಿನವೂ ಬಳಸುವ ದಿನಸಿಗೆ ಕೇವಲ ಶೇ.5ರಷ್ಟು ತೆರಿಗೆ ಪಾವತಿಸಬೇಕು. ಇನ್ನೂ ಕೆಲ ಆಹಾರ ಹಾಗೂ ಇತರೆ ಪದಾರ್ಥಗಳನ್ನು ಕೊಳ್ಳುವಾಗ ತೆರಿಗೆಯ ಗೊಡವೆಯೇ ಇರುವುದಿಲ್ಲ. ಮಧ್ಯಮ ವರ್ಗದವರಷ್ಟೇ ಏಕೆ, ಕಡುಬಡವರು ಕೊಳ್ಳುವ ಸಣ್ಣ ವಸ್ತು ಕೂಡ ಇದರಡಿಯಲ್ಲಿ ಅಗ್ಗವಾಗಿ ಅವರ ಮೊಗದಲ್ಲಿ ನಗು ತರಲಿದೆ.

ಟ್ರಂಪ್‌ಗೆ ಹೆದರಿ ಸುಧಾರಣೆ ತಂದಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್‌ ಭಾರತದ ಮೇಲೆ ಹೇರಿರುವ ತೆರಿಗೆಗೆ ಪ್ರತಿಯಾಗಿ ಜಿಎಸ್‌ಟಿ ಸುಧಾರಣೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ತೆರಿಗೆ ಒತ್ತಡಕ್ಕೆ ಮಣಿದು ಅಥವಾ ಜಾಗತಿಕ ಆರ್ಥಿಕತೆಯ ಪರಿಣಾಮದಿಂದ ಮಾಡಿದ್ದಲ್ಲ. ಜನರ ಒಳಿತಿಗಾಗಿ ಮತ್ತು ಹಣದುಬ್ಬರ ನಿಯಂತ್ರಣ ಇದರ ಉದ್ದೇಶ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ.

ಇದರಿಂದ ರಾಜ್ಯಗಳ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ವಿಪಕ್ಷಗಳು ಕಳವಳ ವ್ಯಕ್ತಪಡಿಸಿದ್ದವು. ಆದರೆ ಹಾಗಾಗದು. ಜತೆಗೆ ಅದನ್ನು ಆದಾಯ ನಷ್ಟ ಎಂದು ಕರೆಯುವುದೂ ತಪ್ಪು. ಜನರ ಆರ್ಥಿಕ ಬಲವರ್ಧನೆಗಾಗಿ ಇದನ್ನು ಮಾಡಿದ್ದೇವೆ. ಅವರ ಖರೀದಿಸುವ ಶಕ್ತಿ ವೃದ್ಧಿಯಿಂದ ಕೊನೆಗೆ ಲಾಭವಾಗುವುದು ಸರ್ಕಾರಕ್ಕೇ.

 ಮೋದಿ 8 ತಿಂಗಳ ಹಿಂದೆ ಹೇಳಿದ್ರು:

ಜಿಎಸ್‌ಟಿ ಸುಧಾರಣೆ ಕೆಲಸ ನಿನ್ನೆ-ಮೊನ್ನೆ ಶುರುವಾಗಿದ್ದಲ್ಲ. 8 ತಿಂಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಕರೆದು, ‘ಜಿಎಸ್‌ಟಿಗೆ ಬದಲಾವಣೆ ತರುವ ನಿಟ್ಟಿನಲ್ಲಿ ಏನಾದರೂ ಮಾಡಿ. ಅದರ ಸುಧಾರಣೆಯು ಜಾರಿ ಮತ್ತು ಅನುಸರಣೆಗೆ ಸುಲಭವಾಗಿರಲಿ’ ಎಂದು ಹೇಳಿದ್ದರು. ಫೆ.1ರಂದು ಬಜೆಟ್‌ ಮಂಡಿಸಿ ಮುಗಿಯುತ್ತಿದ್ದಂತೆ ಜಿಎಸ್‌ಟಿ ಕೆಲಸಕ್ಕೆ ಕುಳಿತುಬಿಟ್ಟೆ. ಕೇವಲ ಆದಾಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡದೆ, ಜನಸಾಮಾನ್ಯರ ದೃಷ್ಟಿಯಿಂದ ವಸ್ತುಗಳ ವರ್ಗೀಕರಣ ಮಾಡಿದೆ. ಇದನ್ನು ಮೇನಲ್ಲಿ ಪ್ರಧಾನಿಯವರ ಎದುರು ಪ್ರಸ್ತುತಪಡಿಸಲಾಯಿತು. ಇಡೀ ಪ್ರಕ್ರಿಯೆ ಒಂದು ಪರೀಕ್ಷೆ ಬರೆದಂತಿತ್ತು. ನನಗೆ ಯಾವ ರ್‍ಯಾಂಗ್‌ ಸಿಗುತ್ತದೋ ಗೊತ್ತಿಲ್ಲ, ಆದರೆ ಈ ಕೆಲಸದಿಂದ ನನಗೆ ತೃಪ್ತಿಯಿದೆ. 

ಟೀಕಿಸುವ ಮುನ್ನ ಯೋಚಿಸಿ:

‘2017ರಲ್ಲಿ ಉದ್ದೇಶಪೂರ್ವಕವಾಗಿ ವಸ್ತುಗಳ ದರ ಅಧಿಕವಾಗುವಂತೆ ಜಿಎಸ್‌ಟಿ ಜಾರಿಗೆ ತಂದು, ಈಗ ಅದನ್ನು ಇಳಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಆದರೆ, ಆಗ ಇದ್ದ 4 ಸ್ತರಗಳಲ್ಲಿ ವಸ್ತುಗಳನ್ನು ಅವು ಒಳಪಡಬಹುದಾದ ಹತ್ತಿರದ ಸ್ತರಕ್ಕೆ ಹೊಂದುಸುವುದು ಅನಿವಾರ್ಯವಾಗಿತ್ತು. ಈ ಪ್ರಕ್ರಿಯೆಯಲ್ಲಿ ಶೇ.7ರಷ್ಟು ತೆರಿಗೆಗೆ ಒಳಪಡಬೇಕಾಗಿದ್ದ ಸರಕುಗಳು ಶೇ.5ರ ಸ್ತರಕ್ಕೆ ಹೋದರೆ, ಶೇ.10ರಷ್ಟು ತೆರಿಗೆಯಿದ್ದವುಗಳು ಶೇ.12ಕ್ಕೆ ಹೋದವು. ಕಳೆದ 8 ವರ್ಷದಲ್ಲಿ ಇದರಿಂದಾದ ಸಮಸ್ಯೆಗಳ ಅರಿವು ನಮಗಿದೆ. ಹಾಗಾಗಿ ಸಾಧ್ಯವಾದಷ್ಟು ಬೆಲೆ ಇಳಿಕೆ ಮಾಡಿದ್ದೇವೆ. ಟೀಕೆ ಮಾಡುವುದಕ್ಕೆ ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು. 

ಇಲ್ಲಿಗೇ ನಿಂತಿಲ್ಲ:

7 ವರ್ಷಗಳ ಹಿಂದೆ ಜಿಎಸ್‌ಟಿ ಜಾರಿಯಾದಾಗ, ಎಲ್ಲಾ ವಸ್ತುಗಳನ್ನು ಒಂದು ವ್ಯವಸ್ಥೆಯ ಅಡಿ ತರುವ ಉದ್ದೇಶವಿತ್ತು. ಈಗ ಎರಡನೆ ಹಂತದಲ್ಲಿ ಸರಳೀಕರಣ ಗುರಿಯಾಗಿತ್ತು. ಇದರ ಕೆಲಸ ಇಲ್ಲಿಗೇ ನಿಲ್ಲುವುದಿಲ್ಲ. ಕೆಲ ವರ್ಷಗಳ ಬಳಿಕ 3ನೇ ಹಂತದಲ್ಲಿ ಇನ್ನೂ ಏನಾದರೂ ಬದಲಾವಣೆ ಬರಬಹುದು.

Read more Articles on