ಜಿಎಸ್‌ಟಿ ಹೊಸ ಜಮಾನದಲ್ಲಿ ಸರ್ವರಿಗೂ ಲಾಭ - ಜನಸಾಮಾನ್ಯರಿಗೆ ಉಳಿತಾಯ

| N/A | Published : Sep 06 2025, 10:24 AM IST

Kannada actress Ranya rao gold smuggling case Union minister pralhad joshi reacts

ಸಾರಾಂಶ

ಜನಸಾಮಾನ್ಯರಿಗೆ ಉಳಿತಾಯ । ಉದ್ಯಮ- ಉತ್ಪನ್ನ ವಹಿವಾಟು ಹೆಚ್ಚಳ । ಪ್ರತಿ ಕುಟುಂಬದ ವೆಚ್ಚದಲ್ಲಿ 4% ಮಿಗತೆ

ಜೀವನ ಭದ್ರತೆಯ ವಿಮೆ ಸೇರಿದಂತೆ ದಿನೋಪಯೋಗಿ ಶಾಂಪೂ, ಸಾಬೂನು, ವಾಷಿಂಗ್ ಪೌಡರ್ ಹೀಗೆ ಸಾಕಷ್ಟು ವಸ್ತುಗಳು ಶೂನ್ಯ ಮತ್ತು ಅತ್ಯಂತ ಅಗ್ಗದ ಶೇ.5ರ ಕರ ವ್ಯಾಪ್ತಿಗೆ ಒಳಪಟ್ಟಿವೆ. ಈ ಮೂಲಕ ಸಮಸ್ತ ನಾಗರಿಕರಿಗೂ ಉಳಿತಾಯ-ಆದಾಯ ಹಾಗೂ ಖರೀದಿಯನ್ನು ಸುಗಮಗೊಳಿಸಿ ಜೀವನ ಮಟ್ಟ ಉತ್ತಮಗೊಳಿಸುವಲ್ಲಿ ಮುಂದಡಿ ಇಟ್ಟಿದೆ ಮೋದಿ ಸರ್ಕಾರ.

-ಪ್ರಲ್ಹಾದ ಜೋಶಿ, ಸಚಿವರು, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರ.

 ಭಾರತದ ಅರ್ಥ ವ್ಯವಸ್ಥೆಗೆ ಸುಭದ್ರ ಬುನಾದಿ ಹಾಕಿಕೊಟ್ಟ ಜಿಎಸ್‌ಟಿ ಇದೀಗ ಒಂಭತ್ತನೇ ಹಣಕಾಸು ವರ್ಷ ಪ್ರವೇಶಿಸಿದೆ. ಭಾರತ ವಿಶ್ವದ 3ನೇ ಬಲಿಷ್ಠ ಆರ್ಥಿಕತೆಯ ಹೊಸ್ತಿಲಲ್ಲಿರುವಾಗ ‘ಸರ್ವೇ ಜನಾಃ ಸುಖಿನೋ ಭವಂತು, ಸರ್ವೇ ಸಂತು ನಿರಾಮಯಾಃʼ ಎನ್ನುವುದಕ್ಕೆ ಅನ್ವರ್ಥಕವಾಗಿ ಹೊಸ ಸ್ವರೂಪ ಪಡೆದುಕೊಂಡಿದೆ. ನಾಡ ಹಬ್ಬ ‘ನವರಾತ್ರಿʼಗೆ ನರೇಂದ್ರ ಮೋದಿಯವರು ‘ಜನೋಪಯೋಗಿ ಜಿಎಸ್‌ಟಿ-2ʼಯನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ಜನರ ಕಲ್ಯಾಣಕ್ಕಾಗಿ ‘ಸುಲಭ ಜೀವನ–ಸುಖೀ ಜೀವನʼ ಧ್ಯೇಯಕ್ಕೆ ಬದ್ಧವಾದ ಕಾರ್ಯ ಯೋಜನೆಗಳೊಂದಿಗೆ ಹೆಜ್ಜೆ ಹಾಕುತ್ತಿದೆ. ‘ಆಯುಷ್ಮಾನ್ ಭಾರತ್ʼ ಯೋಜನೆ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ, ‘ಜಲ್ ಜೀವನ್ ಮಿಷನ್ʼ ಮೂಲಕ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು, ‘ಪ್ರಧಾನಮಂತ್ರಿ ಆವಾಸ್ʼ ಯೋಜನೆ ಮೂಲಕ ಕೋಟ್ಯಂತರ ಬಡ ಕುಟುಂಬಗಳಿಗೆ ಮನೆ ಮತ್ತು ಇದೀಗ ‘NEXT GEN GST’ ಮೂಲಕ ಆರ್ಥಿಕ ಸಮಾನತೆ ಕಲ್ಪಿಸಿದ ಜನಪರ ಸರ್ಕಾರವಾಗಿದೆ.

ಎನ್‌ಡಿಎ ಮೂರನೇ ಅವಧಿ ಆಡಳಿತದಲ್ಲೂ ಜನಸಾಮಾನ್ಯರ ಜೀವನಮಟ್ಟ ಸುಲಭಗೊಳಿಸುವ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಜನಹಿತದ ‘NEXT GEN GST’ಯೇ ಇದಕ್ಕೆ ಸಾಕ್ಷಿ. ಭವಿಷ್ಯದ ಪೀಳಿಗೆಗೆ ವರದಾನ ಎನ್ನುವಂತೆ ಸರಳ-ಸುಲಭ ‘ಜಿಎಸ್‌ಟಿ-2ʼ ತೆರಿಗೆ ವ್ಯವಸ್ಥೆಯನ್ನು ಸಾಕಾರಗೊಳಿಸಲು ಶ್ರೀಕಾರ ಹಾಡಿದೆ. ದಿನ ಬಳಕೆಯ ಶೇ.99ರಷ್ಟು ವಸ್ತುಗಳನ್ನು ಶೂನ್ಯ ಮತ್ತು ಶೇ.5ರ ತೆರಿಗೆ ದರ ವ್ಯಾಪ್ತಿಗೆ ತರಲಾಗಿದೆ. ಜೀವನ ಭದ್ರತೆಯ ವಿಮೆ ಸೇರಿದಂತೆ ದಿನೋಪಯೋಗಿ ಶಾಂಪೂ, ಸಾಬೂನು, ವಾಷಿಂಗ್ ಪೌಡರ್ ಹೀಗೆ ಸಾಕಷ್ಟು ವಸ್ತುಗಳು ಶೂನ್ಯ ಮತ್ತು ಅತ್ಯಂತ ಅಗ್ಗದ ಶೇ.5ರ ಕರ ವ್ಯಾಪ್ತಿಗೆ ಒಳಪಟ್ಟಿವೆ. ಈ ಮೂಲಕ ಸಮಸ್ತ ನಾಗರಿಕರಿಗೂ ಉಳಿತಾಯ-ಆದಾಯ ಹಾಗೂ ಖರೀದಿಯನ್ನು ಸುಗಮಗೊಳಿಸಿ ಜೀವನ ಮಟ್ಟ ಉತ್ತಮಗೊಳಿಸುವಲ್ಲಿ ಮುಂದಡಿ ಇಟ್ಟಿದೆ ಮೋದಿ ಸರ್ಕಾರ.

ಜಿಎಸ್‌ಟಿಯಿಂದ ಭಾರಿ ಕೊಡುಗೆ

‘ಒಂದು ರಾಷ್ಟ್ರ-ಒಂದು ತೆರಿಗೆʼ ಪರಿಕಲ್ಪನೆಯಲ್ಲಿ 2017ರ ಜುಲೈ 1ರಿಂದ ಜಾರಿಗೊಂಡ ಜಿಎಸ್‌ಟಿ ದೇಶದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಆರ್ಥಿಕ ತಳಮಟ್ಟದಲ್ಲಿದ್ದ, ದುರ್ಬಲ ಐದು (Fragile Five) ರಾಷ್ಟ್ರಗಳಲ್ಲಿ ಒಂದು ಎಂದು ಕರೆಯಲ್ಪಡುತ್ತಿದ್ದ ಭಾರತಕ್ಕೆ ಸಕಾಲಿಕವಾಗಿ ಅರ್ಥ ಚೈತನ್ಯ ತುಂಬಿ ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ನಿರೂಪಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ಜಿಎಸ್‌ಟಿ ನೀಡಿತ್ತು. ಇದೀಗ ಮತ್ತೊಂದು ಹಂತದ ಮೇಲ್ಪಂಕ್ತಿಗೇರುವ ಗುರಿಯೊಂದಿಗೆ ‘NEXT GEN GST’ ರೂಪಾಂತರ ಆರ್ಥಿಕ ಅಲೆ ಎಬ್ಬಿಸಲಿದೆ.

‘NEXT GEN GST’ ಸುಧಾರಣೆ ತೆರಿಗೆ ದರದ ಬದಲಾವಣೆ ಮಾತ್ರವಲ್ಲ; ಪ್ರತಿಯೊಬ್ಬರ ಜೀವನಮಟ್ಟ ಸುಧಾರಿಸುವ, ಉಳಿತಾಯ ವೃದ್ಧಿಸುವ, ಆರ್ಥಿಕತೆ ಬಲಪಡಿಸುವ ಒಂದು ಸಮಗ್ರ ನೋಟ. ಬಡವರು, ಯುವಕರು, ರೈತರು, ಮಹಿಳೆಯರು ಮತ್ತು ಮಧ್ಯಮ ವರ್ಗ ಹೀಗೆ ಎಲ್ಲರಿಗೂ ಲಾಭ ತೋರುವ ‘ಸರ್ವ ಸಮಾನತೆʼಯ ಅರ್ಥ ವಿನ್ಯಾಸದ ಪ್ರತೀಕವಾಗಿದೆ. ಭಾರತ-ಭಾರತೀಯರೆಲ್ಲರ ಪಾಲಿಗೆ ಒಂದು ರೀತಿ ‘ಅಕ್ಷಯ ಪಾತ್ರೆʼಯಾಗುವ ಆಶಾಭಾವನೆ ಹುಟ್ಟು ಹಾಕಿದೆ.

ಹೊಸ ಜಿಎಸ್‌ಟಿಯಿಂದ ಏನು ಲಾಭ?

ಭಾರತವನ್ನು ನಂ.1 ಆಗಿಸುವ ಮುನ್ನುಡಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಸ್ತರದ ಜಿಎಸ್‌ಟಿ-2 ಪರಿಚಯಿಸಿದ್ದಾರೆ. ಪ್ರಸ್ತುತ ಶೇ.5, ಶೇ.12, ಶೇ.18 ಮತ್ತು ಶೇ.28ರ ಚತುಸ್ತರದಲ್ಲಿದ್ದ ಜಿಎಸ್‌ಟಿಯನ್ನು ‘ಶೇ.5ʼ ಮತ್ತು ‘ಶೇ.18ʼರ ದ್ವಿಸ್ತರಕ್ಕಿಳಿಸಿ ಜನೋಪಯೋಗಿಯತ್ತ ಕೊಂಡೊಯ್ಯುವಲ್ಲಿ ಮಹತ್ತರ ಹೆಜ್ಜೆಯಿರಿಸಿದ್ದಾರೆ. ಹೀಗಾಗಿ ಭವಿಷ್ಯದಲ್ಲಿನ್ನು ‘NEXT GEN GST’ ಸರ್ಕಾರ ಮತ್ತು ಜನಸಾಮಾನ್ಯರಿಗೆ ‘ಆದಾಯ-ಉಳಿತಾಯʼದ ಹೊಸ ಸರಕಾಗಲಿದೆ ಎಂಬುದು ಸಂಶಯಾತೀತ.

ಶೇ.99ಕ್ಕೂ ಅಧಿಕ ವಸ್ತುಗಳ ಬೆಲೆ ಇಳಿಕೆ

ದ್ವಿಸ್ತರದ ಜಿಎಸ್‌ಟಿ ಜಾರಿಯಿಂದ ಪ್ರತಿ ಉತ್ಪನ್ನಗಳ ಬೆಲೆಯೂ ಇಳಿಕೆಯಾಗಲಿದೆ. ಪರಿಷ್ಕೃತ ಜಿಎಸ್ಟಿಯಲ್ಲಿ ಶೇ.12ರ ಸ್ತರದಲ್ಲಿದ್ದ ಶೇ.99ರಷ್ಟು ವಸ್ತುಗಳು ಶೇ.5ರ ವ್ಯಾಪ್ತಿಗೆ ಮತ್ತು ಶೇ.28ರ ಸ್ತರದಲ್ಲಿದ್ದ ಶೇ.90ರಷ್ಟು ಉತ್ಪನ್ನಗಳು ಶೇ.18ರ ವ್ಯಾಪ್ತಿಗೆ ಬರುವುದರಿಂದ ಶೇ.99ಷ್ಟು ದಿನಬಳಕೆ, ಅಗತ್ಯ ವಸ್ತುಗಳು ಶೇ.5ರ ಅಥವಾ ಶೂನ್ಯ ಸ್ತರದೊಳಗೆ ಬರಲಿವೆ. ಇದರಿಂದ ಜನ ಸಾಮಾನ್ಯರಿಗೆ ಉಳಿತಾಯ ಮತ್ತು ಉತ್ಪನ್ನ-ಉದ್ಯಮ, ವಹಿವಾಟು ಹೆಚ್ಚಿಕೆಯಾಗುವ ಎಲ್ಲ ಸಾಧ್ಯತೆ ಇದೀಗ ಸೃಷ್ಟಿ ಆಗಿದೆ.

ಶೂನ್ಯ ತೆರಿಗೆ ದರದಲ್ಲಿ ಆರೋಗ್ಯ-ಆಹಾರೋತ್ಪನ್ನ

ಹೊಸ ಜಿಎಸ್‌ಟಿ-2 ಜನಸಾಮಾನ್ಯರ ಜೀವನದ ಮೇಲೆ ಸಕಾರಾತ್ಮಕವಾಗಿ ನೇರ ಪರಿಣಾಮ ಬೀರುತ್ತದೆ. ಹಾಲು, ಹಣ್ಣು, ತರಕಾರಿ, ಬ್ರೆಡ್, ಗೋಧಿ ಹಿಟ್ಟು, ಖಾದ್ಯ ತೈಲ, ಸಕ್ಕರೆ, ತಿಂಡಿ-ತಿನಿಸುಗಳು ಅನೇಕಾನೇಕ ಆಹಾರ ಪದಾರ್ಥ-ಆಹಾರ ಧಾನ್ಯಗಳೆಲ್ಲ ಶೂನ್ಯ ತೆರಿಗೆ ದರಕ್ಕೆ ಒಳಪಡಲಿವೆ. 33 ಜೀವ ರಕ್ಷಕ ಔಷಧಗಳಿಗೂ ಶೂನ್ಯ ತೆರಿಗೆ. ಹೀಗೆ ಆರೋಗ್ಯ-ಆಹಾರೋತ್ಪನ್ನಗಳ ಬೆಲೆ ಅಗ್ಗವಾಗಿ ಪ್ರತಿ ಕುಟುಂಬಗಳ ಮಾಸಿಕ ವೆಚ್ಚದಲ್ಲಿ ಕನಿಷ್ಠ ನಾಲ್ಕು ಪ್ರತಿಶತದಷ್ಟು ಉಳಿತಾಯವಾಗಲಿದೆ. ಇದು ಕಡುಬಡವರ ಏಳಿಗೆಗೆ ಹೊಸ ಸ್ಪರ್ಶ ನೀಡುವತ್ತ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಹೆಜ್ಜೆಯಾಗಿದೆ.

*ನವೀಕೃತ ಇಂಧನ-ಹಸಿರು ಶಕ್ತಿಗೆ ಉತ್ತೇಜನ

‘ಜಿಎಸ್‌ಟಿ-2ʼ ಪರಿಸರ ಸ್ನೇಹಿ ಯೋಜನೆಗಳಿಗೆ ಪೂರಕವಾಗಿದೆ. ವಿದ್ಯುತ್ ಚಾಲಿತ ವಾಹನಗಳನ್ನು ಶೇ.28ರಿಂದ ಶೇ.12ರ ಕರ ವ್ಯಾಪ್ತಿಗೆ ತಂದಿದ್ದು, ಈವರೆಗೆ ದುಬಾರಿ ದರದಲ್ಲಿದ್ದ ಇವಿಎಂ ಬೈಕ್, ಆಟೋ, ಕಾರುಗಳು, ಅವುಗಳ ಬಿಡಿ ಭಾಗಗಳ ಮೌಲ್ಯ ಅಗ್ಗವಾಗಲಿದೆ. ಮನೆ ಮನೆಗಳಲ್ಲಿ ಸೌರ ಶಕ್ತಿಯೂ ಬೆಲೆ ಇಳಿಕೆಯ ಬೆಳಕು ಬೀರಲಿದೆ. ವಿಶ್ವದ ಅತಿದೊಡ್ಡ ಸೌರಶಕ್ತಿ ಮೇಲ್ಛಾವಣಿ ಯೋಜನೆ ‘ಸೂರ್ಯ ಘರ್ʼ ಪರಿಕರಗಳು ಸಹ ಶೇ.5ರ ತೆರಿಗೆಗೊಳಪಟ್ಟಿದ್ದು, ಅಗ್ಗದ ಬೆಲೆಯಲ್ಲಿ ಪ್ರಖರ ಬೆಳಕು ಚೆಲ್ಲಲಿದೆ. ಭವಿಷ್ಯದಲ್ಲಿ 1 ಕೋಟಿ ಸೌರ ಮೇಲ್ಛಾವಣಿ ಗುರಿ ಮೀರಿಸುವ ಸಾಧನೆಗೆ ಹಾಗೂ 17 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನಾಂದಿಯಾಗಲಿದೆ. ಹಸಿರು ಹೈಡ್ರೋಜನ್ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅತ್ಯುತ್ತಮ ಬೆಂಬಲ ನೀಡುವ ಭಾರತದ ದ್ವಿಸ್ತರದ ಜಿಎಸ್‌ಟಿ ಜಗತ್ತಿನ ಶುದ್ಧ ಇಂಧನ ಬೇಡಿಕೆಗೇ ಸ್ವಚ್ಛಂದದ ಬೆಳಕು ತೋರಲಿದೆ.

*ಅನ್ನದಾತರಿಗೂ ಶೂನ್ಯ ತೆರಿಗೆಯ ವರದಾನ

ವಿಶ್ವದಲ್ಲೇ ಅತಿ ದೊಡ್ಡ ಕೃಷಿ ಭೂಮಿ ಮತ್ತು ನೀರಾವರಿ ಪ್ರದೇಶ ಹೊಂದಿರುವ ನಮ್ಮೀ ಕೃಷಿ ಪ್ರಧಾನ ದೇಶದಲ್ಲಿ ಜಿಎಸ್‌ಟಿ-2 ಕೃಷಿ ವಲಯದ ಅಭ್ಯುದಯ, ಕೃಷಿ ವೈವಿಧ್ಯೀಕರಣಕ್ಕೆ ಮಹತ್ತರ ಪಾತ್ರ ವಹಿಸಲಿದೆ. ಸೌರ ಪಂಪ್ ಸೆಟ್‌ಗಳು, ಸೋಲಾರ್ ವಿದ್ಯುತ್ ಘಟಕದ ಪರಿಕರಗಳು ಶೇ.5ರ ತೆರಿಗೆ ದರಕ್ಕೆ ತಗ್ಗಿ ನೇಗಿಲಯೋಗಿಗಳಿಗೆ ವರದಾನವಾಗಿದೆ. ಕೃಷಿ ಮೂಲಸೌಕರ್ಯಗಳ ವೆಚ್ಚ ಕಡಿಮೆಯಾಗಿ ಉತ್ಪನ್ನ ಮತ್ತು ಆದಾಯ ವೃದ್ಧಿಸಲಿದೆ. ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣ, ಗೊಬ್ಬರ, ಬೀಜ ಮತ್ತು ಔಷಧಿಗಳೆಲ್ಲ ಅಗ್ಗವಾಗಿ ರೈತರ ಹೆಗಲ ಮೇಲಿದ್ದ ಬೆಲೆ ಏರಿಕೆ ಭಾರ ಇಳಿದಿದೆ. ಅತ್ಯಂತ ಕಡಿಮೆ ದರದಲ್ಲಿ ಕೃಷಿ ಸಾಮಗ್ರಿಗಳು ಕೈಗೆಟುಕಿ ಅನ್ನದಾತರ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ.

*ಯುವ ಕೈಗಳಿಗೆ ಉದ್ಯೋಗಾವಕಾಶ

ದೇಶದ ಜನಸಂಖ್ಯೆಯಲ್ಲಿ ಶೇ.31ಕ್ಕೂ ಅಧಿಕವಿರುವ ಯುವ ಕೈಗಳಿಗೆ ಉದ್ಯೋಗ ಭಾಗ್ಯ ಸೃಷ್ಟಿಯಾಗಲಿದೆ. ನವೋದ್ಯಮಗಳು, ಜವಳಿ, ಕೃಷಿ, ಎಲೆಕ್ಟ್ರಾನಿಕ್ಸ್, ಶಿಕ್ಷಣ, ಮಡಿಕಲ್, ಆಟೋಮೊಬೈಲ್, ಹೀಗೆ ಸರ್ವ ರಂಗಗಳಲ್ಲೂ ಹೊಸ ಉದ್ಯಮಗಳ ಸ್ಥಾಪನೆ ಹೆಚ್ಚಿ ಅಧಿಕ ಉದ್ಯೋಗಾವಕಾಶ ತೆರೆಯಲಿದೆ. ಸದ್ಯಕ್ಕೆ 65 ಕೋಟಿ ಸನಿಹದಲ್ಲಿರುವ ಉದ್ಯೋಗಿಗಳ ಸಂಖ್ಯೆ ಮತ್ತಷ್ಟು ಅಧಿಕಗೊಳ್ಳುತ್ತದೆ. ಎಂಎಸ್‌ಎಂಇಗಳ ಸಂಖ್ಯೆಯೂ ದ್ವಿಗುಣಗೊಳ್ಳಲಿದ್ದು, ಯುವೋದ್ಯಮಿಗಳ ಉದ್ಯಮಾಕಾಂಕ್ಷೆಗೆ ಉತ್ತೇಜಕವಾಗಿದೆ. ಸ್ಟಾರ್ಟ್ಅಪ್‌ಗಳಿಗೆ ಹೊಸ ಬಾಗಿಲು ತೆರೆಯುತ್ತಿರುವ ‘ನ್ಯೂ ಇಂಡಿಯಾʼ ಯುವಕರಿಗೆ ಭವಿಷ್ಯದ ಭರವಸೆ ಮೂಡಿಸುತ್ತಿದೆ.

*ಶೇ.48 ಮಹಿಳೆಯರಿಗೆ ದ್ವಿಸ್ತರದ ಜಿಎಸ್‌ಟಿ ಲಾಭ

ಭಾರತದ ಜನಸಂಖ್ಯೆಯಲ್ಲಿ ಶೇ.48ರಷ್ಟಿರುವ ಮಹಿಳೆಯರು ಈ ದ್ವಿಸ್ಥರದ ಜಿಎಸ್‌ಟಿ ಲಾಭದಲ್ಲಿ ಪಾಲುದಾರರು ಎನ್ನುವುದೇ ವಿಶೇಷ. ಕುಟುಂಬ ನಿರ್ವಹಣೆ ಮತ್ತು ಆಯ-ವ್ಯಯದಲ್ಲಿ ಮಹತ್ತರ ಪಾತ್ರಧಾರಿಗಳಾದ ಸ್ತ್ರೀಯರಿಗೇ ಹೆಚ್ಚು ಕೊಡುಗೆ ಕಲ್ಪಿಸಿದೆ. ಅಡುಗೆ ಸಾಮಾನು, ಬಟ್ಟೆ, ದಿನಬಳಕೆ ಅಗತ್ಯ ವಸ್ತುಗಳ ಮೇಲಿನ ಕರ ಭಾರ ಹಗುರವಾಗಲಿದೆ.

ಇನ್ನೊಂದೆಡೆ ಸ್ವ-ಸಹಾಯ ಸಂಘಗಳ ಮೂಲಕ ಸಣ್ಣ ಉದ್ಯಮ ನಡೆಸುತ್ತಿರುವ ಲಕ್ಷಾಂತರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬಲ ತುಂಬಲಿದೆ. ಭಾರತೀಯ ಉದ್ಯಮಗಳಲ್ಲಿ ಇಂದು ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಜಿಎಸ್‌ಟಿ ವ್ಯಾಪ್ತಿಗೊಳಪಟ್ಟು ಗಣನೀಯ ಪ್ರಮಾಣದ ಆದಾಯ ಗಳಿಸುತ್ತಿದ್ದಾರೆ. ಜವಳಿ, ಆಭರಣ, ಬ್ಯೂಟಿ ಪಾರ್ಲರ್, ಗಾರ್ಮೆಂಟ್ಸ್, ಮೆಡಿಕಲ್, ಆಹಾರೋತ್ಪನ್ನ ಹಾಗೂ ಕೃಷಿ ಸಂಬಂಧಿತ ಉದ್ದಿಮೆಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ನಾರಿ ಶಕ್ತಿಗೆ ಜಿಎಸ್‌ಟಿ-2 ಪ್ರೇರಕ ಶಕ್ತಿಯಾಗಿದೆ.

ಎಸ್‌ಬಿಐ ವರದಿ ಪ್ರಕಾರ ದೇಶದ ಒಟ್ಟು ತೆರಿಗೆದಾರರಲ್ಲಿ ಶೇ.20ಕ್ಕೂ ಅಧಿಕ ಮಹಿಳಾ ಉದ್ಯಮಿಗಳ ಪಾಲಿದೆ. ಪ್ರಸ್ತುತವಾಗಿ ಪ್ರತಿ ಜಿಎಸ್‌ಟಿ ನೋಂದಣಿಯಲ್ಲಿ 1ರಷ್ಟು ಸ್ತ್ರೀಯರಿದ್ದು, ಮಹಿಳಾ ಮಾಲೀಕತ್ವದ ಎಂಎಸ್‌ಎಂಇಗಳ ಸಂಖ್ಯೆಯೂ ಹೆಚ್ಚಿದೆ. ಭವಿಷ್ಯದಲ್ಲಿ ಭಾರತದ ಅರ್ಥ ವ್ಯವಸ್ಥೆಗೆ ಹೊಸ ಭಾಷ್ಯ ಬರೆಯುವ ಈ ಮಹಿಳಾ ಸಮೂಹಕ್ಕೆ ವಿಶಿಷ್ಠ ಕೊಡುಗೆ ಈ ದ್ವಿಸ್ತರದ ಜಿಎಸ್‌ಟಿ.

Read more Articles on