ಸಾರಾಂಶ
ಗ್ರಾಮ ಪಂಚಾಯಿತಿಯನ್ನು ಮಕ್ಕಳ ಸ್ನೇಹಿಯನ್ನಾಗಿಸಲು ಮತ್ತು ಮಕ್ಕಳ ಸಮಸ್ಯೆಯನ್ನು ಸ್ಥಳೀಯವಾಗಿ ಗುರುತಿಸಿ ಪರಿಹಾರ ಕಂಡುಕೊಳ್ಳಲು ಗ್ರಾಪಂ ಮಟ್ಟದಲ್ಲಿ ರಚನೆಯಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಕ್ರಿಯಗೊಳಿಸಬೇಕು.
ಕೊಪ್ಪಳ:
ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳು ಸಕ್ರಿಯಗೊಂಡು ಕಾರ್ಯನಿರ್ವಹಿಸುವುದು ಅವಶ್ಯಕವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.ತಾಲೂಕು ಪಂಚಾಯಿತಿಯಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ವಿವಿಧ ಸಮಿತಿಯ ಸದಸ್ಯರಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಯನ್ನು ಮಕ್ಕಳ ಸ್ನೇಹಿಯನ್ನಾಗಿಸಲು ಮತ್ತು ಮಕ್ಕಳ ಸಮಸ್ಯೆಯನ್ನು ಸ್ಥಳೀಯವಾಗಿ ಗುರುತಿಸಿ ಪರಿಹಾರ ಕಂಡುಕೊಳ್ಳಲು ಗ್ರಾಪಂ ಮಟ್ಟದಲ್ಲಿ ರಚನೆಯಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಕ್ರಿಯಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ತ್ರೈಮಾಸಿಕಕ್ಕೊಮ್ಮೆ ಕಡ್ಡಾಯವಾಗಿ ಸಮಿತಿ ಸಭೆ ಆಯೋಜಿಸಿ, ಮಕ್ಕಳ ಸಮಸ್ಯೆ ಚರ್ಚಿಸಿ, ಪರಿಹಾರ ಕೈಗೊಳ್ಳಬೇಕು. ಒಂದು ವೇಳೆ ಪರಿಹಾರಕ್ಕೆ ಸಾಧ್ಯವಾಗದಿದ್ದಲ್ಲಿ ವರದಿಯನ್ನು ತಾಲೂಕು ಸಮಿತಿಗೆ ನೀಡಬೇಕು ಎಂದರು.ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಗ್ರಾಪಂಗಳ ನಿಧಿಯಲ್ಲಿ ಶೇ. 5ರ ಅನುದಾನವನ್ನು ಇದೇ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಶಾಲೆಯಿಂದ ಮಕ್ಕಳು ಹೊರಗುಳಿಯುತ್ತಿರುವುದು ಕಂಡುಬರುತ್ತಿದ್ದು, ಹೊರಗುಳಿದ ಹಾಗೂ ಬಿಟ್ಟು ಹೋದ ಮಕ್ಕಳೇ ಬಾಲ್ಯವಿವಾಹ, ಬಾಲಕಾರ್ಮಿಕ ಅಥವಾ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಇಲಾಖೆ, ಸ್ಥಳೀಯ ಸಂಸ್ಥೆಗಳು ಮಕ್ಕಳನ್ನು ಮರಳಿ ಶಾಲೆ ದಾಖಲಿಸಲು ಕ್ರಮವಹಿಸಬೇಕು ಎಂದು ಸೂಚಿಸಿದ ಅವರು,ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಮುದಾಯದಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕಿದೆ ಎಂದರು.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ತಹಸೀಲ್ದಾರ್ ವಿಠ್ಠಲ್ ಚೌಗಲಾ, ತಾಪಂ ಇಒ ಅಧಿಕಾರಿ ಗುಂಡಪ್ಪ ತುರಾದಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.