ಯುರೋಪಿಯನ್‌ ಪಾಲಿಗೆ ಭಾರತ ‘ಆಪ್ತಮಿತ್ರ - ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸನ್ನದ್ಧ : ಪ್ರಲ್ಹಾದ ಜೋಶಿ,

| N/A | Published : Mar 04 2025, 09:24 AM IST

Prahlad Joshi
ಯುರೋಪಿಯನ್‌ ಪಾಲಿಗೆ ಭಾರತ ‘ಆಪ್ತಮಿತ್ರ - ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸನ್ನದ್ಧ : ಪ್ರಲ್ಹಾದ ಜೋಶಿ,
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸರಳ ತೆರಿಗೆ ಸಂಗ್ರಹ (ಜಿಎಸ್‌ಟಿ) ಮತ್ತು ವಿವಿಧತೆಯಲ್ಲಿ ಏಕತೆಯ ಪ್ರತೀಕ ಎನ್ನುವಂತೆ 28 ರಾಜ್ಯಗಳೊಂದಿಗೆ ಇರುವ ಆಡಳಿತಾತ್ಮಕ ಸ್ಪಷ್ಟ ನೀತಿ, ನಿಯಮಗಳು ಸದಸ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪ್ರಸ್ತುತದ ಸ್ಥಿತಿಯಲ್ಲಿ ಮಾದರಿ ಎನಿಸಿದೆ.

-ಭಾರತಕ್ಕೆ ಇಯು ಆಯೋಗ ಭೇಟಿ, ಸಹಕಾರದ ಅಭೂತಪೂರ್ವ ಅಧ್ಯಾಯ । ಭಾರತದ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸನ್ನದ್ಧ

-ಪ್ರಲ್ಹಾದ ಜೋಶಿ, 

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು, ಭಾರತ ಸರ್ಕಾರ

ಭಾರತದ ಸರಳ ತೆರಿಗೆ ಸಂಗ್ರಹ (ಜಿಎಸ್‌ಟಿ) ಮತ್ತು ವಿವಿಧತೆಯಲ್ಲಿ ಏಕತೆಯ ಪ್ರತೀಕ ಎನ್ನುವಂತೆ 28 ರಾಜ್ಯಗಳೊಂದಿಗೆ ಇರುವ ಆಡಳಿತಾತ್ಮಕ ಸ್ಪಷ್ಟ ನೀತಿ, ನಿಯಮಗಳು ಸದಸ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪ್ರಸ್ತುತದ ಸ್ಥಿತಿಯಲ್ಲಿ ಮಾದರಿ ಎನಿಸಿದೆ.

ಯುರೋಪಿಯನ್ ಒಕ್ಕೂಟದ (ಇಯು) ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಯೋಗದ ಸದಸ್ಯರ ತಂಡದ ಇತ್ತೀಚಿನ ಭಾರತ ಭೇಟಿ ಒಂದು ಐತಿಹಾಸಿಕ ಘಟನೆ. ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿ ಆಗಿರುವ ಭಾರತ ಯುರೋಪಿಯನ್ನರ ಪಾಲಿಗೆ ‘ಆಪ್ತಮಿತ್ರ’ ಹಾಗೂ ಪ್ರೇರಕ ಶಕ್ತಿಯಾಗಿ ಗೋಚರಿಸಿದೆ. ನಮ್ಮ ಆರ್ಥಿಕ ಸುಸ್ಥಿರತೆ ಯುರೋಪಿಯನ್ ರಾಷ್ಟ್ರಗಳ ಆರ್ಥಿಕ ಚೇತರಿಕೆಗೆ ಹೊಸ ಭರವಸೆ ಮೂಡಿಸಿದೆ.

ಎರಡು ದಿನಗಳ ಭೇಟಿಯಲ್ಲಿ ಇಯು ಆಯೋಗದ 27 ಸದಸ್ಯರಲ್ಲಿ 22 ಮಂದಿ ಭಾಗವಹಿಸಿದ್ದು, ಇದು ಈ ತಂಡದ ಮೊದಲ ಭಾರತ ಭೇಟಿ ಮತ್ತು ಅವರ ಹೊಸ ಅವಧಿಯ (2024ರಲ್ಲಿ ನಡೆದ ಇಯು ಎಲೆಕ್ಷನ್ ನಂತರ) ಮೊದಲ ವಿದೇಶಿ ಪ್ರವಾಸವಾಗಿದೆ. ಇದು ಭಾರತದ ಜಾಗತಿಕ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳುತ್ತದೆ.

ಭಾರತದ ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿರತೆಗೆ ಶಕ್ತಿಯಾಗಿರುವ ಕೃಷಿ, ಎಂಎಸ್‌ಎಂಇ, ನವೀಕೃತ ಇಂಧನ, ಡಿಜಿಟಲ್ ಕ್ರಾಂತಿ, ನೇರ ಮಾರುಕಟ್ಟೆ, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ರಫ್ತು ಹೀಗೆ ಪ್ರಮುಖ ವಲಯಗಳಲ್ಲಿನ ಉತ್ತೇಜನ ಮತ್ತು ಆತ್ಮನಿರ್ಭರತೆ ಯುರೋಪ್ ರಾಷ್ಟ್ರಗಳನ್ನು ಸೆಳೆದಿದೆ. ಭಾರತದ ಸರಳ ತೆರಿಗೆ ಸಂಗ್ರಹ (ಜಿಎಸ್‌ಟಿ) ಮತ್ತು ವಿವಿಧತೆಯಲ್ಲಿ ಏಕತೆಯ ಪ್ರತೀಕ ಎನ್ನುವಂತೆ 28 ರಾಜ್ಯಗಳೊಂದಿಗೆ ಇರುವ ಆಡಳಿತಾತ್ಮಕ ಸ್ಪಷ್ಟ ನೀತಿ, ನಿಯಮಗಳು ಸದಸ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪ್ರಸ್ತುತದ ಸ್ಥಿತಿಯಲ್ಲಿ ಮಾದರಿ ಎನಿಸಿದೆ.

ವಿಶೇಷವಾಗಿ 2025ರ ಅಂತ್ಯದೊಳಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾಡಿಕೊಳ್ಳುವ ಗುರಿ ಹೊಂದಿದ್ದು, ಇದು ಆರ್ಥಿಕತೆಗೆ ಮತ್ತು ಜಾಗತಿಕ ವಹಿವಾಟಿನಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲಪಡಿಸುವ ಸಾಧ್ಯತೆ ತೆರೆದಿಡುತ್ತದೆ.

ಯುರೋಪಿಯನ್ ಒಕ್ಕೂಟದ ಈ ಭೇಟಿಯನ್ನು ಪ್ರಧಾನಿ ಮೋದಿಯವರು ‘ಅಪೂರ್ವ’ ಎಂದು ವರ್ಣಿಸಿದ್ದಾರೆ. ಇದು ಭಾರತ-ಇಯು ಸಂಬಂಧಕ್ಕೆ ಹೊಸ ಶಕ್ತಿ, ಉತ್ಸಾಹ ಮತ್ತು ಉತ್ಕರ್ಷತೆಯನ್ನು ತುಂಬಿದೆ ಎಂದು ಹೇಳಿದ್ದಾರೆ. ಈ ಭೇಟಿ ವೇಳೆ ಸುಮಾರು 20 ಸಚಿವ ಮಟ್ಟದ ಸಭೆಗಳು ನಡೆದಿದೆ. ಇದು ಭಾರತದ ಜೊತೆಗಿನ ಯುರೋಪಿಯನ್ ಒಕ್ಕೂಟದ ಸಹಭಾಗಿತ್ವವನ್ನು ಮೌಲ್ಯೀಕರಿಸುತ್ತದೆ.

ಇಯು ನಿಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಭಾರತದ ಯುಪಿಐ ಪಾವತಿ ವ್ಯವಸ್ಥೆಯನ್ನು ಪ್ರತ್ಯಕ್ಷವಾಗಿ ನೋಡಿ, ‘ವೋ’ (ಬ್ರೇವೊ) ಎಂದು ಪ್ರಶಂಸಿಸಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸುವ ಗುರಿಯೊಂದಿಗೆ, ಭಾರತೀಯ ನೌಕಾಪಡೆ ಮತ್ತು ಇಯು ಸಾಗರ ಭದ್ರತಾ ಘಟಕಗಳ ನಡುವೆ ಜಂಟಿ ಕಾರ್ಯಾಚರಣೆ ವಿಸ್ತರಿಸಲು ಚರ್ಚೆ ನಡೆದಿದೆ. ಇಯು ಜೊತೆಗಿನ ಈ ಪಾಲುದಾರಿಕೆ ಭವಿಷ್ಯದಲ್ಲಿ ನಮ್ಮ ರಾಷ್ಟ್ರದ ಪ್ರಗತಿಗೂ ದಿಕ್ಸೂಚಿ.

ನಮ್ಮ ವಿಮಾನಯಾನ, ಮೆಟ್ರೋ-ವಂದೇ ಭಾರತ್‌ನಂಥ ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ಕೃಷಿಯಲ್ಲಿನ ಬೆಂಬಲ ಬೆಲೆ, ಫಸಲ್ ಬಿಮಾ, ಕಿಸಾನ್ ಸಮ್ಮಾನ್, ಆಹಾರೋತ್ಪಾದನೆ, ನ್ಯಾನೋ ರಸಗೊಬ್ಬರ, ನೈಸರ್ಗಿಕ ಕೃಷಿ ಉತ್ತೇಜನ, ಸೌರ ವಿದ್ಯುತ್‌ನಂಥ ಇಂಧನ ಸ್ವಾವಲಂಬನೆ ಹಾಗೂ ಕೈಗಾರಿಕೆ, ಉದ್ಯಮ ಉತ್ತೇಜಿತ ಯೋಜನೆಗಳು ಸೇರಿ ದೇಶದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿರುವ ಪ್ರಮುಖ ಯೋಜನೆಗಳು ಯುರೋಪ್ ಒಕ್ಕೂಟವನ್ನು ಆಕರ್ಷಿಸಿದೆ.

ಆಯೋಗದಿಂದ ಸಕಾರಾತ್ಮಕ ಚರ್ಚೆ

ಜಗತ್ತಿನ ಅತ್ಯಂತ ಸುರಕ್ಷಿತ ಮಾರುಕಟ್ಟೆಗಳಲ್ಲಿ ಒಂದಾದ ಭಾರತದೊಂದಿಗೆ ಯುರೋಪಿಯನ್ ರಾಷ್ಟ್ರಗಳು ಮುಕ್ತ ವ್ಯಾಪಾರ ವಹಿವಾಟು ಒಪ್ಪಂದಕ್ಕೆ ಸನ್ನದ್ಧವಾಗಿವೆ. ಆಯೋಗದ ಅಧ್ಯಕ್ಷೆ ಲೇಯನ್ ಮತ್ತು ಸಹ ಸದಸ್ಯರ ಜತೆಗಿನ ಮೊದಲ ಹಂತದ ಮಾತುಕತೆ ಸಕಾರಾತ್ಮಕವಾಗಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ತೀರ್ಮಾನಿಸಿದೆ.

ಭಾರತದಲ್ಲಿವೆ ಅತ್ಯಧಿಕ ಯುರೋಪ್ ಕಂಪನಿಗಳು

ಭಾರತದಲ್ಲಿ ಯುರೋಪ್ ದೇಶಗಳ 6000ಕ್ಕೂ ಅಧಿಕ ಕಂಪನಿಗಳಿದ್ದು, 2023ರಲ್ಲಿ 130 ಬಿಲಿಯನ್ ಡಾಲರ್ ಮೌಲ್ಯದ ವ್ಯಾಪಾರ ವಹಿವಾಟು ನಡೆಸಿದ್ದು, ಇದು ಒಟ್ಟು ಭಾರತೀಯ ವ್ಯಾಪಾರದ ಶೇ.12ಕ್ಕಿಂತ ಹೆಚ್ಚು ಎಂಬುದು ಗಮನಾರ್ಹ. ಕಳೆದೊಂದು ದಶಕದಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿ ಶೇ.90ರಷ್ಟು ಬೆಳವಣಿಗೆ ಸಹ ಕಂಡಿದೆ. ಹೀಗಾಗಿ ಭಾರತಕ್ಕೆ ಯುರೋಪಿಯನ್ನರ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ ಎಂಬ ಹೆಗ್ಗಳಿಕೆಯಿದೆ. ಯುರೋಪ್‌ ದೇಶಗಳು ಹಾಗೂ ಭಾರತದ ನಡುವೆ ವ್ಯಾಪಾರ, ತಂತ್ರಜ್ಞಾನ, ಭದ್ರತೆ, ಮೊಬಿಲಿಟಿಯಂಥ ಕ್ಷೇತ್ರಗಳಲ್ಲಿ ಪರಸ್ಪರ ವ್ಯಾಪಾರೋಪ್ಪಂದ ಬಹುತೇಕ ವರ್ಷಾಂತ್ಯದಲ್ಲಿ ಪೂರ್ಣಗೊಳಿಸುವತ್ತ ಗಮನಹರಿಸಲಾಗಿದೆ.

ಜಾಗತಿಕ ಅನಿಶ್ಚಿತತೆಯ ಈ ಸನ್ನಿವೇಶದಲ್ಲಿ ಭಾರತ ಜಗತ್ತಿಗೇ ವಿಶ್ವಾಸಾರ್ಹ ಆಪ್ತ ಸ್ನೇಹಿತ ಮತ್ತು ದೃಢತೆಯ ಸ್ತಂಭ ಎಂದು ಯುರೋಪ್ ಒಕ್ಕೂಟ ಆಯೋಗದ ಅಧ್ಯಕ್ಷೆ ಲೇಯೆನ್ ಬಣ್ಣಿಸಿರುವುದು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಆಡಳಿತದ ಹಿರಿಮೆ ಹೆಚ್ಚಿಸಿದೆ.

ಭಾರತದ ಸೌರ ಶಕ್ತಿಗೆ ಬೆರಗಾದ ನಿಯೋಗ

ಪ್ರಸ್ತುತ ಶುದ್ಧ ಇಂಧನ ನಿರೀಕ್ಷೆಯಲ್ಲಿರುವ ಯುರೋಪ್ ಭಾರತದ ಸೌರ ಶಕ್ತಿ ಯೋಜನೆಗಳಿಂದ ಬೆರಗಾಗಿದೆ. ಯುರೋಪಿಯನ್ ರಾಷ್ಟ್ರಗಳ ‘ಕ್ಲೀನ್ ಇಂಡಸ್ಟ್ರಿಯಲ್’ಗೆ ಶುದ್ಧ ಇಂಧನದ ಅಗತ್ಯತೆ ಪ್ರತಿಪಾದಿಸಿದ ನಿಯೋಗ, ಭಾರತದ ಸೌರ ಚಾಲಿತ-ಸೌರ ಶಕ್ತಿ ಉತ್ತೇಜಿತ ಯೋಜನೆಗಳಿಗೆ ಮಾರು ಹೋಗಿದೆ.

2030ರ ವೇಳೆಗೆ ಪಳೆಯುಳಿಕೆಯೇತರ ಸಂಪನ್ಮೂಲಗಳಿಂದ ಶೇ.50ರಷ್ಟು ಇಂಧನ ಸಾಮರ್ಥ್ಯ ಸಾಧಿಸಲು ಯೋಜಿಸಿದ ಭಾರತ ಇದಕ್ಕಾಗಿ ಪಿಎಂ ಸೂರ್ಯ ಘರ್, ಪಿಎಂ ಕುಸುಮ್ ಮತ್ತು ಹಸಿರು ಹೈಡ್ರೋಜನ್ ನಂಥ ವಿಶ್ವದಲ್ಲೇ ಅತಿ ದೊಡ್ಡ ಯೋಜನೆಗಳನ್ನು ಕೈಗೊಂಡಿರುವುದು ಯುರೋಪಿಯನ್ ರಾಷ್ಟ್ರಗಳಿಗೂ ಮಾದರಿ ಮಾತ್ರವಲ್ಲ, ಅಚ್ಚುಮೆಚ್ಚಾಗಿ ಕಂಡಿದೆ. ‘ಪಿಎಂ ಸೂರ್ಯ ಘರ್’ 2027ರ ವೇಳೆಗೆ 8 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ 10 ಮಿಲಿಯನ್ ಮನೆಗಳಲ್ಲಿ ಸೌರ ಮೇಲ್ಛಾವಣಿ ಹಾಗೂ ಎಂಟೇ ತಿಂಗಳಲ್ಲಿ ಒಂದು ಮಿಲಿಯನ್ ಸ್ಥಾಪನೆ ಗುರಿ ಸಾಧನೆ ಜತೆಗೆ ‘ಪಿಎಂ ಕುಸುಮ್’ ಮೂಲಕ ಕೃಷಿ ಸೌರೀಕರಣ ಯುರೋಪಿಯನ್ ಆಯೋಗವನ್ನು ಚಕಿತಗೊಳಿಸಿತು.

ಸೌರ ಸಾಧನೆಗೆ ಇಯು ದಿಗ್ಭ್ರಮೆ

ಯುಪಿಎ ಸರ್ಕಾರವಿದ್ದ 2014ರ ಅವಧಿಯಲ್ಲಿ ಭಾರತದ ಸೌರಶಕ್ತಿ ಸಾಮರ್ಥ್ಯ ಕೇವಲ 2.82 ಜಿಡಬ್ಲ್ಯು(ಗಿಗಾ ವ್ಯಾಟ್‌) ಇತ್ತು. ಪ್ರಧಾನಿ ಮೋದಿ ಅವರ ಹತ್ತೇ ವರ್ಷದ ಆಡಳಿತದಲ್ಲಿ ಅದು 100.3 ಜಿಡಬ್ಲ್ಯು ದಾಟಿ ಇದೀಗ 221 ಜಿಡಬ್ಲ್ಯು ತಲುಪಿದೆ. ಅಂದರೆ ಶೇ.3446ರಷ್ಟು ಅಭೂತಪೂರ್ವ ಬೆಳವಣಿಗೆ ಸಾಧಿಸಿದೆ. 1 ಕೋಟಿ ಉದ್ಯೋಗ ಸೃಷ್ಟಿಸಲಿದೆ ಎಂಬುದು ಇಯು ಸದಸ್ಯರಿಗೆ ಅಚ್ಚರಿ ಮೂಡಿಸಿತು.

ದೇಶದಲ್ಲಿ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯ ಸುಮಾರು ಶೇ.200ರಷ್ಟು ಹೆಚ್ಚಾಗಿದೆ. 2014ರ 75.52 ಜಿಡಬ್ಲ್ಯುನಿಂದ ಇಂದು 221 ಜಿಡಬ್ಲ್ಯುಗೆ ತಲುಪಿದೆ. ಪವನ ಶಕ್ತಿ ಸಹ 48.4 ಜಿಡಬ್ಲ್ಯುಗೆ ಬೆಳೆದು ಶೇ.128ರಷ್ಟು ಪ್ರಗತಿ ಸಾಧಿಸಿದೆ. 2013-14 ರಲ್ಲಿ 193.50 ಬಿಲಿಯನ್ ಯೂನಿಟ್ ಇದ್ದ ಒಟ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆ ಸಾಮರ್ಥ್ಯ 2023-24 ರಲ್ಲಿ ದ್ವಿಗುಣಗೊಂಡು 359.89 ಬಿಯು ತಲುಪಿದೆ. 2030ರ ವೇಳೆಗೆ ಭಾರತ ಸ್ವಾವಲಂಬಿ ಶಕ್ತಿ ಕೇಂದ್ರವಾಗುತ್ತದೆ ಎಂಬುದು ಯುರೋಪಿಯನ್ನರ ಕಣ್ಣರಳಿಸಿತು.

ಮನೆ ಮನೆ, ಕೃಷಿ ಭೂಮಿಗೂ ಸೌರ ಹೊದಿಕೆ

ಭಾರತದ ಚಾವಣಿ ಸೌರಶಕ್ತಿ ವಲಯ ಒಂದೇ ವರ್ಷದಲ್ಲಿ 4.59 ಜಿಡಬ್ಲ್ಯು ಹೊಸ ಸಾಮರ್ಥ್ಯದ ಸ್ಥಾಪನೆಯೊಂದಿಗೆ 53% ಹೆಚ್ಚಳವಾಗಿದೆ. 2024ರಲ್ಲಷ್ಟೇ ಪ್ರಾರಂಭಿಸಿದ ಪಿಎಂ ಸೂರ್ಯ ಘರ್: ಮುಫ್ತ್ ಬಿಜಿಲಿ ಯೋಜನೆ 10 ತಿಂಗಳೊಳಗೆ 7 ಲಕ್ಷ ಸೌರ ಚಾವಣಿಯ ಅಮೋಘ ಸಾಧನೆಗೈದಿದ್ದು, 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಇದರ ಗುರಿ ಹಾಗೂ ಪಿಎಂ-ಕುಸುಮ್‌ ಯೋಜನೆ ಮೂಲಕ 8.5 ಲಕ್ಷಕ್ಕೂ ಹೆಚ್ಚು ಹೆಚ್ಚು ರೈತರ ಕೃಷಿ ಪಂಪ್‌ಸೆಟ್‌ಗಳ ಸೌರೀಕರಣ ಯುರೋಪಿಯನ್ನರ ಮನ ಗೆದ್ದಿದೆ.

ವಿಷನ್ 2047 (ವಿಕಸಿತ್‌ ಭಾರತ್) ಗುರಿಗೆ ಬೆರಗಾದ ಇಯು

ಭಾರತದ ನವೀಕರಿಸಬಹುದಾದ ಇಂಧನದಲ್ಲಿ 500 ಜಿಡಬ್ಲ್ಯು ಪಳೆಯುಳಿಕೆಯೇತರ ಶಕ್ತಿ ಸಾಮರ್ಥ್ಯ (ಶೇ.50), 1800 ಜಿಡಬ್ಲ್ಯು ಸ್ಥಾಪಿಸಲಾದ ಪಳೆಯುಳಿಕೆಯೇತರ ಸಾಮರ್ಥ್ಯ(ಶೇ.77) ಪಾಲಿದೆ. ಇದು ಒಟ್ಟು ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು 1 ಬಿಲಿಯನ್ ಕಡಿತಗೊಳಿಸಲಿದೆ. 2070ರ ವೇಳೆಗೆ ಭಾರತ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯ ರಾಷ್ಟವಾಗಲಿದೆ ಎಂಬುದು ಯುರೋಪಿಯನ್ ಒಕ್ಕೂಟದವರಿಗೆ ಮನದಟ್ಟಾಯಿತು.

ಹಸಿರು ಹೈಡ್ರೋಜನ್ ಜನಕ ಭಾರತ

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಸ್ಥಾಪನೆ ಮೂಲಕ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಸಾಧಿಸಿರುವುದನ್ನು ಶ್ಲಾಘಿಸಿತು ಯುರೋಪಿಯನ್ ಆಯೋಗ. ವರ್ಷಕ್ಕೆ 4,12,000 ಟನ್‌ಗಳ ಒಟ್ಟು ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯ ಮತ್ತು ಈಗಾಗಲೇ ಸುಮಾರು €2.29 ಬಿಲಿಯನ್ ಹಸಿರು ಹೈಡ್ರೋಜನ್ ಉತ್ಪಾದನೆ ಹಾಗೂ ಭಾರತ ವಿಶ್ವದ ಮೊದಲ ಹಸಿರು ಉಕ್ಕಿನ ವರ್ಗೀಕರಣ ಪ್ರಾರಂಭಿಸಿದೆ ಎಂಬ ಮಾಹಿತಿ ಅರಿತು ಪುಳಕಗೊಂಡಿತು.

ಒಟ್ಟಾರೆ, ಈ ಐತಿಹಾಸಿಕ ಭೇಟಿ ಭಾರತ ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳ ಸಂಬಂಧದಲ್ಲಿ ಒಂದು ಹೊಸ ಅಧ್ಯಾಯ ಆರಂಭಿಸಿದೆ.