ಸಾರಾಂಶ
ಬೆಂಗಳೂರು : ಗ್ರಾಮ ಪಂಚಾಯಿತಿ ನೌಕರರಿಗೆ ₹31,000 ಕನಿಷ್ಠ ವೇತನ ಹಾಗೂ ₹6,000 ಪಿಂಚಣಿ ನಿಗದಿಪಡಿಸಬೇಕು ಎಂಬುದು ಸೇರಿ ವಿವಿಧ 23 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಹಗಲು-ರಾತ್ರಿ ಧರಣಿ’ ಆರಂಭವಾಗಿದೆ.
ಸಿಐಟಿಯು ಸಂಯೋಜಿತ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಸಾವಿರಾರು ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪಾಲ್ಗೊಂಡಿದ್ದು, ಇದರಿಂದ ಪಂಚಾಯಿತಿ ಕೆಲಸಗಳು ವಿಳಂಬವಾದಲ್ಲಿ ಅದಕ್ಕೆ ಸರ್ಕಾರವೇ ಹೊಣೆ ಎಂದು ಪ್ರತಿಭಟನಕಾರರು ಹೇಳಿದರು.
ಸಂಘಟನೆಯ ಅಧ್ಯಕ್ಷ ಎಂ.ಬಿ.ನಾಡಗೌಡ ಮಾತನಾಡಿ, ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳೀಯವಾಗಿ ನೇಮಕಗೊಂಡ ಕ್ಲರ್ಕ್, ಜವಾನ, ಸ್ವಚ್ಛತಾಗಾರ, ನೀರುಗಂಟಿ, ಡಾಟಾ ಆಪರೇಟರ್ಸ್, ಚಾಲಕರು ಸೇರಿ 48ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. 11ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಅನಧಿಕೃತವಾಗಿ ದುಡಿಯುತ್ತಿದ್ದಾರೆ. ಇವರು ₹11ಸಾವಿರ - ₹15ಸಾವಿರದವರೆಗೆ ಕನಿಷ್ಠ ಸಂಬಳ ಪಡೆಯುತ್ತಿದ್ದು, ಬೆಲೆ ಏರಿಕೆಯಿಂದ ಜೀವನ ಕಷ್ಟವಾಗಿದೆ. ಕಳೆದ ವರ್ಷವೂ ಅನಿರ್ದಿಷ್ಟಾವಧಿ ಧರಣಿ ಬಳಿಕ ಕಲಬುರಗಿ ಚಲೋ ಹೋರಾಟ ನಡೆಸಿದ್ದರೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳೇನು?: ಗ್ರಾ.ಪಂ ನೌಕರರ ವೇತನವನ್ನು ಕನಿಷ್ಠ ₹31000 ನಿಗದಿಪಡಿಸಬೇಕು. ಮಧ್ಯಂತರ ಪರಿಹಾರವಾಗಿ ಪ್ರತಿ ತಿಂಗಳು ₹3000 ಹೆಚ್ಚುವರಿ ನೀಡಬೇಕು. ನೌಕರರು ನಿವೃತ್ತರಾದರೆ ಅಥವಾ ಮೃತಪಟ್ಟಲ್ಲಿ ಅವರಿಗೆ ಪ್ರತಿ ತಿಂಗಳು ಕನಿಷ್ಠ ₹6000 ಪಿಂಚಣಿ ಜಾರಿಗೆ ಬರಬೇಕು. ಎಲ್ಲರನ್ನೂ ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕೆಂದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಿರತರು ಒತ್ತಾಯಿಸಿದರು.
ಪ್ರತಿಯೊಂದು ಪಂಚಾಯಿತಿಗೆ ಒಬ್ಬ ಚಾಲಕರನ್ನು ಪರಿಗಣಿಸಿ ₹ 15ಸಾವಿರ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್ಸ್‌ಗಳನ್ನು ನೇಮಕ ಮಾಡಿಕೊಳ್ಳಬೇಕು. ವರ್ಗಾವಣೆಗೆ ಅವಕಾಶ ನೀಡಬೇಕು ಹಾಗೂ ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆ ನಿಗದಿಗೊಳಿಸಬೇಕು ಎಂದರು.
ಐಪಿಡಿ ಸಾಳಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು ಹಾಗೂ 16. ನೌಕರರು ತೀವ್ರವಾದ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಬರಿಸಬೇಕು ಎಂಬುದು ಸೇರಿ ಇತರೆ ಬೇಡಿಕೆ ಈಡೇರಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.